ADVERTISEMENT

ಟಿಎಂಸಿಗೆ ಬಿಸಿ ತುಪ್ಪವಾದ ಕಾಂಗ್ರೆಸ್ ಅತೃಪ್ತರು

ಹೊನಕೆರೆ ನಂಜುಂಡೇಗೌಡ
Published 15 ಏಪ್ರಿಲ್ 2011, 19:30 IST
Last Updated 15 ಏಪ್ರಿಲ್ 2011, 19:30 IST

ಸಿಲಿಗುರಿ( ಪಶ್ಚಿಮ ಬಂಗಾಳ): ಮುಖ್ಯಮಂತ್ರಿ ಕುರ್ಚಿ ಏರುವ ಉತ್ಸಾಹದಲ್ಲಿರುವ ಮಮತಾ ಬ್ಯಾನರ್ಜಿಗೆ ಉತ್ತರ ಬಂಗಾಳದ ಕೆಲವು ಕ್ಷೇತ್ರಗಳಲ್ಲಿ ಎದುರಾ ಗಿರುವ ಬಂಡಾಯ ಬಿಸಿ ತುಪ್ಪವಾಗಿದೆ. ಕಾಂಗ್ರೆಸ್‌ನ ಅತೃಪ್ತರು ಹಾಕಿರುವ ಅಡ್ಡಗಾಲಿನಿಂದ ಕಂಗೆಟ್ಟಿರುವ ‘ತೃಣಮೂಲ ಕಾಂಗ್ರೆಸ್’ ನಾಯಕಿ ಮೂರ್ನಾಲ್ಕು ದಿನದಿಂದ ಈ ಭಾಗದಲ್ಲಿ ಬಿಡುವಿಲ್ಲದೆ ಮತದಾರ ರನ್ನು ಭೇಟಿ ಮಾಡುತ್ತಿದ್ದಾರೆ.
 

ಸಾಧಾರಣ ನೂಲಿನ ಸೀರೆ, ಪ್ಲಾಸ್ಟಿಕ್ ಚಪ್ಪಲಿ ತೊಟ್ಟು ‘ಅತ್ಯಂತ ಸರಳ ರಾಜಕಾರಣಿ’ ಎಂದು ಕರೆಸಿಕೊಳ್ಳುವ ಮಮತಾ ಪ್ರಚಾರಕ್ಕೆ ಹೆಲಿಕಾಪ್ಟರ್ ಮೊರೆ ಹೊಕ್ಕಿದ್ದಾರೆ. ಮೋಡ- ಮಳೆ ಮತ್ತು ಬಿಸಿಲ ನಡುವೆ ಕಣ್ಣಾಮುಚ್ಚಾಲೆ ಆಡುತ್ತಿರುವ ಉತ್ತರ ಬಂಗಾಳದ ಬಾನಿಗೆ ಚಿಮ್ಮಲು ‘ಲೋಹದ ಹಕ್ಕಿ’ ಗೆ ಸಾಧ್ಯವಾಗದಿದ್ದಾಗ ರಸ್ತೆ ಅವಲಂಬಿಸುತ್ತಿದ್ದಾರೆ.ಪಶ್ಚಿಮ ಬಂಗಾಳದ ಜನರಿಗೆ ಮಮತಾ ಅಕ್ಕರೆಯ ಅಕ್ಕ. ಎಲ್ಲರೂ ಅವರನ್ನು ಕರೆಯುವುದೇ ‘ದೀದಿ’ ಎಂದು. ದೀದಿ ಉತ್ತರ ದಿನಜಾಪುರ, ದಕ್ಷಿಣ ದಿನಜಾಪುರ, ಜಲಪೈಗುರಿ ಮತ್ತು ಕೂಚ್‌ಬಿಹಾರಗಳ ನಡೆಸಿರುವ ಪ್ರಚಾರ ಸಭೆಗಳಿಗೆ ಜನರು ತುಂಬಿ ತುಳುಕಿದ್ದಾರೆ. ಆದರೂ ಈಕೆಗೆ ಏನೋ ಆತಂಕ. ದುಗುಡ... ಭಾಷಣಗಳಲ್ಲಿ ಇದು ವ್ಯಕ್ತವಾಗುತ್ತಿದೆ.
 

