ADVERTISEMENT

ಜೈಲಿನಲ್ಲಿ ಹಲ್ಲೆ: ಕೋರ್ಟ್‌ಗೆ ಅತ್ಯಾಚಾರ ಆರೋಪಿ ದೂರು

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2013, 19:59 IST
Last Updated 5 ಏಪ್ರಿಲ್ 2013, 19:59 IST

ನವದೆಹಲಿ(ಪಿಟಿಐ): ದೆಹಲಿಯ ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿ ವಿನಯ್ ಶರ್ಮಾ ಶುಕ್ರವಾರ ಮೂಳೆ ಮುರಿದ ಕೈಯೊಂದಿಗೆ ನ್ಯಾಯಾಲಯಕ್ಕೆ ಹಾಜರಾಗಿದ್ದು, ಆತನ ಪರ ವಕೀಲರು ಭಾರತೀಯ ವಾಯುಸೇನಾ ನೇಮಕಾತಿ ಪರೀಕ್ಷೆಗೆ ಹಾಜರಾಗಲು ಬಯಸಿದ್ದಕ್ಕೆ ತಿಹಾರ್ ಜೈಲಿನ ಕೈದಿಗಳು ಮತ್ತು ಪೊಲೀಸರು ಹಲ್ಲೆ ಮಾಡಿದ್ದಾರೆ ಎಂದು ಹೇಳಿದ್ದಾರೆ.

`ಶರ್ಮಾ ಏ.7ರಂದು ಐಎಎಫ್‌ನ ಗುಮಾಸ್ತ ಹುದ್ದೆಗೆ ಪರೀಕ್ಷೆ ಬರೆಯಬೇಕಿತ್ತು. ಆರೋಪಿಯು ಪರೀಕ್ಷೆಯನ್ನು ಬರೆಯದಿರಲು ಜೈಲಿನ ಕೈದಿಗಳು ಮತ್ತು ಪೊಲೀಸರು ಹಲ್ಲೆ ಮಾಡಿ ಆತನ ಬಲಗೈ ಮುರಿದಿದ್ದಾರೆ' ಎಂದು ಶರ್ಮಾ ಪರ ವಕೀಲ ಎ.ಪಿ.ಸಿಂಗ್ ನ್ಯಾಯಾಲಯದಲ್ಲಿ ಹೇಳಿದರು.

`ನೀನು ಪರೀಕ್ಷೆ ಬರೆಯಬೇಕೆ? ನೀನು ನಿನ್ನ ಬಲಗೈಯಿಂದ ಪರೀಕ್ಷೆ ಬರೆಯುತ್ತೀಯಾ ?  ನಿನ್ನ ಕೈ ಮುರಿಯುತ್ತೇವೆ' ಎಂದು ತಿಹಾರ್ ಜೈಲಿನ ಕೈದಿಗಳು ಆತನಿಗೆ ಹೇಳಿದ್ದಾರೆ. ಆದ್ದರಿಂದ ಘಟನೆಗೆ ಕುರಿತಂತೆ ವಿವರಣೆ ನೀಡುವಂತೆ ತಿಹಾರ್ ಜೈಲಿನ ಸೂಪರಿಂಟೆಂಡೆಂಟ್ ಅವರಿಗೆ ಸಮನ್ಸ್ ಜಾರಿ ಮಾಡಬೇಕು. `ಶರ್ಮಾ ತಿಹಾರ್ ಜೈಲಿನಿಂದ ವರ್ಗಾವಣೆ ಕೋರಿದ್ದು, ದೆಹಲಿ ಪೊಲೀಸರಿಂದ ದೂರ ಇರಿಸಬೇಕು' ಎಂದು ಎ.ಪಿ.ಸಿಂಗ್ ಆಗ್ರಹಿಸಿದರು.

`ಪ್ರಕರಣಕ್ಕೆ ಸಂಬಂಧಿಸಿದಂತೆ ತಿಹಾರ್ ಜೈಲಿನ ಸೂಪರಿಂಟೆಂಡೆಂಟ್ ಅವರಿಗೆ ಸಮನ್ಸ್ ಜಾರಿ ಮಾಡಬೇಕು' ಎಂದು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ದಯಾನ್ ಕೃಷ್ಣನ್ ಮನವಿ ಮಾಡಿದರು. ಈ ಕುರಿತು ಹೇಳಿಕೆ ನೀಡಿರುವ ಅವರು. `ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಯುತ ವಿಚಾರಣೆ ನಡೆಯುವಂತೆ ಮಾಡುವುದು ನನ್ನ ಕರ್ತವ್ಯ. ಘಟನೆ ನನ್ನ ಮಸ್ಸಿನ ಶಾಂತಿಕೆಡಿಸಿದೆ' ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.