ADVERTISEMENT

ಡಿಎನ್‌ಎ ಪರೀಕ್ಷೆಗೆ ತಿವಾರಿ ನಕಾರ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2011, 19:30 IST
Last Updated 23 ಸೆಪ್ಟೆಂಬರ್ 2011, 19:30 IST

ನವದೆಹಲಿ (ಪಿಟಿಐ): ಪಿತೃತ್ವ ವಿವಾದಕ್ಕೆ ಸಂಬಂಧಿಸಿದಂತೆ ಡಿಎನ್‌ಎ ಪರೀಕ್ಷೆಗಾಗಿ ರಕ್ತದ ಮಾದರಿ ನೀಡುವಂತೆ ಕಾಂಗ್ರೆಸ್ ನಾಯಕ ಎನ್.ಡಿ.ತಿವಾರಿ ಅವರ ಮೇಲೆ ನಿರ್ಬಂಧ ಹೇರಲು ಸಾಧ್ಯವಿಲ್ಲ, ಆದರೆ ಈ ವಿಷಯದಲ್ಲಿ ಅವರು ಪಟ್ಟುಹಿಡಿದಿರುವುದು ಅಪಾರ್ಥಕ್ಕೆ ಎಡೆ ಮಾಡಿಕೊಡುವಂತಿದೆ ಎಂದು ದೆಹಲಿ ಹೈಕೋರ್ಟ್ ಶುಕ್ರವಾರ ಹೇಳಿದೆ.

ತಿವಾರಿ ತಮ್ಮ ತಂದೆ ಎಂದು ಹೇಳಿಕೊಂಡು ಯುವಕ ರೋಹಿತ್ ಶೇಖರ್ ಎಂಬುವವರು ಸಲ್ಲಿಸಿರುವ ಅರ್ಜಿಯನ್ನು ಪರಿಗಣಿಸಿದ್ದ ಕೋರ್ಟ್, ಡಿಎನ್‌ಎ ಪರೀಕ್ಷೆಗಾಗಿ ರಕ್ತದ ಮಾದರಿ ನೀಡುವಂತೆ ಹಿಂದೆ ಆದೇಶ ನೀಡಿತ್ತು. ಇದನ್ನು ಪ್ರಶ್ನಿಸಿ ತಿವಾರಿ ಮೇಲ್ಮನವಿ ಸಲ್ಲಿಸಿದ್ದರು.

`ತಿವಾರಿ ಅವರು ರಕ್ತದ ಮಾದರಿ ಕೊಡಲೇಬೇಕೆಂದೇನೂ ಇಲ್ಲ. ಆದರೆ ಪದೇ ಪದೇ ಇದಕ್ಕೆ ನಕಾರ ಸೂಚಿಸಿದರೆ ಅವರೇ ಯುವಕನ ತಂದೆ ಇರಬಹುದು ಎಂಬ ಭಾವನೆ ಮೂಡುತ್ತದೆ~ ಎಂದು ನ್ಯಾಯಮೂರ್ತಿ ಗೀತಾ ಮಿತ್ತಲ್ ಹೇಳಿದ್ದಾರೆ.

ತಿವಾರಿ ಅವರ ಈ ನಿರ್ಧಾರ ಅಸಮಂಜಸವಾಗಿದ್ದು, ಅದಕ್ಕೆ ಸೂಕ್ತ ಕಾರಣವೇ ಇಲ್ಲ. ಅವರ ಈ ನಿರಾಕರಣೆಯನ್ನು ದಾಖಲೆ ಎಂದು ಪರಿಗಣಿಸಲಾಗುವುದು. ಇದರಿಂದ ಅರ್ಜಿದಾರರ ವಾದಕ್ಕೆ ಪುಷ್ಟಿ ದೊರೆತಂತಾಗುತ್ತದೆ ಎಂದು ಹೇಳಿದ್ದಾರೆ.

ಬಾಕಿ ಉಳಿದ ಗುತ್ತಿಗೆ ಕಾರ್ಮಿಕರ ಪ್ರಕರಣ
ನವದೆಹಲಿ, (ಪಿಟಿಐ): 18 ವರ್ಷಗಳಿಂದ ರಾಷ್ಟ್ರೀಯ ಮಾನವ ಹಕ್ಕು ಆಯೋಗಕ್ಕೆ  (ಎನ್‌ಎಚ್‌ಆರ್‌ಸಿ) ಬಂದಿರುವ, ಗುತ್ತಿಗೆ ಕಾರ್ಮಿಕರಿಗೆ ಸೇರಿದ ಸುಮಾರು 2,800 ಪ್ರಕರಣಗಳಲ್ಲಿ ಶೇ 40ಕ್ಕೂ ಹೆಚ್ಚು ಇತ್ಯರ್ಥಗೊಳ್ಳದೇ ಬಾಕಿ ಉಳಿದಿವೆ ಎಂದು ಆಯೋಗದ ಸದಸ್ಯರಾದ ನ್ಯಾಯಮೂರ್ತಿ ಬಿ.ಸಿ.ಪಟೇಲ್ ತಿಳಿಸಿದ್ದಾರೆ.

ಪೊಲೀಸರು ಮತ್ತು ಅಧಿಕಾರಶಾಹಿ ನಡುವಿನ ಅಕ್ರಮ ಮೈತ್ರಿ, ಮಾಲೀಕರ ವಿಳಂಬ ಧೋರಣೆಯೇ ಇದಕ್ಕೆ ಪ್ರಮುಖ ಕಾರಣ ಎಂದು ಪಟೇಲ್ ಅಭಿಪ್ರಾಯಪಟ್ಟಿದ್ದಾರೆ.

`ಪೊಲೀಸರು, ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್, ಜಿಲ್ಲಾಧಿಕಾರಿ, ಮಾಲೀಕರು ಎಲ್ಲರೂ ಇದರಲ್ಲಿ ಶಾಮೀಲಾಗಿದ್ದಾರೆ. ಇಲ್ಲದಿದ್ದಲ್ಲಿ ಗುತ್ತಿಗೆ ಕಾರ್ಮಿಕ ಪದ್ಧತಿ ಹೇಗೆ ಮುಂದುವರಿಯಲು ಸಾಧ್ಯ?ಮೊದಲು ಅಧಿಕಾರಶಾಹಿ ತನ್ನ ನಡತೆಯಲ್ಲಿ ಬದಲಾವಣೆ ತಂದುಕೊಳ್ಳಬೇಕು ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.