ADVERTISEMENT

ಜರ್ಮನ್ ಬೇಕರಿ ಸ್ಫೋಟ: ಇಂಡಿಯನ್ ಮುಜಾಹಿದೀನ್ ಕಾರ್ಯಕರ್ತ ತಪ್ಪಿತಸ್ಥ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2013, 10:16 IST
Last Updated 15 ಏಪ್ರಿಲ್ 2013, 10:16 IST

ಪುಣೆ (ಐಎಎನ್‌ಎಸ್): ಜರ್ಮನ್ ಬೇಕರಿ ಸ್ಫೋಟ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಇಂಡಿಯನ್ ಮುಜಾಹಿದೀನ್ (ಐಎಮ್) ಸಂಘಟನೆಯ ಸದಸ್ಯ ಹಿಮಾಯತ್ ಬೇಗ್ ತಪ್ಪಿತಸ್ಥ ಎಂದು ಇಲ್ಲಿನ ಸೆಷನ್ಸ್ ನ್ಯಾಯಾಲಯ ಸೋಮವಾರ ತೀರ್ಪು ನೀಡಿದೆ.

 ಸೆಸೆನ್ಸ್ ನ್ಯಾಯಾಲಯದ ವಿಶೇಷ ನ್ಯಾಯಾಧೀಶ ಎಮ್.ಪಿ. ದೋತೆ ಅವರು ಜರ್ಮನ್ ಬೇಕರಿ ಸ್ಫೋಟ ಪ್ರಕರಣದಲ್ಲಿ ಹಿಮಾಯತ್ ಬೇಗ್ ದೋಷಿಯಾಗಿದ್ದಾನೆ ಎಂದು ತೀರ್ಪು ನೀಡಿದರು. ನ್ಯಾಯಾಧೀಶರು ಶಿಕ್ಷೆಯ ಪ್ರಮಾಣವನ್ನು ಏಪ್ರಿಲ್ 18 ರಂದು ಪ್ರಕಟಿಸಲಿದ್ದಾರೆ.

2010ರ ಫೆಬ್ರುವರಿ13ರಂದು ಕೊರೆಗಾಂವ್ ಪಾರ್ಕ್ ಬಳಿಯಿರುವ ಜರ್ಮನ್ ಬೇಕರಿ ಸಮೀಪ ಸಂಭವಿಸಿದ ಸ್ಫೋಟದಲ್ಲಿ 17 ಜನ ಮೃತರಾಗಿ 64 ಜನರು ಗಾಯಗೊಂಡಿದ್ದರು.

ಘಟನೆ ನಡೆದು ಏಳು ತಿಂಗಳ ಬಳಿಕ ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳದ ಪೊಲೀಸರು ಬೇಗ್ ನನ್ನು  2010ರ ಸೆಪ್ಟೆಂಬರ್‌ನಲ್ಲಿ ಲಾತೂರ್ ಜಿಲ್ಲೆಯ ಉದ್‌ಗಿರ್ ಎಂಬಲ್ಲಿ ಬಂಧಿಸಿದ್ದರು.

ವಿಚಾರಣೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ರಾಜ್ ಠಾಕರೆ ಅವರು ಭಾರತೀಯ ದಂಡ ಸಂಹಿತೆಯ ಕಲಂ 302, 307, 120ಬಿ, 153ಎ, 325 ಮತ್ತು 326ರ ಅಡಿಯಲ್ಲಿ  ಹಾಗೂ ಕೊಲೆ, ಸಂಚು, ಆಸ್ತಿ ನಾಶ ಮತ್ತು   ಇತರ ಗಂಭೀರ ಅಪರಾಧಗಳಿಗಾಗಿ ನ್ಯಾಯಾಲಯವು ಬೇಗ್ ನನ್ನು ತಪ್ಪಿತಸ್ಥನೆಂದು ಘೋಷಿಸಿರುವುದಾಗಿ ತಿಳಿಸಿದರು.

ADVERTISEMENT

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬೇಗ್ ಪರ ವಕೀಲ ಎ.ರೆಹಮಾನ್ ಅವರು, 'ನಾವು ನ್ಯಾಯಾಲಯದ ತೀರ್ಪನ್ನು ಗೌರವಿಸುತ್ತೇವೆ. ತೀರ್ಪಿನ ವಿರುದ್ಧ ಮುಂಬೈ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುತ್ತೇವೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.