ADVERTISEMENT

ಜ್ಞಾನಭಾರತಿ ಅತ್ಯಾಚಾರ ಪ್ರಕರಣ : 8ನೇ ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2013, 13:44 IST
Last Updated 10 ಸೆಪ್ಟೆಂಬರ್ 2013, 13:44 IST

ಬೆಂಗಳೂರು: ಬೆಂಗಳೂರಿನ ಜ್ಞಾನಭಾರತಿ ಆವರಣದಲ್ಲಿ ನೇಪಾಳ ಮೂಲದ ಕಾನೂನು ವಿದ್ಯಾರ್ಥಿನಿ ಮೇಲೆ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಎಂಟನೇ ಆರೋಪಿಯನ್ನು ಬಂಧಿಸಲಾಗಿದೆ.

ಪ್ರಕರಣ ಸಂಬಂಧ ಜ್ಞಾನಭಾರತಿ ಪೊಲೀಸರು ಬಾಲ ಆರೋಪಿ ಸೇರಿದಂತೆ ಏಳು ಮಂದಿಯನ್ನು ಬಂಧಿಸಿದ್ದರು. ತಲೆಮರೆಸಿಕೊಂಡಿದ್ದ ಎಂಟನೇ ಆರೋಪಿ ರಾಜ, ಗಣೇಶ ಚತುರ್ಥಿ ಹಬ್ಬಕ್ಕೆಂದು ಮನೆಗೆ ಬಂದಿದ್ದ ವೇಳೆ ಪೊಲೀಸರು ಬಂಧಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಅಪರಾಧಿಗಳಿಗೆ ಒಂಬತ್ತನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯವು ಸೆಪ್ಟೆಂಬರ್ 6ರಂದು ಜೀವಾವಧಿ ಶಿಕ್ಷೆ ವಿಧಿಸಿತ್ತು. ಏಳನೇ ಆರೋಪಿ ಬಾಲಕನಾಗಿರುವುದರಿಂದ ಬಾಲ ಅಪರಾಧಿ ನ್ಯಾಯಾಲಯ ಆತನ ವಿಚಾರಣೆ ನಡೆಸುತ್ತಿದೆ.

ADVERTISEMENT

ಪ್ರಕರಣದ ಹಿನ್ನೆಲೆ: ಅತ್ಯಾಚಾರ ಘಟನೆ ನಡೆದ ದಿನ (ಅ.13) ಆರೋಪಿಗಳು ಗಂಧದ ಮರ ಕಡಿದು ಸಾಗಿಸುವ ಉದ್ದೇಶಕ್ಕಾಗಿ ರಾತ್ರಿ 8.30ರ ಸುಮಾರಿಗೆ ಜ್ಞಾನಭಾರತಿ ಆವರಣಕ್ಕೆ ಬಂದಿದ್ದರು. ಅವರು ಗಂಧದ ಮರಗಳನ್ನು ಹುಡುಕುತ್ತಾ ಜ್ಞಾನಭಾರತಿ ಆವರಣದಲ್ಲಿ ಅಡ್ಡಾಡುತ್ತಿದ್ದಾಗ, ಯುವತಿ ಮತ್ತು ಆಕೆಯ ಸ್ನೇಹಿತ ಕಣ್ಣಿಗೆ ಬಿದ್ದಿದ್ದರು. ಈ ವೇಳೆ ಆರೋಪಿಗಳು ಯುವತಿಯ ಸ್ನೇಹಿತನ ಮೇಲೆ ಹಲ್ಲೆ ನಡೆಸಿ, ಬಳಿಕ ಆಕೆಯನ್ನು ಸ್ವಲ್ಪ ದೂರ ಎಳೆದೊಯ್ದು ಸಾಮೂಹಿಕವಾಗಿ ಅತ್ಯಾಚಾರ ನಡೆಸಿದ್ದರು.

ಆರೋಪಿಗಳ ಮುಖಚರ್ಯೆ ಮತ್ತು ಲಕ್ಷಣಗಳ ಬಗ್ಗೆ ಅತ್ಯಾಚಾರಕ್ಕೊಳಗಾದ ವಿದ್ಯಾರ್ಥಿನಿ ನೀಡಿದ ಮಾಹಿತಿ ಆಧರಿಸಿ ತನಿಖೆ ಆರಂಭಿಸಿದ್ದ ಪಶ್ಚಿಮ ವಿಭಾಗದ ಪೊಲೀಸರು, ಅ.19ರಂದು ಬಾಲಕ ಸೇರಿದಂತೆ ಏಳು ಆರೋಪಿಗಳನ್ನು ಬಂಧಿಸಿದ್ದರು. ನಂತರ ಒಂದೇ ತಿಂಗಳಿನಲ್ಲಿ (ನ.16) ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಮತ್ತೊಬ್ಬ ಆರೋಪಿ ರಾಜ ತಲೆಮರೆಸಿಕೊಂಡಿದ್ದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.