ADVERTISEMENT

ಟಿಎಂಸಿ ಸಖ್ಯ ಬೇಡ: ಕಾಂಗ್ರೆಸ್ ಸಂಸದರ ಒತ್ತಾ

​ಪ್ರಜಾವಾಣಿ ವಾರ್ತೆ
Published 9 ಜುಲೈ 2012, 19:30 IST
Last Updated 9 ಜುಲೈ 2012, 19:30 IST

ಕೋಲ್ಕತ್ತ (ಪಿಟಿಐ): ಈ ತಿಂಗಳ 19ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆಯಲ್ಲಿ ಯಾರನ್ನು ಬೆಂಬಲಿಸಬೇಕು ಎನ್ನುವ ಕುರಿತು ಇನ್ನೂ ತೀರ್ಮಾನ ಕೈಗೊಳ್ಳದ ತೃಣಮೂಲ ಕಾಂಗ್ರೆಸ್ ಪಕ್ಷ (ಟಿಎಂಸಿ) ದೊಂದಿಗೆ ಕಾಂಗ್ರೆಸ್ ಸಂಬಂಧ ಕಡಿದುಕೊಳ್ಳಬೇಕು ಎಂದು ಆ ಪಕ್ಷದ ಇಬ್ಬರು ಸಂಸದರು ಹೈಕಮಾಂಡ್‌ಗೆ ಒತ್ತಾಯಿಸಿದ್ದಾರೆ.

`ಮಮತಾ ಬ್ಯಾನರ್ಜಿ ಅವರ ಪಕ್ಷದೊಂದಿಗೆ ಇರುವ ಎಲ್ಲ ರೀತಿಯ ಸಂಬಂಧಕ್ಕೆ ತಿಲಾಂಜಲಿ ಹಾಡಬೇಕು. ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಒಂಟಿಯಾಗಿ ಮುನ್ನಡೆಯಲು ಅವಕಾಶ ಕಲ್ಪಿಸಬೇಕು~ ಎಂದು ಕಾಂಗ್ರೆಸ್ ಸಂಸದರಾದ ಅಧೀರ್ ರಂಜನ್ ಚೌಧರಿ ಮತ್ತು ದೀಪ ದಾಸಮುನ್ಷಿ ಸೋಮವಾರ ಇಲ್ಲಿ ಯುಪಿಎ ಅಭ್ಯರ್ಥಿ ಪ್ರಣವ್ ಮುಖರ್ಜಿ ಅವರ ಚುನಾವಣಾ ಪ್ರಚಾರ ಸಭೆಯಲ್ಲಿ ಆಗ್ರಹಿಸಿದರು.

ರಾಷ್ಟ್ರಪತಿ ಹುದ್ದೆಗೆ ಅಭ್ಯರ್ಥಿಯಾಗಿ ಪ್ರಣವ್ ಹೆಸರನ್ನು ಘೋಷಿಸಿದ ಬಳಿಕ ಟಿಎಂಸಿ ವ್ಯವಸ್ಥಿತ ರೀತಿಯಲ್ಲಿ ಕಾಂಗ್ರೆಸ್ ಮತ್ತು ಸೋನಿಯಾ ಗಾಂಧಿ ವಿರುದ್ಧ ದೂಷಿಸುವುದರಲ್ಲಿ ನಿರತವಾಗಿದೆ~ ಎಂದು ಅವರು ಆರೋಪಿಸಿದರು.

ಮಮತಾ ಬೆಂಬಲ ಕೋರಿಕೆ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ, ತೃಣಮೂಲ ಕಾಂಗ್ರೆಸ್ ಅಧ್ಯಕ್ಷೆ ಮಮತಾ ಬ್ಯಾನರ್ಜಿ ಅವರು ಯಾವಾಗ ತಮ್ಮಂದಿಗೆ ಮಾತನಾಡಲು ಬಯಸುತ್ತಾರೊ ಆವಾಗ ಅವರ ಜತೆ ಮಾತನಾಡಿ, ಚುನಾವಣೆಯಲ್ಲಿ ತಮಗೆ ಬೆಂಬಲ ನೀಡುವಂತೆ ಕೋರಲಾಗುವುದು ಎಂದು ಯುಪಿಎ ರಾಷ್ಟ್ರಪತಿ ಅಭ್ಯರ್ಥಿ ಪ್ರಣವ್ ಮುಖರ್ಜಿ ಹೇಳಿದ್ದಾರೆ.

