ADVERTISEMENT

ಜೆಇಇ: ಹರಿಯಾಣದ ಸರ್ವೇಶ್‌ ಟಾಪರ್‌

ಪಿಟಿಐ
Published 11 ಜೂನ್ 2017, 19:56 IST
Last Updated 11 ಜೂನ್ 2017, 19:56 IST
ಸರ್ವೇಶ್‌
ಸರ್ವೇಶ್‌   

ನವದೆಹಲಿ: ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ), ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ (ಎನ್‌ಐಟಿ), ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (ಐಐಐಟಿ) ಸೇರಿದಂತೆ ದೇಶದ ಪ್ರಸಿದ್ಧ ಉನ್ನತ ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಕಲ್ಪಿಸಲು ನಡೆಸಿದ ಜೆಇಇ (ಅಡ್ವಾನ್ಸ್ಡ್) ಫಲಿತಾಂಶ ಭಾನುವಾರ ಪ್ರಕಟವಾಗಿದ್ದು, ಹರಿಯಾಣದ ಪಂಚಕುಲದ ಸರ್ವೇಶ್‌ ಮೆಹ್ತಾನಿ ಮೊದಲ ರ‍್ಯಾಂಕ್‌ಗಳಿಸಿದ್ದಾರೆ.

ದೆಹಲಿಯ ಅನನ್ಯಾ ಅಗರ್‌ವಾಲ್‌ 3ನೇ ರ‍್ಯಾಂಕ್‌ ಪಡೆದಿದ್ದಾರೆ. ಜೆಇಇ ಮುಖ್ಯ ಪರೀಕ್ಷೆಯಲ್ಲಿ ಸರ್ವೇಶ್ 55ನೇ ರ‍್ಯಾಂಕ್‌ ಪಡೆದಿದ್ದರು.
ಹರಿಯಾಣದ ಮಹೇಂದ್ರಗಡದ  ಸೂರಜ್‌ ಯಾದವ್ 5ನೇ,  ಚಂಡೀಗಡದ ರಚಿತ್ ಬನ್ಸಾಲ್ 9ನೇ, ಭೋಪಾಲ್‌ನ ತುಷಾರ್‌ ಅಗರ್‌ವಾಲ್‌  13ನೇ ರ‍್ಯಾಂಕ್‌ ಗಳಿಸಿದ್ದಾರೆ.

ಜೆಇಇ ಮುಖ್ಯ ಪರೀಕ್ಷೆಯಲ್ಲಿ ಪ್ರಥಮ ರ‍್ಯಾಂಕ್‌ ಪಡೆದಿದ್ದ ಉದಯ್‌ ಪುರದ ಕಲ್ಪಿತ್‌ ವೀರವಾಲ್‌ ಅವರು ಈ ಪರೀಕ್ಷೆಯಲ್ಲಿ 109ನೇ ರ‍್ಯಾಂಕ್‌ ಪಡೆದಿದ್ದಾರೆ. ಅವರು ಪರಿಶಿಷ್ಟ ಜಾತಿ ವಿಭಾಗದಲ್ಲಿ ಮೊದಲಿಗರಾಗಿದ್ದಾರೆ.

ದೇಶದಾದ್ಯಂತ 1.7 ಲಕ್ಷ ಅಭ್ಯರ್ಥಿಗಳು ಜೆಇಇ ಅಡ್ವಾನ್ಸ್ಡ್ ಪರೀಕ್ಷೆಗೆ ಹಾಜರಾಗಿದ್ದರು. ಜೆಇಇ ಮುಖ್ಯ ಪರೀಕ್ಷೆಯಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳು ಈ ಪರೀಕ್ಷೆ ಬರೆಯಲು ಅರ್ಹತೆ ಪಡೆಯುತ್ತಾರೆ.

‘ಸೂಪರ್‌ 30’ ಎಲ್ಲ ಅಭ್ಯರ್ಥಿಗಳು ಐಐಟಿಗೆ ಅರ್ಹತೆ: ಖ್ಯಾತ ಗಣಿತ ತಜ್ಞ ಆನಂದ್‌ ಕುಮಾರ್‌ ಪಟ್ನಾದಲ್ಲಿ ನಡೆಸುತ್ತಿರುವ ‘ಸೂಪರ್‌ 30 ಇನ್‌ಸ್ಟಿಟ್ಯೂಟ್‌’ನಲ್ಲಿ ತರಬೇತಿ ಪಡೆದ 30 ಅಭ್ಯರ್ಥಿಗಳು ಈ ಬಾರಿಯ ಜೆಇಇ ಅಡ್ವಾನ್ಸ್ಡ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ.

