ADVERTISEMENT

ಜೋಷಿ ಜತೆ ಸಿಬಿಐ ನಿರ್ದೇಶಕ ಭೇಟಿ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2011, 18:30 IST
Last Updated 10 ಮಾರ್ಚ್ 2011, 18:30 IST
ಜೋಷಿ ಜತೆ ಸಿಬಿಐ ನಿರ್ದೇಶಕ ಭೇಟಿ
ಜೋಷಿ ಜತೆ ಸಿಬಿಐ ನಿರ್ದೇಶಕ ಭೇಟಿ   

ನವದೆಹಲಿ (ಐಎಎನ್‌ಎಸ್): 2ಜಿ ಸ್ಪೆಕ್ಟ್ರಂ ಲೈಸೆನ್ಸ್ ಹಂಚಿಕೆಯಲ್ಲಿ ನಡೆದ ಹಣಕಾಸು ಅವ್ಯವಹಾರಗಳ ಬಗೆಗಿನ ತನಿಖೆಗೆ ಸಂಬಂಧಿಸಿದಂತೆ ಸಿಬಿಐ ನಿರ್ದೇಶಕ ಎ.ಪಿ. ಸಿಂಗ್ ಗುರುವಾರ ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ (ಪಿಎಸಿ)ಯ ಮುಂದೆ  ಹಾಜರಾಗಿದ್ದರು.

ಪಿಎಸಿ ಅಧ್ಯಕ್ಷ ಮುರಳಿ ಮನೋಹರ ಜೋಷಿ ಅವರನ್ನು ಸಂಸತ್ ಭವನದಲ್ಲಿ ಭೇಟಿ ಮಾಡಿದ ಸಿಂಗ್, ತನಿಖೆಗೆ ಸಂಬಂಧಿಸಿದ ಮಾಹಿತಿಗಳನ್ನು ನೀಡಿದರು ಎಂದು ಮೂಲಗಳು ತಿಳಿಸಿವೆ.

ಡಿಎಂಕೆ ನಾಯಕ ಎ. ರಾಜಾ ಅವರು ಕೇಂದ್ರ ಮಾಹಿತಿ ತಂತ್ರಜ್ಞಾನ ಮತ್ತು ಸಂಪರ್ಕ ಸಚಿವರಾಗಿದ್ದ ಅವಧಿಯಲ್ಲಿ (2008ರಲ್ಲಿ) ಮಾರುಕಟ್ಟೆ ದರಕ್ಕಿಂತ ಕಡಿಮೆ ದರದಲ್ಲಿ 2ಜಿ ಸ್ಪೆಕ್ಟ್ರಂ ಲೈಸೆನ್ಸ್ ಪಡೆಯಲು ಕೆಲವು ಟೆಲಿಕಾಂ ಕಂಪೆನಿಗಳು ಲಂಚ (ಕಿಕ್‌ಬ್ಯಾಕ್) ನೀಡಿರುವ ಆರೋಪಗಳ ಬಗ್ಗೆ ಪಿಎಸಿ ಮತ್ತು ಸಿಬಿಐ ಪ್ರತ್ಯೇಕವಾಗಿ ತನಿಖೆ ನಡೆಸುತ್ತಿವೆ.

ದೇಶದ ಅತ್ಯಂತ ದೊಡ್ಡದಾದ ಈ ಹಗರಣದ ಬಗ್ಗೆ ತನಿಖೆಯನ್ನು ತೀವ್ರಗೊಳಿಸಿರುವ ಸಿಬಿಐ, ಈ ತಿಂಗಳ 31ರೊಳಗೆ ಸುಪ್ರೀಂಕೋರ್ಟ್‌ಗೆ ಆರೋಪಪಟ್ಟಿ ಸಲ್ಲಿಸಲು ಸನ್ನದ್ಧವಾಗಿದೆ.

ಪಿಎಸಿ ಈಗಾಗಲೇ ಮಾಜಿ ಟೆಲಿಕಾಂ ಕಾರ್ಯದರ್ಶಿಗಳಾದ ಎಸ್.ಎಸ್. ಬೆಹೂರ ಮತ್ತು ಡಿ.ಎಸ್. ಮಾಥೂರ್ ಹಾಗೂ ಟ್ರಾಯ್ ಮಾಜಿ  ಅಧ್ಯಕ್ಷ ಪ್ರದೀಪ್ ಬೈಜಲ್ ಅವರನ್ನು ತನಿಖೆಗೆ ಒಳಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.