ADVERTISEMENT

ಜಾಮೀನು: ಇಂದು ವಿಚಾರಣೆ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2011, 19:30 IST
Last Updated 6 ಸೆಪ್ಟೆಂಬರ್ 2011, 19:30 IST

ಹೈದರಾಬಾದ್: ಸೋಮವಾರ ಬಂಧನಕ್ಕೆ ಒಳಗಾದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಮತ್ತು ಒಎಂಸಿ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ ರೆಡ್ಡಿ ಅವರ ಪರ ವಕೀಲರು ಮಂಗಳವಾರ ಸಿಬಿಐ  ವಿಶೇಷ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಿದರು.

ಜಾಮೀನು ಅರ್ಜಿಯು ಬುಧವಾರ ವಿಚಾರಣೆಗೆ ಬರುವ ಸಾಧ್ಯತೆ ಇದೆ ಎಂದು ನ್ಯಾಯಾಲಯದ ಮೂಲಗಳು ತಿಳಿಸಿವೆ.ಜನಾರ್ದನ  ರೆಡ್ಡಿ ಅವರು ಚಂಚಲ್‌ಗುಡ ಸೆಂಟ್ರಲ್ ಜೈಲಿನಲ್ಲಿ ಸಾಮಾನ್ಯ ಕೈದಿಯಂತೆ ದಿನಕಳೆದರು.

ಕರ್ನಾಟಕ ಮೇಲ್ಮನೆ ಸದಸ್ಯರಾಗಿರುವ ಜನಾರ್ದನ ರೆಡ್ಡಿ ಬಂಧನದ ಬಗ್ಗೆ  ವಿಧಾನಪರಿಷತ್ತಿನ ಸಭಾಪತಿಗೆ ಕೋರ್ಟ್ ಮಂಗಳವಾರ ಮಾಹಿತಿ ನೀಡಿದೆ ಎಂದೂ ಮೂಲಗಳು ಹೇಳಿವೆ.ಈ ಮಧ್ಯೆ ಸಿಬಿಐ ತನ್ನ ವರದಿಯಲ್ಲಿ ಜನಾರ್ದನ ರೆಡ್ಡಿ ವಿರುದ್ಧ ಮಾಡಿರುವ ಆರೋಪಗಳಿಗೆ ಪ್ರತಿಯಾಗಿ ಅರ್ಜಿ ಸಲ್ಲಿಸುವ ಬಗ್ಗೆಯೂ ರೆಡ್ಡಿ ಪರ ವಕೀಲರು ಸಿದ್ಧತೆ ನಡೆಸಿದ್ದಾರೆ.

ಹಿಂದೆ ಯಡಿಯೂರಪ್ಪನವರ ಸರ್ಕಾರದಲ್ಲಿ ಪ್ರಭಾವಿ ಸಚಿವರೆನಿಸಿದ್ದ ಜನಾರ್ದನ ರೆಡ್ಡಿ ಸೆರೆಮನೆಯಲ್ಲಿ ಕೈದಿ ನಂ. 697. ಜೈಲಿನಲ್ಲಿ ಅವರಿಗೆ ದೊರೆತಿರುವ ಗುರುತು ಸಂಖ್ಯೆ ಇದು. `ಕರ್ನಾಟಕದ ಮಾಜಿ ಸಚಿವ ಮತ್ತು ಅವರ ಸಹಚರನನ್ನು ಜೈಲಿನಲ್ಲಿರುವ ಇತರ ವಿಚಾರಣಾಧೀನ ಕೈದಿಯಂತೆಯೇ ನೋಡಿಕೊಳ್ಳಬೇಕು ಎಂದು ಕೋರ್ಟ್ ನಮಗೆ ಸೂಚನೆ ನೀಡಿದೆ. ವಿಶೇಷ ರೀತಿಯಲ್ಲಿ ಅವರನ್ನು ನೋಡಿಕೊಳ್ಳಬೇಕೆಂಬ ಬಗ್ಗೆ ನಿರ್ದಿಷ್ಟವಾಗಿ ಏನನ್ನೂ  ಹೇಳಿಲ್ಲ~  ಎಂದು ಜೈಲಿನ ಅಧಿಕಾರಿ ಯೊಬ್ಬರು ತಿಳಿಸಿದ್ದಾರೆ.

ಅದರಂತೆ ಜನಾರ್ದನ ರೆಡ್ಡಿ ಮತ್ತು ಶ್ರೀನಿವಾಸ ರೆಡ್ಡಿ ಅವರಿಬ್ಬರೂ ವಿಚಾರಣಾಧೀನ ಕೈದಿಗಳ ಕೋಣೆಯಲ್ಲೇ ಸಾಮಾನ್ಯರಂತೆ ದಿನಗಳೆದಿದ್ದಾರೆ. ಈ ಇಬ್ಬರಿಗೂ ಜಾಮೀನು ಒದಗಿಸುವುದು ಕಾನೂನು ತಜ್ಞರ ತಂಡಕ್ಕೆ ಕಠಿಣ ಕೆಲಸವಾಗಿದೆ.

ಕೇವಲ ಬೆಳಗಿನ ಉಪಹಾರಕ್ಕಾಗಿ ಬಳ್ಳಾರಿಯಿಂದ ಬೆಂಗಳೂರಿಗೆ ಹೆಲಿಕಾಪ್ಟರ್‌ನಲ್ಲಿ ಹಾರಿ ಬರುತ್ತಿದ್ದರೆನ್ನಲಾದ ಗಣಿ ದೊರೆ ಮಂಗಳವಾರ ಬೆಳಿಗ್ಗೆ ಕಿಚಡಿಯಷ್ಟೆ (ಅನ್ನ, ಬೇಳೆ, ಕೆಲ ತರಕಾರಿಯ ಮಿಶ್ರಣ) ತಿಂದು ತಣಿಯಬೇಕಾಯಿತು.