ಈ ಫಲಿತಾಂಶದಿಂದ ಸಂತಸದಲ್ಲಿರುವ ಆನಂದ್‌ ಕುಮಾರ್‌, ‘ಸೂಪರ್‌ 30’ ಅನ್ನು ದೇಶದಾದ್ಯಂತ ವಿಸ್ತರಿಸುವ ಕಾಲ ಸನಿಹವಾಗಿದೆ’ ಎಂದಿದ್ದಾರೆ.
ದೇಶದ ವಿವಿಧೆಡೆ ಇರುವ ಬಡ, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರವೇಶ ಪರೀಕ್ಷೆಗಳ ಮೂಲಕ ಆಯ್ಕೆ ಮಾಡುವ ಕುಮಾರ್‌, ಎಲ್ಲ ವಿದ್ಯಾರ್ಥಿಗಳಿಗೂ ಉಚಿತ ಶಿಕ್ಷಣ, ತರಬೇತಿ, ವಸತಿ ಮತ್ತು ಆಹಾರವನ್ನು ಒದಗಿಸುತ್ತಾರೆ.

ಅವರ ‘ಸೂಪರ್‌ 30’ ಸಂಸ್ಥೆಗೀಗ 15 ವರ್ಷ. ಈ ಅವಧಿಯಲ್ಲಿ 396 ಅಭ್ಯರ್ಥಿಗಳನ್ನು ಐಐಟಿಗೆ ಅರ್ಹತೆ ಪಡೆಯುವಂತೆ ಈ ಸಂಸ್ಥೆ ರೂಪಿಸಿದೆ. 15 ವರ್ಷಗಳಿಂದ ಪ್ರತೀ ವರ್ಷ 30ರಂತೆ ಒಟ್ಟು 450 ಅಭ್ಯರ್ಥಿಗಳಿಗೆ ತರಬೇತಿ ನೀಡಿದೆ.

ಕಾರ್ಮಿಕರ ಪುತ್ರ ಆಂಜಿನಪ್ಪಗೆ 91ನೇ ರ‍್ಯಾಂಕ್‌


ಬೆಂಗಳೂರಿನ ‘ತಪಸ್‌’ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆದಿದ್ದ 36 ಅಭ್ಯರ್ಥಿಗಳ ಪೈಕಿ 19 ಅಭ್ಯರ್ಥಿಗಳು ಐಐಟಿಗೆ ಅರ್ಹತೆ ಪಡೆದಿದ್ದಾರೆ.

ADVERTISEMENT

ಬೆಂಗಳೂರಿನ ಎಲೆಕ್ಟ್ರಾನಿಕ್‌ ಸಿಟಿಯ ಚಿಕ್ಕೇನಹಳ್ಳಿ ಕೂಲಿ ಕಾರ್ಮಿಕರೊಬ್ಬರ  ಮಗ ಆಂಜಿನಪ್ಪ (91ನೇ ರ‍್ಯಾಂಕ್‌), ಬಾಗಲಕೋಟೆಯ ಪ್ರೇಮ್‌ ಕುಮಾರ್‌ (213), ಶ್ರೀಧರ್‌ (4428) ರ‍್ಯಾಂಕ್‌ ಪಡೆದಿದ್ದಾರೆ.

ಬೇಸ್‌ನಲ್ಲಿ ತರಬೇತಿ ಪಡೆದ ಎಸ್‌. ಅನಿರುದ್ಧ (131), ನಿನಾದ್‌ ಹುಲಿಗೋಳ್ (217), ಸುಮಂತ್‌ ಆರ್‌. ಹೆಗ್ಡೆ (504) ರ‍್ಯಾಂಕ್‌ಗಳಿಸಿದ್ದಾರೆ.