ಉತ್ತರ ಬಂಗಾಳದ 54 ಕ್ಷೇತ್ರಗಳಿಗೆ ಏಪ್ರಿಲ್ 18ರಂದು ಮೊದಲ ಸುತ್ತಿನ ಮತದಾನ. ಮೂಲತಃ ಕಾಂಗ್ರೆಸ್ ಪ್ರಾಬಲ್ಯವಿರುವ ಈ ಜಿಲ್ಲೆಗಳಲ್ಲಿ ತೃಣಮೂಲ ಕಾಂಗ್ರೆಸ್ ತನ್ನ ಬೇರುಗಳನ್ನು ಹರಡಲು ಮುಂದಾಗಿದೆ. ಕಾಂಗ್ರೆಸ್ ಜತೆ ಸೀಟು ಹಂಚಿಕೆ ಮಾಡಿಕೊಂಡಿರುವ ಟಿಎಂಸಿ  ಮಿತ್ರ ಪಕ್ಷಕ್ಕೆ ಕಡಿಮೆ ಸ್ಥಾನ ನೀಡಿದೆ. ಹೆಚ್ಚಿನ ಕಡೆ ತನ್ನ ಅಭ್ಯರ್ಥಿಗಳನ್ನು ಹಾಕಿದೆ. ಟಿಕೆಟ್ ಸಿಗದೆ ನಿರಾಶರಾದ ಕೆಲವು ಕಾಂಗ್ರೆಸಿಗರು ಪಕ್ಷದ ವಿರುದ್ಧ ಬಂಡೆದಿದ್ದಾರೆ.
 

ADVERTISEMENT

ಉತ್ತರ ದಿನಜಾಪುರ ಜಿಲ್ಲೆ ‘ಚೋಪಡಾ’ದಲ್ಲಿ ಹಮಿದೂರ್ ರೆಹಮಾನ್, ‘ಇಸ್ಲಾಂಪುರ’ದಲ್ಲಿ ಕನಹೈಲಾಲ್ ಅಗರವಾಲ್, ‘ಹೇಮ್ತಾಬಾದ್’ ಚಿತ್ತಾರಾಯ್, ಮಾಲ್ದಾ ಜಿಲ್ಲೆಯ ‘ಮಾಲತಿಪುರ’ದಲ್ಲಿ ಅಲ್‌ಬೆರುನಿ, ‘ಮೋತಬರಿ’ಯಲ್ಲಿ ಶಹನಾಜ್ ಖಾದ್ರಿ ಕಾಂಗ್ರೆಸ್ ಸೂಚನೆ ಲೆಕ್ಕಿಸದೆ ಅದೃಷ್ಟ ಪರೀಕ್ಷೆಗೆ      ಇಳಿದಿದ್ದಾರೆ. ಮುರ್ಷಿದಾಬಾದ್ ಜಿಲ್ಲೆಯಲ್ಲೂ ಟಿಎಂಸಿಗೆ ಬಂಡಾಯ ಕಾಂಗ್ರೆಸಿಗರು ಸೆಡ್ಡು ಹೊಡೆದಿದ್ದಾರೆ. ‘ಸಾಗರ್‌ದಿಘಿ’ಯ ಅಮಿನುಲ್ ಇಸ್ಲಾಂ,  ‘ಬಾಬನ್‌ಗೋಲ’ದ ಆಲಂಗೀರ್ ಸಯ್ಯದ್, ‘ಹರಿಹರಪಾರ’ದ ಆಲಂಗೀರ್ ಮೀರ್,‘ಜಾಲಂಗಿ’ಯ ಸಂಸೂರ್ ಜಮನ್ ಬಿಸ್ವಾಸ್ ಮತ್ತು ‘ ಫರಕ್ಕ’ದ ಸಾನು ಶೇಕ್ ಟಿಎಂಸಿ ದಾರಿಗೆ ಅಡ್ಡಿಯಾಗಿದ್ದಾರೆ.