ಮಧ್ಯಾಹ್ನದ ಊಟಕ್ಕೆ ಎಲ್ಲಾ ವಿಚಾರಣಾಧೀನ ಕೈದಿಗಳಿಗೆ ನೀಡುವ ಪ್ರಮಾಣದ ಊಟವನ್ನೇ ನೀಡಲಾಯಿತು. ಅಂದರೆ 600 ಗ್ರಾಂ ಅಕ್ಕಿ, 100 ಗ್ರಾಂ ಬೇಳೆ ಮತ್ತು 200 ಗ್ರಾಂ ತರಕಾರಿಯ ಪಲ್ಯ. ಇತರ ವಿಚಾರಣಾಧೀನ ಕೈದಿಗಳಂತೆಯೇ ಜನಾರ್ದನ ರೆಡ್ಡಿ ಊಟಕ್ಕಾಗಿ ಸರತಿಯಲ್ಲಿ ನಿಂತರು, ತಮ್ಮ ತಟ್ಟೆಯನ್ನು ತೊಳೆದರು. ಅವರು ತಮ್ಮ ಉಡುಪನ್ನು ಈಗ  ತಾವೇ ಸ್ವಚ್ಛಗೊಳಿಸಿಕೊಳ್ಳಬೇಕು ಅಲ್ಲದೆ ಕೋಣೆಯ ಸುತ್ತಲಿನ ಕಸವನ್ನೂ ಗುಡಿಸಿಕೊಳ್ಳಬೇಕು.

`ವಿಚಾರಣಾಧೀನ ಕೈದಿಗಳು ಬಂಧನದ ಅವಧಿಯಲ್ಲಿ ತೊಟ್ಟಿದ್ದ ಉಡುಗೆಯನ್ನೇ ಧರಿಸಿರಲು ಅವಕಾಶವಿದೆ. ಮುಂದಿನ ದಿನಗಳಲ್ಲಿ ಕ್ರಮೇಣ ಅವರು ಜೈಲಿನ ಸಮವಸ್ತ್ರ ತೊಡುವಂತೆ ಹೇಳುವ ಸಾಧ್ಯತೆ ಇದೆ~ ಎಂದೂ ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ.

ಆಂಧ್ರಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಡೆಸಿದ ಆರೋಪ ಮೇಲೆ ಜನಾರ್ದನ ರೆಡ್ಡಿ ಮತ್ತು ಶ್ರೀನಿವಾಸ ರೆಡ್ಡಿ ಅವರನ್ನು ಸಿಬಿಐ ಸೋಮವಾರ ಬೆಳಿಗ್ಗೆ ಬಳ್ಳಾರಿಯಲ್ಲಿ ಅವರನ್ನು ಬಂಧಿಸಿತ್ತು. ಈ ತಿಂಗಳ 19ರವರೆಗೆ ಅವರನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.

ಈ ಇಬ್ಬರೂ ಮಲಗುವ ಮೊದಲು ರಾತ್ರಿ ದೀರ್ಘ ಅವಧಿವರೆಗೆ ಮಾತನಾಡುತ್ತಿದ್ದರು ಎಂದು ಜೈಲಿನ ಅಧೀಕ್ಷಕ ಕೇಶವ ನಾಯ್ಡು ಹೇಳಿದ್ದಾರೆ.ಸತ್ಯಂ ಕಂಪ್ಯೂಟರ್‌ನ ಕಳಂಕಿತ ಮುಖ್ಯಸ್ಥ ಬಿ. ರಾಮಲಿಂಗರಾಜು ಮತ್ತು ಮಾವೊಮಾದಿ ನಾಯಕ ಕೋಬಾದ್ ಗಾಂಧಿ ಅವರೂ ಇದೇ ಜೈಲಿನಲ್ಲಿದ್ದಾರೆ.

ಕೋಬಾದ್ ಗಾಂಧಿ ಸದ್ಯಕ್ಕೆ ಕೆಲ ದಿನಗಳವರೆಗೆ ಮಾತ್ರ ಇಲ್ಲಿದ್ದರೆ ರಾಮಲಿಂಗರಾಜು ವಿಶೇಷ ದರ್ಜೆ ಕೈದಿಯ ಸ್ಥಾನಮಾನ ಅನುಭವಿಸುತ್ತಿದ್ದಾರೆ. ಅವರಿಗೆ ಇನ್ನೂ ಉತ್ತಮ ಆಹಾರ ನೀಡಲಾಗುತ್ತಿದೆ ಮತ್ತು ಪ್ರತ್ಯೇಕ ಕೋಣೆಯ ವ್ಯವಸ್ಥೆ ಮಾಡಲಾಗಿದೆ.

ಸತ್ಯಂ ಹಗರಣದಲ್ಲಿ ರಾಜು ಮತ್ತು ಇತರ ಎಂಟು ಮಂದಿ ಆರೋಪಿಗಳು ಸೇರಿದಂತೆ ಒಟ್ಟು 700 ಕೈದಿಗಳು ಈ ಜೈಲಿನಲ್ಲಿದ್ದಾರೆ.2007ರಲ್ಲಿ ಬಾಲಿವುಡ್ ನಟಿ ಮೋನಿಕಾ ಬೇಡಿ ಇಲ್ಲಿ ಕೆಲ ತಿಂಗಳವರೆಗೆ ಕೈದಿ ಆಗಿದ್ದಾಗ ಈ ವಿಚಾರಣಾಧೀನ ಕಾರಾಗೃಹ ಜನಪ್ರಿಯತೆ ಗಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.