ADVERTISEMENT

ಜಾನುವಾರು ಮಾರಾಟ ನಿಷೇಧಕ್ಕೆ ‘ಸುಪ್ರೀಂ’ ತಡೆ

ಪಿಟಿಐ
Published 11 ಜುಲೈ 2017, 20:07 IST
Last Updated 11 ಜುಲೈ 2017, 20:07 IST
ಜಾನುವಾರು ಮಾರಾಟ ನಿಷೇಧಕ್ಕೆ ‘ಸುಪ್ರೀಂ’ ತಡೆ
ಜಾನುವಾರು ಮಾರಾಟ ನಿಷೇಧಕ್ಕೆ ‘ಸುಪ್ರೀಂ’ ತಡೆ   

ನವದೆಹಲಿ : ಮಾರು­ಕಟ್ಟೆ ಯಿಂದ ಹತ್ಯೆಗಾಗಿ ಜಾನುವಾರು ಖರೀದಿ ಮತ್ತು ಮಾರಾಟವನ್ನು ನಿಷೇಧಿಸಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನಿಯಮಕ್ಕೆ ಮದ್ರಾಸ್‌ ಹೈಕೋರ್ಟ್‌ ನೀಡಿರುವ ತಡೆಯಾಜ್ಞೆ ಇಡೀ ದೇಶಕ್ಕೆ ಅನ್ವಯವಾಗುತ್ತದೆ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.
ಹೊಸ ನಿಯಮದ ಅಧಿ­ಸೂಚನೆಯನ್ನು ಮರುಪರಿಶೀಲಿಸಲಾಗುವುದು. ಸಂಬಂಧಪಟ್ಟವರು ಸಲ್ಲಿಸಿರುವ ಆಕ್ಷೇಪಗಳು ಮತ್ತು ಸಲಹೆಗಳನ್ನು ಗಣನೆಗೆ ತೆಗೆದುಕೊಂಡು ಹೊಸ ನಿಯಮಕ್ಕೆ ತಿದ್ದುಪಡಿ ಮಾಡಲಾಗುವುದು ಎಂದು ಸುಪ್ರೀಂ ಕೋರ್ಟ್‌ಗೆ ಕೇಂದ್ರ ತಿಳಿಸಿದೆ.

ಅಧಿಸೂಚನೆಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಅಖಿಲ ಭಾರತ ಜಮಿಯತ್‌ ಉಲ್‌ ಖುರೇಷ್‌ ಕ್ರಿಯಾ ಸಮಿತಿಯು ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಜೆ.ಎಸ್‌. ಖೇಹರ್‌ ಮತ್ತು ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ ಅವರ ಪೀಠ ವಿಲೇವಾರಿ ಮಾಡಿತು.

ತಡೆಯಾಜ್ಞೆ ಜಾರಿಯಲ್ಲಿ ಇರುವುದರಿಂದ ಹೊಸ ನಿಯಮವನ್ನು ಜಾರಿಗೆ ತರಲು ಕೇಂದ್ರ ಮುಂದಾಗುವುದಿಲ್ಲ. ಅದಲ್ಲದೆ, ಜಾನುವಾರು ಮಾರುಕಟ್ಟೆ
ಗಳನ್ನು ರಾಜ್ಯ ಸರ್ಕಾರಗಳು ಈ ನಿಯಮದ ಅಡಿ ಗುರುತಿಸಿದರೆ ಮಾತ್ರ ಹೊಸ ನಿಯಮ ಅನ್ವಯ ಆಗುತ್ತದೆ ಎಂದು ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಪಿ.ಎಸ್‌. ನರಸಿಂಹ ಹೇಳಿದರು.
ಮದ್ರಾಸ್‌ ಹೈಕೋರ್ಟ್‌ನ ತಡೆಯಾಜ್ಞೆ ತೆರವುಗೊಳಿಸಲು ಕೇಂದ್ರ ಪ್ರಯತ್ನಿಸುತ್ತಿಲ್ಲ ಎಂದೂ ಅವರು ತಿಳಿಸಿದರು.

ADVERTISEMENT

ನಿಯಮಕ್ಕೆ ವಿರೋಧ
* ಜಾನುವಾರು ಮಾರುಕಟ್ಟೆಗಳು ಇರುವುದು ಕೃಷಿ ಉದ್ದೇಶದ ಮಾರಾಟ ಮತ್ತು ಖರೀದಿಗೆ ಮಾತ್ರ. ಹಾಗಾಗಿ ಅಲ್ಲಿ ಹತ್ಯೆಗಾಗಿ ಜಾನುವಾರು ಮಾರಾಟ ಮತ್ತು ಖರೀದಿಗೆ ಅವಕಾಶ ಇಲ್ಲ ಎಂದು ಮೇ 23ರ ಅಧಿಸೂಚನೆಯಲ್ಲಿ ಕೇಂದ್ರ ಹೇಳಿತ್ತು
* ಹತ್ಯೆಗಾಗಿ ರೈತರಿಂದ ನೇರವಾಗಿ ಜಾನುವಾರು ಖರೀದಿಸುವುದರ ಮೇಲೆ ನಿಷೇಧ ಇಲ್ಲ
* ಹತ್ಯೆಯ ಉದ್ದೇಶದಿಂದ ಜಾನುವಾರು ಮಾರಾಟಕ್ಕೆ ನಿಷೇಧ  ಹೇರಿ ರುವುದು ಅಸಾಂವಿಧಾನಿಕ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿತ್ತು

ಜನರ (ರೈತರು ಮತ್ತು ಜಾನುವಾರು ವ್ಯಾಪಾರಿಗಳು) ಜೀವನೋಪಾಯವನ್ನು ಅಸ್ಥಿರತೆಗೆ ಒಡ್ಡುವುದು ಸರಿಯಲ್ಲ.
ಸುಪ್ರೀಂ ಕೋರ್ಟ್‌ ಅಭಿಪ್ರಾಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.