ADVERTISEMENT

ಜನ ಲೋಕಪಾಲ: ಹಜಾರೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2012, 19:30 IST
Last Updated 16 ಮಾರ್ಚ್ 2012, 19:30 IST

ನವದೆಹಲಿ (ಪಿಟಿಐ): ಪ್ರಬಲ ಜನ ಲೋಕಪಾಲ ಮಸೂದೆಯನ್ನು ತರದಿದ್ದರೆ ದೊಡ್ಡ ಪ್ರಮಾಣದಲ್ಲಿ ಪ್ರತಿಭಟನೆಯನ್ನು ಆರಂಭಿಸಬೇಕಾಗುತ್ತದೆ ಎಂದು ಅಣ್ಣಾ ಹಜಾರೆ ಅವರು ಬೆದರಿಕೆ ಹಾಕಿದ್ದಾರೆ.

ಮುಂದಿನ ಲೋಕಸಭೆ ಚುನಾವಣೆಯವರೆಗೂ ಪ್ರಬಲ ಲೋಕಪಾಲ ಮಸೂದೆಗೆ ಪ್ರಚಾರ ಮಾಡಲಾಗುತ್ತದೆ. ಆಗಲೂ ತಮ್ಮ ಬೇಡಿಕೆ ಈಡೇರಿದಿದ್ದರೆ ದೆಹಲಿಯ ರಾಮಲೀಲಾ ಮೈದಾನದಲ್ಲಿ ಧರಣಿ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.

`ಏ ದಿಲ್ ಮಾಂಗೆ  ನೋ ಮೋರ್ ಕರಪ್ಷನ್~ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಹಜಾರೆ, ಈ ಸರ್ಕಾರ ಪ್ರಬಲ ಲೋಕಪಾಲ ಕಾಯ್ದೆ ತರಬೇಕು, ಇಲ್ಲವೆ ಹೋಗಬೇಕು ಎಂದು ಗುಡುಗಿದರು.

ಸಂಸತ್ತಿನಲ್ಲಿ ಪ್ರಬಲ ಲೋಕಪಾಲ ಮಸೂದೆ ಅಂಗೀಕಾರವಾದರೆ ಯುಪಿಎ ಸರ್ಕಾರದ ಅರ್ಧಕ್ಕಿಂತ ಹೆಚ್ಚು ಸಚಿವರು ಜೈಲು ಸೇರಬೇಕಾಗುತ್ತದೆ ಎಂದು ಹೇಳಿದರು.

ಮಾಹಿತಿ ಹಕ್ಕು ಕಾಯ್ದೆಯಲ್ಲಿ ಭ್ರಷ್ಟಾಚಾರದ ಬಗ್ಗೆ ಮಾಹಿತಿ ಪಡೆಯಲು ಅವಕಾಶವಿದ್ದರೂ ಭ್ರಷ್ಟರನ್ನು ಜೈಲಿಗೆ ಕಳುಹಿಸಲು ಸಾಧ್ಯವಿಲ್ಲ. ಆದ್ದರಿಂದ ಪ್ರಬಲ ಲೋಕಪಾಲ ಕಾಯ್ದೆ ಇಂದಿನ ಅಗತ್ಯವಾಗಿದೆ ಎಂದು ಅವರು ಪ್ರತಿಪಾದಿಸಿದರು.

ನಿಮ್ಮ ಮುಂಬೈ ಪ್ರತಿಭಟನೆಗೆ ಜನರ ಸ್ಪಂದನೆ ಅಷ್ಟೊಂದು ಇರಲಿಲ್ಲವಲ್ಲ ಎಂದು ಕೇಳಿದಾಗ, `ಕೆಲವು ಪಟ್ಟಭದ್ರ ಹಿತಾಸಕ್ತಿಗಳು ತಮ್ಮ ತಂಡದಲ್ಲಿ ಒಡಕು ಮೂಡಿಸಲು ಮತ್ತು ಜನರಲ್ಲಿ ತಪ್ಪು ಅಭಿಪ್ರಾಯ ಬರುವಂತೆ ಮಾಡಲು ಯತ್ನಿಸಿದರು~ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.