ತಮ್ಮನ್ನು ಅಭ್ಯರ್ಥಿಯಾಗಿ ಹೆಸರು ಘೋಷಣೆಯಾದ ನಂತರ ಪ್ರಣವ್, ಯುಪಿಎ ಮಿತ್ರಪಕ್ಷಗಳ ಬೆಂಬಲ ಪಡೆಯುವ ಇಂಗಿತ ವ್ಯಕ್ತಪಡಿಸಿದ್ದರು. `ತೃಣಮೂಲ ಕಾಂಗ್ರೆಸ್ ಇಲ್ಲಿಯವರೆಗೆ ಯಾವುದೇ ನಿರ್ಧಾರಕ್ಕೆ ಬಂದಿಲ್ಲ. ಆದರೆ, ಸೂಕ್ತ ಸಂದರ್ಭದಲ್ಲಿ ಒಳ್ಳೆಯ ತೀರ್ಮಾನ ತೆಗೆದುಕೊಳ್ಳುತ್ತದೆ~ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಚುನಾವಣೆಯಲ್ಲಿ ತಮ್ಮನ್ನು ಬೆಂಬಲಿಸಲು ತೀರ್ಮಾನಿಸಿರುವ ಎಲ್ಲ ಪಕ್ಷದ ಮುಖಂಡರಿಗೆ ಕೃತಜ್ಞತೆ ಸಲ್ಲಿಸಲು ರಾಜ್ಯಗಳ ರಾಜಧಾನಿ ಭೇಟಿ ನೀಡುತ್ತಿರುವುದಾಗಿಯೂ ತಿಳಿಸಿದರು.

ಬದುಕಿಗೆ ಮೌಲ್ಯಗಳೇ ಚೌಕಟ್ಟು: ದೇಶದ ಅತ್ಯುನ್ನತ ರಾಷ್ಟ್ರಪತಿ ಹುದ್ದೆಯನ್ನು ಅಲಂಕರಿಸಲು ಬಯಸುವ ಯಾರೇ ಆಗಲಿ, ಅಂತಹವರು ಆಧುನಿಕ ಭಾರತದ ನಿರ್ಮಾತೃಗಳು ಹಾಕಿಕೊಟ್ಟ ಮೌಲ್ಯ ಮತ್ತು ಸಂಪ್ರದಾಯದ ಚೌಕಟ್ಟಿನಲ್ಲಿ ಬದುಕಬೇಕು  ಎಂದು ರಾಷ್ಟ್ರಪತಿ ಸ್ಥಾನಕ್ಕೆ ಸ್ಪರ್ಧಿಸಿರುವ ಯುಪಿಎ ಅಭ್ಯರ್ಥಿ ಪ್ರಣವ್ ನುಡಿದರು.

ರಾಜೇಂದ್ರ ಪ್ರಸಾದ್, ಸರ್ವಪಲ್ಲಿ ರಾಧಾಕೃಷ್ಣನ್, ಜಾಕೀರ್ ಹುಸೇನ್‌ಅವರ ಹೆಸರನ್ನು ಉದಾಹರಿಸಿದ ಅವರು, ಆ ಸ್ಥಾನ ಸ್ವೀಕರಿಸುವ ಮುಂದಿನ ಉತ್ತರಾಧಿಕಾರಿಗಳು ಕೂಡ ಅತ್ಯಂತ ಪ್ರಾಮಾಣಿಕತೆಯಿಂದ ಅವರು ಹಾಕಿಕೊಟ್ಟ ದಾರಿಯಲ್ಲಿ ಮುನ್ನಡೆಯಬೇಕು ಎಂದು ಹೇಳಿದರು.

