ADVERTISEMENT

ಜಾರವ ಮಹಿಳೆಯರ ಅರೆನಗ್ನ ನೃತ್ಯ: ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 19 ಜನವರಿ 2012, 19:30 IST
Last Updated 19 ಜನವರಿ 2012, 19:30 IST

ಪೋರ್ಟ್‌ಬ್ಲೇರ್ (ಪಿಟಿಐ): ಪ್ರವಾಸಿಗರ ಮುಂದೆ ಅರೆನಗ್ನರಾಗಿ ಜಾರವ ಬುಡಕಟ್ಟು ಜನಾಂಗದ ಮಹಿಳೆಯರು ನರ್ತಿಸಿದ ದೃಶ್ಯಗಳು ವಿಡಿಯೊಗಳಲ್ಲಿ ಪ್ರಸಾರವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂಡಮಾನ್-ನಿಕೋಬಾರ್ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಉಡುಗೊರೆ ವಸ್ತುಗಳ ಅಂಗಡಿಯೊಂದರ ಮಾಲೀಕ ರಾಜೇಶ್ ವ್ಯಾಸ್ ಮತ್ತು ಟ್ಯಾಕ್ಸಿ ಚಾಲಕ ಗುಡ್ಡು ಎನ್ನುವವರು ಬಂಧಿತರು. ಆರೋಪಿಗಳಿಬ್ಬರೂ ಪ್ರವಾಸಿಗಳಿಗೆ ಸಂರಕ್ಷಿತ ಜಾರವ ಬುಡಕಟ್ಟು ಪ್ರದೇಶಕ್ಕೆ ಅಕ್ರಮವಾಗಿ ಪ್ರವಾಸ ಏರ್ಪಡಿಸಲು ಸಹಕರಿಸಿರುವುದು ಮತ್ತು ವಿಡಿಯೊ ಚಿತ್ರೀಕರಣಕ್ಕೆ ಸಹಕರಿಸಿರುವುದು ತಿಳಿದು ಬಂದಿರುವುದಾಗಿ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಅಂಡಮಾನ್ ಟ್ಯಾಂಕ್ ರಸ್ತೆಯ ಮಿಡ್ಲ್ ಸ್ಟಾರೆಂಟ್ ಪ್ರದೇಶಕ್ಕೆ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದು, ಈ ಮಾರ್ಗದಲ್ಲಿಯೇ ಜಾರವ ಬುಡಕಟ್ಟು ಪ್ರದೇಶವೂ ಬರುತ್ತಿದ್ದು, ಮಾರ್ಗಮಧ್ಯೆ ಅಕ್ರಮವಾಗಿ ಬುಡಕಟ್ಟು ಮಹಿಳೆಯರ ಅರೆನಗ್ನ ನೃತ್ಯದ ಚಿತ್ರಗಳನ್ನು ವಿಡಿಯೊ ಮಾಡಿಕೊಳ್ಳುತ್ತಿದ್ದರು ಎಂದು ತನಿಖೆಯಿಂದ ತಿಳಿದು ಬಂದಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಪೊಲೀಸರಿಗೆ ಹಣ ನೀಡಬೇಕು ಎಂದು ಹೇಳಿ ಆರೋಪಿಗಳಿಬ್ಬರೂ ಪ್ರವಾಸಿಗಳಿಂದ ಅಕ್ರಮವಾಗಿ ಹಣ ವಸೂಲಿ ಮಾಡುತ್ತಿದ್ದರು ಎನ್ನಲಾಗಿದೆ.  ಪ್ರವಾಸ ಏರ್ಪಡಿಸುತ್ತಿದ್ದ ಹಲವಾರು ಏಜೆನ್ಸಿಗಳ ಕಾರ್ಯಕರ್ತರನ್ನೂ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.