ADVERTISEMENT

ಜ.2 ರಂದು ಲೋಕಸಭೆ ಅಭ್ಯರ್ಥಿಗಳ ಪಟ್ಟಿ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2013, 19:30 IST
Last Updated 16 ಡಿಸೆಂಬರ್ 2013, 19:30 IST

ನವದೆಹಲಿ: ಲೋಕಸಭೆ ಚುನಾವಣೆ ಸಂಭವನೀಯ ಅಭ್ಯರ್ಥಿ­­ಗಳ ಪಟ್ಟಿಯನ್ನು ರಾಜ್ಯ ಕಾಂಗ್ರೆಸ್‌ ಜನವರಿ ಎರಡರಂದು ಹೈಕಮಾಂಡ್‌ಗೆ ಸಲ್ಲಿಸಲಿದೆ.

ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿಗಳಾದ ಮಧು­ಸೂದನ್‌ ಮಿಸ್ತ್ರಿ, ದಿಗ್ವಿಜಯ್‌ ಸಿಂಗ್‌ ಅವರನ್ನು ಸೋಮ­ವಾರ ಭೇಟಿ ಮಾಡಿದ ಮುಖ್ಯಮಂತ್ರಿ ಸಿದ್ದ­ರಾಮಯ್ಯ, ಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್‌ ಜನವರಿ ಎರಡ­ರಂದು ಸಂಭವನೀಯ ಅಭ್ಯರ್ಥಿಗಳ ಪಟ್ಟಿ ಕೊಡುವುದಾಗಿ ತಿಳಿಸಿದರು.

ಸಂಭವನೀಯ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸುವ ಸಂಬಂಧ ಶನಿವಾರ ಬೆಂಗಳೂರಿನಲ್ಲಿ ಸೇರಿದ್ದ ರಾಜ್ಯ ಚುನಾ­ವಣಾ ಸಮಿತಿ ಮತ್ತೊಂದು ಸುತ್ತು ಎಲ್ಲರ ಜತೆ ಚರ್ಚಿ­ಸುವಂತೆ ಸಲಹೆ ಮಾಡಿದೆ. ಈ ಹಿನ್ನೆಲೆಯಲ್ಲಿ ಇನ್ನೊಂದು ಸಭೆ ನಡೆಸಿ ಪಟ್ಟಿ ಅಂತಿಮಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು.

ಈಗಾಗಲೇ ಎಲ್ಲ ಕ್ಷೇತ್ರಗಳಿಗೂ ವೀಕ್ಷಕರನ್ನು ಕಳುಹಿಸಿ ಸಂಭವನೀಯರ ಪಟ್ಟಿ ತರಿಸಿಕೊಳ್ಳಲಾಗಿದೆ. ಅದನ್ನು ಅಂತಿಮಗೊಳಿಸುವ ಕೆಲಸವಷ್ಟೇ ಬಾಕಿ ಉಳಿದಿದೆ. ಅನಂತರ ಅದನ್ನು ಹೈಕಮಾಂಡ್‌ಗೆ ಸಲ್ಲಿಸಲಾಗುವುದೆಂದು ಮುಖ್ಯಮಂತ್ರಿ ನುಡಿದರು.

ಲೋಕಸಭೆ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸುವಾಗ ಕೆಲವು ಮಾನದಂಡವನ್ನು ಕಟ್ಟು­ನಿಟ್ಟಾಗಿ ಪಾಲಿಸಲಾಗುವುದು. ಆಕಾಂಕ್ಷಿಗಳು ಪಕ್ಷದ ಕಾರ್ಯ­ಕರ್ತರಾಗಿರಬೇಕು. ಕ್ರಿಮಿನಲ್‌ ಹಿನ್ನೆಲೆ ಇರಬಾರದು.  ಹೊಂದಿ­ರ­­ಬಾರದು. ಗೆಲ್ಲುವಂತವರಾ­ಗಿರಬೇಕು ಎಂದು ಸಿದ್ದರಾಮಯ್ಯ ವಿವರಿಸಿದರು.

ಚುನಾವಣೆ ಹಿನ್ನೆಲೆಯಲ್ಲಿ ಶೀಘ್ರವೇ ಎಲ್ಲ ವಿಭಾಗಗಳಲ್ಲೂ ಸಮಾವೇಶ ನಡೆಸಲಾಗುವುದು. ಪಕ್ಷದ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಉಸ್ತುವಾರಿ ಪ್ರಧಾನ ಕಾರ್ಯ­ದರ್ಶಿಗಳನ್ನು ಸಮಾವೇಶಕ್ಕೆ ಕರೆಯಲಾಗುವುದು ಎಂದರು.

ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ 22 ಕ್ಷೇತ್ರಗಳನ್ನು ಗೆಲ್ಲುವ ವಿಶ್ವಾಸವಿದೆ. ಕರ್ನಾಟಕದಲ್ಲಿ ಮೋದಿ ಅಲೆ ಇಲ್ಲ. ಯಾರ ಅಲೆಯೂ ಇಲ್ಲ. ಬಿಜೆಪಿ ಮುಖಂಡರೇ ಮೋದಿಯನ್ನು ವಿರೋಧಿಸುತ್ತಿದ್ದಾರೆ. ಇನ್ನು ಜನರು ಹೇಗೆ ಅವರನ್ನು ಒಪ್ಪಿಕೊಳ್ಳುತ್ತಾರೆ ಎಂದು ಕೇಳಿದರು.
ಲೋಕಸಭೆ ಚುನಾವಣೆಗೂ ನಾಲ್ಕು ರಾಜ್ಯಗಳ ಚುನಾ­ವಣೆ ಫಲಿತಾಂಶಕ್ಕೂ ಸಂಬಂಧವಿಲ್ಲ. ಎರಡೂ ಬೇರೆಬೇರೆ. ಒಂದು ಚುನಾವಣೆಯಲ್ಲಿ ಸೋತ ತಕ್ಷಣ ಕಾಂಗ್ರೆಸ್‌ ಮುಳು­ಗಿಬಿಡುವುದಿಲ್ಲ. ಮತ್ತೆ ಪುಟಿದೇಳುವ ಶಕ್ತಿ ಪಕ್ಷಕ್ಕಿದೆ. ನಮ್ಮ ಪಕ್ಷದ ನಾಯಕತ್ವ ದುರ್ಬಲವಾಗಿಲ್ಲ ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದರು.

ಸಚಿವ ಸಂಪುಟ ವಿಸ್ತರಣೆ ಸದ್ಯಕ್ಕಿಲ್ಲ. ನಿಗಮ, ಮಂಡಳಿ ಅಧ್ಯಕ್ಷರು ಮತ್ತು ಸದಸ್ಯರ ನೇಮಕ ಕುರಿತು ಮಾತುಕತೆ ನಡೆದಿಲ್ಲ ಎಂದು ಸಿದ್ದರಾಮಯ್ಯ ಖಚಿತಪಡಿಸಿದರು.

ಸಚಿವ­ರಾದ ಎಚ್‌.ಸಿ. ಮಹಾದೇವಪ್ಪ, ಎಚ್‌.ಕೆ. ಪಾಟೀಲ, ಮಾಜಿ ಸಚಿವ ಡಿ.ಕೆ. ಶಿವಕುಮಾರ್‌, ಸಂಸದರಾದ ಎಚ್‌. ವಿಶ್ವನಾಥ್‌ ಮತ್ತು ಧ್ರುವನಾರಾಯಣ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.