ADVERTISEMENT

ಡಿಟಿಎಚ್ ಪರವಾನಗಿಗೂಸಿಬಿಐ ತನಿಖೆಯ ಬಿಸಿ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2011, 19:30 IST
Last Updated 9 ಅಕ್ಟೋಬರ್ 2011, 19:30 IST

ನವದೆಹಲಿ, (ಪಿಟಿಐ): 2ಜಿ ತರಂಗಾಂತರ ಪರವಾನಗಿ ಪಡೆದ ಕೆಲವು ಕಂಪೆನಿಗಳು ಡಿಟಿಎಚ್ (ಮನೆಗಳಿಗೆ ನೇರ ಪ್ರಸಾರ) ಪರವಾನಗಿಯನ್ನೂ ಪಡೆದಿರುವುದರಿಂದ ಸಿಬಿಐ ಈಗ ತನ್ನ ತನಿಖೆಯನ್ನು ವಿಸ್ತರಿಸಿದೆ.

2ಜಿ ಹಗರಣದಲ್ಲಿ ಭಾಗಿಯಾಗಿ ವಿಚಾರಣೆ ಎದುರಿಸುತ್ತಿರುವ ಕಂಪೆನಿಗಳು ಬ್ಯಾಂಡ್‌ವಿಡ್ತ್ ಪರವಾನಗಿ ಹೊಂದಿರುವುದು ಗೊತ್ತಾದ ಮೇಲೆ ಅಧಿಕಾರಿಗಳು ಆ ಬಗ್ಗೆ ಗಮನ ಕೇಂದ್ರೀಕರಿಸಿದ್ದಾರೆ.

ಡಿಟಿಎಚ್ ನಿರ್ವಾಹಕರ ತರಂಗಾಂತರ ಮತ್ತು ವೈರ್‌ಲೆಸ್ ಪರವಾನಗಿಗೆ ಸಂಬಂಧಿಸಿದ ಅರ್ಜಿಗಳ ಮೂಲ ಕಡತವನ್ನು ಸಿಬಿಐ ಕೋರಿದೆ.

ಡಿಶ್ ಟಿ.ವಿ ಇಂಡಿಯಾ, ರಿಲಯನ್ಸ್ ಬಿಗ್ ಟಿ.ವಿ, ಭಾರ್ತಿ ಮಲ್ಟಿ ಮೀಡಿಯ, ಭಾರ್ತಿ ಬಿಸಿನೆಸ್ ವಾಹಿನಿ, ದೂರದರ್ಶನ, ಸನ್ ಡೈರೆಕ್ಟ್ ಮತ್ತು ಟಾಟಾ ಸ್ಕೈ ಕಂಪೆನಿಗಳಿಗೆ ಸಂಬಂಧಿಸಿದ ಮೂಲ ಅರ್ಜಿಗಳ ಕಡತಗಳನ್ನು ಸಿಬಿಐ ಅಧಿಕಾರಿಗಳು ಕೋರಿದ್ದಾರೆ.

ದೂರಸಂಪರ್ಕ ಖಾತೆಯ ಮಾಜಿ ಸಚಿವ ದಯಾನಿಧಿ ಮಾರನ್ ಅವರು ಷೇರು ಹೊಂದಿರುವ ಏರ್‌ಸೆಲ್ ಮ್ಯಾಕ್ಸಿಸ್ ಸೇರಿದಂತೆ ತರಂಗಾಂತರ ಹಂಚಿಕೆ ಹಗರಣದಲ್ಲಿ ಪಾಲ್ಗೊಂಡ ಅನೇಕ ಕಂಪೆನಿಗಳು ಡಿಟಿಎಚ್ ಪರವಾನಗಿ ಹೊಂದಿರುವುದರಿಂದ ಕಡತ ಪರಿಶೀಲನೆ ಅಗತ್ಯವಾಗಿದೆ ಎಂದು ಸಿಬಿಐ ಮೂಲಗಳು ತಿಳಿಸಿವೆ.

ಇದಲ್ಲದೆ ಡಿಟಿಎಚ್ ಪರವಾನಗಿ ಹಂಚಿಕೆಯಲ್ಲಿ ದಕ್ಷಿಣ ಭಾರತ ಮೂಲದ ಟಿ.ವಿ ವಾಹಿನಿಯೊಂದು ಕಮಿಷನ್ ಪಡೆದಿರುವ ಸಾಧ್ಯತೆ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.