ಇವರಲ್ಲಿ ಫಜಲ್ ಹಕ್ ಮತ್ತು ಚಿತ್ತರಾಯ್ ಹಾಲಿ ಶಾಸಕರು. ಇಸ್ಲಾಂ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ, ಕೂಚ್‌ಬಿಹಾರ ಜಿಲ್ಲೆಯ ‘ದಿನ್ಹಟ’ ಕ್ಷೇತ್ರದಲ್ಲಿ ಬಂಡಾಯ ಕಾಂಗ್ರೆಸ್ ಅಭ್ಯರ್ಥಿ ಫಜಲ್ ಹಕ್ ಅಧಿಕೃತ ಅಭ್ಯರ್ಥಿಗೆ ತಲೆನೋವಾಗಿದ್ದಾರೆ.   ಹಾಲಿ ಶಾಸಕ ಟಿಎಂಸಿಯ ಅಶೋಕ್ ಮಂಡಲ್ ಪಕ್ಷೇತರವಾಗಿ ನಾಮಪತ್ರ ಸಲ್ಲಿಸಿದ್ದಾರೆ. ಟಿಎಂಸಿ ಈ ಕ್ಷೇತ್ರವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಟ್ಟಿದೆ. ಅಲ್ಲದೆ, ಮಮತಾ ಮತ್ತೊಂದು ಮಿತ್ರಪಕ್ಷವಾದ ಎಸ್‌ಯುಸಿಐ ಕೆಲವೆಡೆ ಕಾಂಗ್ರೆಸ್ ಎದುರೇ ಅಭ್ಯರ್ಥಿಗಳನ್ನು ಹಾಕಿ ಕಾಟ ಕೊಡುತ್ತಿದೆ.
ಕಾಂಗ್ರೆಸ್ ಅತೃಪ್ತರ ಬಂಡಾಯ ಮೇಲುನೋಟಕ್ಕೆ ನೋಡುವಷ್ಟು ಸರಳವಾಗಿಲ್ಲ. ಟಿಎಂಸಿಯ ನೆಮ್ಮದಿ ಹಾಳುಮಾಡಿದೆ. ರಾಯ್‌ಗಂಜ್ ಸಂಸತ್ ಸದಸ್ಯೆ ದೀಪಾದಾಸ್ ಮುನ್ಷಿ, ಮುರ್ಷಿದಾಬಾದ್ ಸಂಸತ್ ಸದಸ್ಯ ಅಧೀರ್ ಚೌಧುರಿ, ಮಾಲ್ಡಾದ ಅಬು ಹಸೀಂ ಖಾನ್ ಚೌಧರಿ  ಸೇರಿದಂತೆ ಕೆಲವು ಪ್ರಮುಖ ಕಾಂಗ್ರೆಸ್ ಮುಖಂಡರು ತೆರೆಮರೆಯಲ್ಲಿ ಇವರಿಗೆ ಬೆಂಬಲವಾಗಿದ್ದಾರೆ.
 

ಕಾಂಗ್ರೆಸ್ ಮುಖಂಡರ ನಡವಳಿಕೆ ಕುರಿತು ಸೋನಿಯಾ ಅವರಿಗೂ ದೂರು ಹೋಗಿದೆ. ಮೂರ್ನಾಲ್ಕು ದಿನಗಳಿಂದ ಈ ಭಾಗದಲ್ಲಿ ಸಕ್ರಿಯವಾಗಿರುವ ‘ದಾದಾ’ ಹಣಕಾಸು ಸಚಿವ ಪ್ರಣವ್ ಮುಖರ್ಜಿ, ಪಕ್ಷ ವಿರೋಧಿ ಕೆಲಸಕ್ಕೆ ಕೈಹಾಕಬಾರದು ಎಂದು ಮುಖಂಡರಿಗೆ ಎಚ್ಚರಿಸಿದ್ದಾರೆ. ಆದರೆ, ಯಾರ ಮಾತಿಗೂ ಇವರು ಸೊಪ್ಪು ಹಾಕುವಂತೆ ಕಾಣುತ್ತಿಲ್ಲ. ಬಂಡಾಯ  ಅಭ್ಯರ್ಥಿಗಳನ್ನು ಕಾಂಗ್ರೆಸ್  ಸಸ್ಪೆಂಡ್ ಮಾಡಿವೆ. ಆದರೂ ಮಮತಾ ಎದೆ ಬಡಿತ       ಕಡಿಮೆ ಆಗಿಲ್ಲ.
 

