ADVERTISEMENT

ಜಾತಿ ವ್ಯವಸ್ಥೆ ಅಪಮಾನ ಸೂಚಕ

​ಪ್ರಜಾವಾಣಿ ವಾರ್ತೆ
Published 11 ಜನವರಿ 2012, 19:30 IST
Last Updated 11 ಜನವರಿ 2012, 19:30 IST

ನವದೆಹಲಿ (ಪಿಟಿಐ): ಜಾತಿ ವ್ಯವಸ್ಥೆಯನ್ನು `ಅಪಮಾನದ ಸೂಚಕ~ ಎಂದು ಅಭಿಪ್ರಾಯಪಟ್ಟಿರುವ ಕೇಂದ್ರ ಸರ್ಕಾರ, ಭಾರತೀಯ ನಾಗರಿಕ ಸೇವೆ ತರಬೇತಿ ಸೇರಿದಂತೆ ಹಲವು ಸ್ತರಗಳಲ್ಲಿ ಮಾನವಹಕ್ಕು ಶಿಕ್ಷಣವನ್ನು ಅಳವಡಿಸಲು ಶಿಫಾರಸು ಮಾಡಿದೆ.

ಕೇಂದ್ರದ ಸಾಮಾಜಿಕ ನ್ಯಾಯ ಇಲಾಖೆ ಸಿದ್ಧಪಡಿಸಿರುವ `12ನೇ ಪಂಚವಾರ್ಷಿಕ ಯೋಜನೆಯ ಕಾರ್ಯ ತಂಡ~  ನೀಡಿರುವ ಈ ವರದಿಯಲ್ಲಿ, ಜಾತಿ ವ್ಯವಸ್ಥೆಯು ಮನಸ್ಸು ಹಾಗೂ ಹೃದಯಗಳನ್ನು ಸಂಕುಚಿತಗೊಳಿಸುತ್ತದೆ ಎಂದು ದಾಖಲಿಸಲಾಗಿದೆ.

ಶಿಕ್ಷಕ ತರಬೇತಿ ಸಂಸ್ಥೆಗಳು, ಐಎಎಸ್, ಐಪಿಎಸ್, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸೇವಾ ತರಬೇತಿ ಸಂಸ್ಥೆಗಳಲ್ಲಿ ಮಾನವ ಹಕ್ಕು ಶಿಕ್ಷಣವನ್ನು ಅಳವಡಿಸಬೇಕು. ಪೂರ್ವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದ ಜವಾಬ್ದಾರಿ ಹೊತ್ತ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಚಿವರು, ಮಾನವ ಹಕ್ಕು ಶಿಕ್ಷಣ ಅಳವಡಿಸುವುದನ್ನು ಗಂಭೀರವಾಗಿ ತೆಗೆದಕೊಳ್ಳಬೇಕು ಎಂದು ವರದಿ ಹೇಳಿದೆ.

ಶಿಕ್ಷಣ ಸಂಸ್ಥೆಗಳಲ್ಲಿ ಅಸ್ಪೃಶ್ಯತೆ ಸಂಪೂರ್ಣ ತೊಡೆದು ಹಾಕುವ ದಿಸೆಯಲ್ಲಿ ಬೋಧಕರ ಸಮೂಹವನ್ನು ಸಂವೇದನಾಶೀಲರಾಗಿಸಲು ಕೇಂದ್ರವು ಸಮಗ್ರ ಆಂದೋಲನ ಹಮ್ಮಿಕೊಳ್ಳಬೇಕು ಎಂದು ವರದಿ ಸಲಹೆ ನೀಡಿದೆ.

`ಜಾತಿ ಎಂಬುದು ಗೌರವ ಸೂಚಕವಲ್ಲ; ಬದಲಾಗಿ ಅದೊಂದು ಅಪಮಾನ ಸೂಚಕ ಎಂಬ ಅರಿವನ್ನು ಮಕ್ಕಳಿಗೆ ಮೂಡಿಸಬೇಕಿದೆ~ ಎಂದು ಕಾರ್ಯ ತಂಡವು ಸಿದ್ಧಪಡಿಸಿರುವ `ಪರಿಶಿಷ್ಟ ಜಾತಿಯ ಸಬಲೀಕರಣ~ ಕುರಿತ ವರದಿಯಲ್ಲಿ ಸ್ಪಷ್ಟಪಡಿಸಲಾಗಿದೆ.

ದೊಡ್ಡ ಕನಸು ಮತ್ತು ಭಾರಿ ನಿರೀಕ್ಷೆಗಳನ್ನು ಹೊಂದಿರುವ ಭಾರತದಂತಹ ಮಹಾನ್ ರಾಷ್ಟ್ರಕ್ಕೆ ವಿಶಾಲ ಮನಸ್ಸು ಹಾಗೂ ಹೃದಯಿಗಳ ಅಗತ್ಯವಿದೆ. ಆದರೆ, ಜಾತಿ ವ್ಯವಸ್ಥೆಯು ಈ ಆಶಯಕ್ಕೆ ತದ್ದಿರುದ್ಧವಾಗಿ ಮನಸ್ಸು ಮತ್ತು ಹೃದಯಗಳನ್ನು ಕಿರಿದುಗೊಳಿಸುತ್ತದೆ ಎಂದು ದಾಖಲಿಸಲಾಗಿದೆ.

ಮಾನವ ವಿರೋಧಿ, ರಾಷ್ಟ್ರ ವಿರೋಧಿ, ಸಂವಿಧಾನ ವಿರೋಧಿಯಾದ ಜಾತಿ ಪದ್ಧತಿ, ಜಾತಿ ನಿಷ್ಠೆ ಮತ್ತು ಜಾತಿ ದೌರ್ಜನ್ಯದಿಂದ ಆಗುವ ಅನಾಹುತಗಳ ಬಗ್ಗೆ ಶಿಕ್ಷಣ ವಲಯದ ಪ್ರತಿ ಹಂತದಲ್ಲೂ ಪಠ್ಯಗಳನ್ನು ಅಳವಡಿಸಬೇಕು ಎಂದು  ಸಮಿತಿ ಶಿಫಾರಸು ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.