‘3 ಈಡಿಯಟ್ಸ್‌’ ಸಿನಿಮಾ ಸ್ಫೂರ್ತಿ
‘ಕಾರ್ಟೂನ್‌  ನೋಡುವುದು, ಸಂಗೀತ ಕೇಳುವುದು, ಕಾದಂಬರಿ ಓದುವುದು ಹಾಗೂ  ಬ್ಯಾಡ್ಮಿಂಟನ್‌ ಆಡುವ ಮೂಲಕ ಒತ್ತಡ ನಿವಾರಿಸಿಕೊಳ್ಳುತ್ತಿದ್ದೆ’ ಎನ್ನುತ್ತಾರೆ ಜೆಇಇ ಅಡ್ವಾನ್ಸ್ಡ್ ನಲ್ಲಿ ಮೊದಲ ರ‍್ಯಾಂಕ್‌ ಪಡೆದಿರುವ ಸರ್ವೇಶ್‌ ಮೆಹ್ತಾನಿ.

‘ಅಮೀರ್‌ಖಾನ್‌ ಅವರ ‘3 ಈಡಿಯಟ್ಸ್‌’ ಸಿನಿಮಾ ನನ್ನ ಮೇಲೆ ಪ್ರಭಾವ ಬೀರಿದೆ. ಈ ಸಿನಿಮಾ ಬಿಡುಗಡೆಯಾದಾಗ ನಾನು 8ನೇ ತರಗತಿಯಲ್ಲಿದ್ದೆ. ಇದರಲ್ಲಿನ ಬಹುತೇಕ ಪಾತ್ರಗಳು ನನ್ನಲ್ಲಿ ಸ್ಫೂರ್ತಿ ತುಂಬಿವೆ ಎಂದಿದ್ದಾರೆ. ಇನ್ಫೊಸಿಸ್‌ ಸಂಸ್ಥಾಪಕ ಎನ್‌.ಆರ್‌. ನಾರಾಯಣ ಮೂರ್ತಿ ನನ್ನ ಆದರ್ಶ ವ್ಯಕ್ತಿ ಎನ್ನುತ್ತಾರೆ ಸರ್ವೇಶ್‌.

ಆದಾಯ ತೆರಿಗೆ ಇಲಾಖೆಯ ಅಧಿಕಾರಿ ಪರ್ವೇಶ್‌ ಮೆಹ್ತಾನಿ ಅವರ ಮಗ ಸರ್ವೇಶ್‌  ಮೊದಲ 10 ರ‍್ಯಾಂಕ್‌ ಒಳಗೆ ಬರಲೇಬೇಕು ಎಂಬ ಗುರಿಯಿಟ್ಟುಕೊಂಡು ಅಭ್ಯಾಸ ನಡೆಸಿದವರು.

‘ನನಗೆ ಭೌತವಿಜ್ಞಾನದಲ್ಲಿ 95, ರಸಾಯನವಿಜ್ಞಾನದಲ್ಲಿ 97 ಅಂಕ ಬಂದಿದೆ. ಗಣಿತ ನನ್ನ ಅಚ್ಚುಮೆಚ್ಚಿನ ವಿಷಯ’ ಎನ್ನುತ್ತಾರೆ ಅವರು.

‘ಗುರಿ ಸಾಧನೆಗೆ ಯೋಜಿತ ರೀತಿಯಲ್ಲಿ ಕಠಿಣ ಪರಿಶ್ರಮ ಪಡಬೇಕು’ ಎಂದು ಅವರು ಸಲಹೆ ನೀಡಿದ್ದಾರೆ.

‘ನಾನು ಎರಡು ವರ್ಷದಿಂದ ಸ್ಮಾರ್ಟ್‌ಫೋನ್‌ ಬಳಸಲಿಲ್ಲ. ಸ್ನೇಹಿತರೊಂದಿಗೂ ಹೆಚ್ಚು ಸಮಯ ಕಳೆಯಲಿಲ್ಲ. ಶಾಲಾ ಅವಧಿಯಲ್ಲಿ ದಿನಕ್ಕೆ 6 ಗಂಟೆ, ರಜಾ ಅವಧಿಯಲ್ಲಿ ದಿನಕ್ಕೆ 8ರಿಂದ 10 ಗಂಟೆ ಅಧ್ಯಯನ ನಡೆಸುತ್ತಿದ್ದೆ’ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.