ಇಲ್ಲಿ ಸೋಮವಾರ ಏರ್ಪಡಿಸಿದ್ದ ಪ್ರಚಾರ ಸಭೆಯಲ್ಲಿ ಎಡಪಕ್ಷಗಳಾದ ಸಿಪಿಐ (ಎಂ), ಎಫ್‌ಪಿ, ಎಸ್‌ಪಿ ಮತ್ತು ಡಿಎಸ್‌ಪಿ ಶಾಸಕರನ್ನು ಉದ್ದೇಶಿಸಿ ಮಾತನಾಡಿದ ಅವರು, `ಜೀವಮಾನದಲ್ಲಿ ಬಡತನವನ್ನು ಹೋಗಲಾಡಿಸುವ ಕನಸು ನನಸುಗೊಳಿಸುವ ಕೆಲಸ ಇನ್ನು ಹಾಗೆಯೇ ಉಳಿದಿದೆ~ ಎಂದರು.

ಎಡಪಕ್ಷಗಳಿಗೆ ಪರಿಣಾಮವಿಲ್ಲ: ರಾಷ್ಟ್ರಪತಿ ಚುನಾವಣೆಯಲ್ಲಿ ಯುಪಿಎ ಅಭ್ಯರ್ಥಿ ಪ್ರಣವ್ ಅವರನ್ನು ಬೆಂಬಲಿಸದಿರಲು ಆರ್‌ಎಸ್‌ಪಿ ಮತ್ತು ಸಿಪಿಐ ನಿರ್ಧರಿಸಿರುವುದರಿಂದ ಎಡಪಕ್ಷಗಳ ಒಗ್ಗಟ್ಟಿನ ಮೇಲೆ ಯಾವುದೇ ಪರಿಣಾಮ ಉಂಟಾಗುವುದಿಲ್ಲ ಎಂದು ಸಿಪಿಐ(ಎಂ)ನ ಪಶ್ಚಿಮ ಬಂಗಾಳ ವಿಧಾನಸಭೆ ವಿರೋಧ ಪಕ್ಷದ ನಾಯಕ ಸೂರ್ಯಕಾಂತ ಮಿಶ್ರಾ ಹೇಳಿದ್ದಾರೆ.

ನಾಳೆ ಯು.ಪಿ.ಗೆ ಸಂಗ್ಮಾ
ಲಖನೌ ವರದಿ: ಉತ್ತರ ಪ್ರದೇಶದಲ್ಲಿ ಪಿ.ಎ. ಸಂಗ್ಮಾ ಈ ತಿಂಗಳ 11ರಂದು ಪ್ರಚಾರ ನಡೆಸಲಿದ್ದಾರೆ. ಬುಧವಾರ ಇಲ್ಲಿಗೆ ಆಗಮಿಸಲಿರುವ ಅವರು, ಬಿಜೆಪಿ ಶಾಸಕರೊಂದಿಗೆ ಚರ್ಚೆ ನಡೆಸಲಿದ್ದಾರೆ. ಎಂದು ಆ ಪಕ್ಷದ ಮುಖಂಡ ರಾಧಾ ಮೋಹನ್ ದಾಸ್ ತಿಳಿಸಿದ್ದಾರೆ.

ಪತ್ರಕರ್ತರು, ರಾಜಕಾರಣಿಗಳು ಮೀನು- ನೀರಿನಂತೆ: ಪ್ರಣವ್

ಕೋಲ್ಕತ್ತ (ಪಿಟಿಐ): `ಪತ್ರಕರ್ತರು ಮತ್ತು ರಾಜಕಾರಣಿಗಳು ಮೀನು ಮತ್ತು ನೀರಿನಂತೆ. ಒಂದು ಇನ್ನೊಂದನ್ನು ಬಿಟ್ಟು ಏನನ್ನೂ ಮಾಡಲಿಕ್ಕಾಗದು. ನೀರು ಇಲ್ಲದೇ ಮೀನು ಬದುಕಲು ಆಗದು. ನಮ್ಮ ವೃತ್ತಿ ಜೀವನ ಕೂಡ ಸಹಜವಾಗಿಯೇ ಅದರೊಂದಿಗೆ ಬೆಸೆದುಕೊಂಡಿದೆ~.

