
ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಗೆ ಸಂಬಂಧಿಸಿದ ನಾಲ್ಕು ಪೂರಕ ಕರಡು ಮಸೂದೆಗಳಿಗೆ ಕೇಂದ್ರ ಸಚಿವ ಸಂಪುಟ ಸೋಮವಾರ ಅನುಮೋದನೆ ನೀಡಿದೆ.
ಕೇಂದ್ರ ಸರ್ಕಾರದ ಜಿಎಸ್‌ಟಿ, ಸಮಗ್ರ ಜಿಎಸ್‌ಟಿ, ಕೇಂದ್ರಾಡಳಿತ ಪ್ರದೇಶ ಜಿಎಸ್‌ಟಿ ಮತ್ತು ರಾಜ್ಯಗಳಿಗೆ ಪರಿಹಾರ ನೀಡುವ ಕರಡು ಮಸೂದೆಗಳಿಗೆ ಈಗ ಸಂಪುಟದ ಒಪ್ಪಿಗೆ ದೊರೆತಿರುವುದರಿಂದ, ಹೊಸ ತೆರಿಗೆ ವ್ಯವಸ್ಥೆ ಜಾರಿ ನಿಟ್ಟಿನಲ್ಲಿ ಇನ್ನೊಂದು ಪ್ರಮುಖ ಹೆಜ್ಜೆ ಇರಿಸಿದಂತಾಗಿದೆ.
ದೇಶದ ಅತಿದೊಡ್ಡ ತೆರಿಗೆ ಸುಧಾರಣಾ ಕ್ರಮವನ್ನು ಜುಲೈ 1ರಿಂದ ಜಾರಿಗೆ ತರಲು ಸರ್ಕಾರ ಬದ್ಧವಾಗಿದೆ ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಕಳೆದ ವಾರ ನಡೆದಿದ್ದ ಜಿಎಸ್‌ಟಿ ಮಂಡಳಿಯ 12ನೇ ಸಭೆಯಲ್ಲಿ ಈ ನಾಲ್ಕೂ ಪೂರಕ ಮಸೂದೆಗಳನ್ನು ಚರ್ಚಿಸಿ ಅನುಮೋದಿಸಲಾಗಿತ್ತು.
‘ಸದ್ಯಕ್ಕೆ ನಡೆಯುತ್ತಿರುವ ಸಂಸತ್ತಿನ ಬಜೆಟ್ ಅಧಿವೇಶನದಲ್ಲಿಯೇ ಈ ನಾಲ್ಕೂ ಕರಡು ಮಸೂದೆಗಳನ್ನು ಮಂಡಿಸಿ ಅನುಮೋದನೆ ಪಡೆಯಲು ಸರ್ಕಾರ ಉದ್ದೇಶಿಸಿದೆ’ ಎಂದು ಸಚಿವ ಸಂತೋಷ್ ಕುಮಾರ್ ಗಂಗ್ವಾರ್ ಹೇಳಿದ್ದಾರೆ.
‘ಸಿಜಿಎಸ್‌ಟಿ’ಯು, ರಾಜ್ಯದ ಒಳಗೆ ನಡೆಯುವ ಸರಕು ಮತ್ತು ಸೇವೆಗಳ ಪೂರೈಕೆ ಮೇಲೆ ಕೇಂದ್ರ ಸರ್ಕಾರ ವಿಧಿಸುವ ಮತ್ತು ವಸೂಲಿ ಮಾಡುವ ತೆರಿಗೆಯ ನಿಯಮಾವಳಿಗೆ ಸಂಬಂಧಿಸಿದೆ.
ಸರಕುಗಳ ಅಂತರರಾಜ್ಯ ಪೂರೈಕೆಗೆ ಸಮಗ್ರ ಜಿಎಸ್‌ಟಿ (ಐಜಿಎಸ್‌ಟಿ), ‘ಯುಟಿಜಿಎಸ್‌ಟಿ’ಯು ಕೇಂದ್ರಾಡಳಿತ ಪ್ರದೇಶಗಳಿಗೆ ಅನ್ವಯವಾಗಲಿದೆ. ಪರಿಹಾರ ಮಸೂದೆಯು, ಜಿಎಸ್‌ಟಿ ಜಾರಿಯಿಂದ ರಾಜ್ಯಗಳಿಗೆ ಆಗುವ ನಷ್ಟವನ್ನು 5 ವರ್ಷಗಳವರೆಗೆ ತುಂಬಿಕೊಡುವುದಕ್ಕೆ ಸಂಬಂಧಿಸಿದೆ.
‘ಒಂದು ದೇಶ, ಒಂದು ತೆರಿಗೆ’ ವ್ಯವಸ್ಥೆ ಜಾರಿಗೆ ತರಲು ಈಗ ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳು ಪೂರಕ ಕರಡು ಮಸೂದೆಗಳನ್ನು ಅಂಗೀಕರಿಸುವುದೊಂದೇ ಬಾಕಿ ಉಳಿದಂತಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.