ADVERTISEMENT

ಜಯಾ ಬದುಕುವ ಬಗ್ಗೆ ಆಶಾವಾದ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2016, 12:52 IST
Last Updated 5 ಡಿಸೆಂಬರ್ 2016, 12:52 IST
ಜಯಾ ಬದುಕುವ ಬಗ್ಗೆ ಆಶಾವಾದ
ಜಯಾ ಬದುಕುವ ಬಗ್ಗೆ ಆಶಾವಾದ   

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಅವರು ನಿಧನರಾಗಿದ್ದಾರೆ ಎಂದು ತಮಿಳು ಸುದ್ದಿವಾಹಿನಿಗಳು ಸುದ್ದಿ ಮಾಡಿದ್ದು, ಈ ಸುದ್ದಿಯನ್ನು ಅಪೋಲೊ ಆಸ್ಪತ್ರೆ ತಳ್ಳಿ ಹಾಕಿದೆ.

ಕೆಲವು ಕ್ಷಣಗಳ ಹಿಂದೆಯಷ್ಟೇ ಜಯಾ ನಿಧನರಾಗಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಆದರೆ ಚಿಕಿತ್ಸೆ ಮುಂದುವರಿದಿದ್ದು ಜಯಾ ಬದುಕುಳಿಯುವ ಆಶಾವಾದವಿದೆ ಎಂದು ವೈದ್ಯರ ತಂಡ ಹೇಳಿದೆ.

ಸೆಪ್ಟೆಂಬರ್ 22 ರಂದು ಜ್ವರ  ಮತ್ತು ನಿರ್ಜಲೀಕರಣದಿಂದ ಬಳಲುತ್ತಿದ್ದ ಜಯಾ ಚೆನ್ನೈ ಅಪೋಲೊ ಆಸ್ಪತ್ರೆಗೆ ದಾಖಲಾಗಿದ್ದ ಜನ ಕಳೆದ 74 ದಿನಗಳ ಕಾಲ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು.

ADVERTISEMENT

ನವೆಂಬರ್ 19ರಂದು ಐಸಿಯುನಿಂದ ವಾರ್ಡ್‍ಗೆ ಶಿಫ್ಟ್ ಆಗಿದ್ದ ಜಯಾ ಸಂಪೂರ್ಣ ಗುಣಮುಖರಾಗಿ ಮನೆಗೆ ಮರಳಲಿದ್ದಾರೆ ಎಂದು ನಿರೀಕ್ಷಿಸುತ್ತಿದ್ದಂತೆ ಭಾನುವಾರ ಸಂಜೆ ತೀವ್ರ ಹೃದಯಸ್ತಂಭನವಾಗಿತ್ತು.

ಇತ್ತೀಚಿನ ದಿನಗಳಲ್ಲಿ 68 ವರ್ಷದ ಜಯಲಲಿತಾ ಅವರ ಆರೋಗ್ಯ ಏರು ಪೇರಾಗುತ್ತಲೇ ಇತ್ತು. ಹೃದಯ ಸ್ತಂಭನಕ್ಕೊಳಗಾಗಿದ್ದ ಜಯಾ ಅವರಿಗೆ ಲಂಡನ್‍ನ ತಜ್ಞ ಡಾ. ರಿಚರ್ಡ್ ಬೀಲೆ ಅವರ ಸಲಹೆಯಂತೆ  ವೈದ್ಯರ ತಂಡ ಚಿಕಿತ್ಸೆ ನೀಡಿತ್ತು.

ನಿನ್ನೆ ರಾತ್ರಿಯಿಂದ ಇವತ್ತು ಮಧ್ಯಾಹ್ನದ ವರೆಗೆ ಅವರ  ಆರೋಗ್ಯ ಸ್ಥಿತಿ ಚಿಂತಾಜನಕವಾಗಿತ್ತು. ಸಂಜೆಯ ಹೊತ್ತಿಗೆ ಚಿಕಿತ್ಸೆಗೆ ಸ್ಪಂದಿಸದೆ ಅವರು ಕೋಮಾಗೆ ಜಾರಿದ್ದರು. 

ಆಸ್ಪತ್ರೆ ಎದುರು ನೆರೆದ ಅಭಿಮಾನಿಗಳ ದಂಡು: ಹಲವು ದಿನಗಳ ಅನಾರೋಗ್ಯದಿಂದ ಚೇತರಿಸಿಕೊಂಡಿದ್ದ ಮುಖ್ಯಮಂತ್ರಿ ಜಯಲಲಿತಾ ಅವರಿಗೆ  ಹೃದಯ ಸ್ತಂಭನ ಸುದ್ದಿ ಹರಡಿದ ಬೆನ್ನಲ್ಲೇ ಅಪೋಲೊ ಆಸ್ಪತ್ರೆಯ ಹೊರಭಾಗದಲ್ಲಿ ಭಾನುವಾರ ರಾತ್ರಿಯಿಂದಲೇ ಭಾರಿ ಸಂಖ್ಯೆಯಲ್ಲಿ ಅಭಿಮಾನಿಗಳು ನೆರಿದ್ದರು . ಗುಂಪು ಗುಂಪಾಗಿ ಆಸ್ಪತ್ರೆ ಮುಂಭಾಗಕ್ಕೆ ಧಾವಿಸಿದ ಜನಸಾಗರದಲ್ಲಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಆಸ್ಪತ್ರೆಯ ಸುತ್ತಮುತ್ತ  ನಿಷೇಧಾಜ್ಞೆ ಹೊರಡಿಸಲಾಗಿತ್ತು.

ಜಯಾ ಅವರ ಆರೋಗ್ಯ ಸ್ಥಿತಿ ಬಗ್ಗೆ ಅರಿಯಲು ಕುತೂಹಲದಿಂದ ಕಾದು ಕುಳಿತಿದ್ದ ಅಭಿಮಾನಿಗಳು ಕಣ್ಣೀರಿಟ್ಟು ಪ್ರಾರ್ಥಿಸುತ್ತಿದ್ದ ದೃಶ್ಯ ಎಲ್ಲೆಡೆ ಕಂಡು ಬರುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.