ಹೀಗೆಂದು ಹೇಳಿದವರು ರಾಷ್ಟ್ರಪತಿ ಚುನಾವಣೆಯಲ್ಲಿ ಯುಪಿಎ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಪ್ರಣವ್ ಮುಖರ್ಜಿ.ಹಲವು ವರ್ಷಗಳಿಂದ ಮಾಧ್ಯಮದವರ ಪ್ರಶ್ನೆಗಳಿಗೆ ತಾಳ್ಮೆ ಕಳೆದುಕೊಳ್ಳದೇ ಶಾಂತಚಿತ್ತರಾಗಿ ಉತ್ತರ ನೀಡುತ್ತಿರುವ, ಹಿರಿಯ ರಾಜಕಾರಣಿ ಪ್ರಣವ್, ಅನೇಕ ವರ್ಷಗಳಿಂದ ಎಲ್ಲ ರೀತಿಯ ಸಹಕಾರ ಮತ್ತು ಬೆಂಬಲ ನೀಡಿರುವ ಮಾಧ್ಯಮಗಳಿಗೆ ಕೃತಜ್ಞತೆ ಸಲ್ಲಿಸಿದರು.

`ನಾನು ನಿಮ್ಮಂದಿಗೆ ಹೊಂದಿದ್ದ ಅಥವಾ ನಿಮ್ಮ ಉತ್ತರಾಧಿಕಾರಿಗಳೊಂದಿಗೆ ಸುಮಾರು 50 ವರ್ಷಗಳಿಂದಲೂ ಸಂಬಂಧ ಹೊಂದಿದ್ದೇನೆ. ಆ ಸಂಬಂಧದ ಒಂದು ಅಧ್ಯಾಯ ಈಗ ಪೂರ್ಣಗೊಂಡಿದೆ~ ಎಂದು ಪಶ್ಚಿಮ ಬಂಗಾಳದಿಂದ ತಮ್ಮ ರಾಜಕೀಯ ಜೀವನ ಆರಂಭಿಸಿದ ಅವರು, ಮಾಧ್ಯಮದವರೊಂದಿಗೆ ಹೊಂದಿದ ಸಂಬಂಧದ ಕುರಿತು ಈ ರೀತಿ ಹೇಳಿದರು.

`ಈ ಸುದೀರ್ಘ ಅವಧಿಯಲ್ಲಿ ನಾನು ಅನೇಕ ತಪ್ಪುಗಳನ್ನು ಮಾಡಿದ್ದೇನೆ. ನಾನು ನಿಮ್ಮ ವಿರುದ್ಧ ಗೊಣಗಿದ್ದೇನೆ. ನಿಮ್ಮ ಪ್ರಶ್ನೆಗಳಿಗೆ ಉತ್ತರಿಸಿಲ್ಲ. ನೀವು ತಪ್ಪಾಗಿ ಭಾವಿಸಿದ್ದೀರಿ ಎನ್ನುವುದು ನನಗೆ ತಿಳಿದಿದೆ. ಇದಕ್ಕಾಗಿ ನಾನು ನಿಮ್ಮ ಕ್ಷಮೆ ಕೋರುತ್ತೇನೆ~ ಎಂದು ಭಾವುಕರಾಗಿ ನುಡಿದರು.  `ಒಂದು ಮಾತನ್ನು ನಿಮಗೆ ಹೇಳಲೇಬೇಕು, ನಿಮ್ಮಿಂದ ನಾನು ಪಡೆದ ಮಾಹಿತಿ ಮತ್ತು ಅಂಕಿ ಅಂಶಗಳಿಂದ ನಮ್ಮ ಪಕ್ಷ ಮತ್ತು ಸರ್ಕಾರದಲ್ಲಿ ಕೆಲಸ ನಿರ್ವಹಿಸಲು ಬಹಳ ಸಹಕಾರಿಯಾಗಿದೆ~ ಎಂದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.