ಎಡರಂಗ ಅಧಿಕಾರ ಉಳಿಸಿಕೊಳ್ಳಲು ಬಂಡಾಯ ನೆರವಾಗಬಹುದೇನೋ ಎಂಬ ಭಯ ಟಿಎಂಸಿಗೆ. ಪ್ರತಿ ಮತ ಎಷ್ಟು ಮುಖ್ಯ ಎಂಬುದನ್ನು ಅರಿತಿರುವ ಮುಖಂಡರು ಉತ್ತರ ಬಂಗಾಳ ಕೈತಪ್ಪದಂತೆ ಎಚ್ಚರ ವಹಿಸುತ್ತಿದ್ದಾರೆ. ಮಿತ್ರಪಕ್ಷಗಳಿಗೆ ಪ್ರತಿಷ್ಠೆಯಾಗಿರುವ ಕ್ಷೇತ್ರಗಳಲ್ಲಿ ಕಾಂಗ್ರೆಸ್ ‘ಅಧಿಪತಿ’ಗಳಾದ ಸೋನಿಯಾ ಗಾಂಧಿ ಹಾಗೂ ಪುತ್ರ ರಾಹುಲ್ ಪ್ರವಾಸ ಮಾಡುತ್ತಿದ್ದಾರೆ. ಕಾಂಗ್ರೆಸ್ ಮತಗಳನ್ನು ಜೋಪಾನ ಮಾಡುತ್ತಿದ್ದಾರೆ. ಸಿಪಿಎಂ ಮುಖಂಡ ಮುಖ್ಯಮಂತ್ರಿ ಬುದ್ಧದೇವ್ ಉತ್ತರ ಬಂಗಾಳದ ಕಡೆ ಇನ್ನೂ ತಲೆ ಹಾಕಿಲ್ಲ. 16ರಂದು ಪ್ರಚಾರಕ್ಕೆ ಕೊನೆಯ ದಿನ. ಆದರೆ, ವಿರೋಧ ಪಕ್ಷಗಳ ಪ್ರತಿಯೊಂದು ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಬಂಡಾಯದ ಲಾಭ ಪಡೆಯಲು ತುದಿಗಾಲಲ್ಲಿ ನಿಂತಿದ್ದಾರೆ. ಬಹುತೇಕ ಕ್ಷೇತ್ರಗಳಲ್ಲಿ ಸಿಪಿಎಂ ಮತ್ತು ಎದುರಾಳಿಗಳ ನಡುವೆ ಹೆಚ್ಚು ಕಡಿಮೆ ಸಮಾನ ಸ್ಪರ್ಧೆ ಏರ್ಪಟ್ಟಿರುವುದರಿಂದ ಬಂಡಾಯ ಅಭ್ಯರ್ಥಿಗಳ ಪಾಲಾಗಬಹುದಾದ ಅತ್ಯಲ್ಪ ಮತಗಳು ಮಮತಾ ಅವಕಾಶಗಳಿಗೆ ಕಲ್ಲು ಹಾಕಬಹುದು.
 

ಕಾಂಗ್ರೆಸ್ ಬಂಡಾಯ ನೋಡಿಕೊಂಡು ತೃಣಮೂಲ ನಾಯಕಿ ಸುಮ್ಮನೆ ಕುಳಿತಿಲ್ಲ. ಮತ್ತೊಂದು ಹೆಜ್ಜೆ ಮುಂದೆ ಹೋಗಿ ಸಿಪಿಎಂನ ಕೆಲವು  ಅತೃಪ್ತರ ಜತೆ ಸಂಪರ್ಕ ಸಾಧಿಸಿದ್ದಾರೆ. ಅವರನ್ನು ಪ್ರಚಾರ ಸಭೆಗಳಿಗೆ ಕರೆತರುತ್ತಿದ್ದಾರೆ. ‘ಸಿಪಿಎಂ ಕೂಡಾ ಒಡೆದ ಮನೆ’ ಎಂದು ಸಾರಿ, ಸಾರಿ  ಹೇಳುತ್ತಿದ್ದಾರೆ. ಸಿಕ್ಕಿರುವ ಒಂದು ಅವಕಾಶ ‘ಮಿಸ್’ ಮಾಡಿಕೊಳ್ಳಬಾರದು ಎಂಬ ದಾವಂತ ಅವರಿಗಿದೆ.
 

ಉತ್ತರದ ಜನ ಬದಲಾವಣೆ ಕುರಿತು ಮಾತನಾಡುತ್ತಿದ್ದಾರೆ. ‘ಇಷ್ಟು ವರ್ಷ ಎಡರಂಗ ಸರ್ಕಾರ ನೋಡಿ ಆಗಿದೆ. ಮಮತಾಗೂ ‘ಚಾನ್ಸ್ ಕೊಡೋಣ’ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಸಿಪಿಎಂ ಮತ್ತು ಟಿಎಂಸಿಗೆ ಅದರದೇ ನಿಶ್ಚಿತ ಮತಗಳಿವೆ. ಒಲವು- ನಿಲುವು ಇಲ್ಲದ ತಟಸ್ಥ ಮತಗಳು ನಿರ್ಣಾಯಕವಾಗಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.