ADVERTISEMENT

ತನಿಖೆಗೆ ಸಮಿತಿ

ಕಾಂಗ್ರೆಸ್ ಟಿಕೆಟ್ ಹಂಚಿಕೆಯಲ್ಲಿ ಅಕ್ರಮದ ಆರೋಪ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2013, 20:30 IST
Last Updated 7 ಏಪ್ರಿಲ್ 2013, 20:30 IST

ನವದೆಹಲಿ: ರಾಜ್ಯ ವಿಧಾನಸಭೆ ಟಿಕೆಟ್ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಗಳ ಸತ್ಯಾಸತ್ಯತೆ ಪರಿಶೀಲಿಸಲು ಕಾಂಗ್ರೆಸ್ ಹೈಕಮಾಂಡ್ ಮೂವರು ಹಿರಿಯ ನಾಯಕರ ಸಮಿತಿ ರಚಿಸಿದೆ.

`ಟಿಕೆಟ್ ಹಂಚಿಕೆಯಲ್ಲಿ ವ್ಯಾಪಕ ಅಕ್ರಮ ನಡೆದಿವೆ' ಎನ್ನುವ ಆರೋಪಗಳನ್ನು ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿದೆ. ಅದಕ್ಕಾಗಿಯೇ ಹಿರಿಯ ನಾಯಕರಾದ ಎ.ಕೆ. ಆಂಟನಿ, ವಯಲಾರ್ ರವಿ ಮತ್ತು ಅಂಬಿಕಾ ಸೋನಿ ಅವರ ಸಮಿತಿ ರಚಿಸಿದೆ. ಅಗತ್ಯವಾದರೆ ಸಮಿತಿ ಬೆಂಗಳೂರಿಗೆ ಭೇಟಿ ನೀಡಲಿದೆ ಎಂದು ಉನ್ನತ ಮೂಲಗಳು ಭಾನುವಾರ `ಪ್ರಜಾವಾಣಿ'ಗೆ ತಿಳಿಸಿವೆ.

`ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಿ, ಹೊರಗಿನ ದೊಡ್ಡ ಕುಳಗಳಿಗೆ ಟಿಕೆಟ್ ಕೊಡಲಾಗಿದೆ' ಎನ್ನುವ ಆರೋಪಗಳು ಬಹಿರಂಗವಾಗಿ ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಹೈಕಮಾಂಡ್ ತೀವ್ರ ಕಳವಳಗೊಂಡಿದ್ದು, ಸಮಿತಿ ರಚಿಸುವ ತೀರ್ಮಾನ ಕೈಗೊಂಡಿತು. ಆರೋಪಗಳಿಂದ ಪಕ್ಷಕ್ಕಾಗುವ ಹಾನಿ ತಡೆಯುವ ಉದ್ದೇಶ ಇದರ ಹಿಂದಿದೆ.

ಈ ಮಧ್ಯೆ, `ಶುಕ್ರವಾರ ಪ್ರಕಟಿಸಲಾದ 177 ಅಭ್ಯರ್ಥಿಗಳ ಪಟ್ಟಿ ಬಗ್ಗೆ ಉತ್ತಮ ಪ್ರತಿಕ್ರಿಯೆ ಬಂದಿವೆ. ಉಳಿದ 47 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ  ಪರಿಶೀಲನೆಯಲ್ಲಿದೆ' ಎಂದು ರಾಜ್ಯದ ಉಸ್ತುವಾರಿ ಹೊತ್ತಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಧುಸೂದನ ಮಿಸ್ತ್ರಿ ತಿಳಿಸಿದರು.

ಉಳಿದ ಕ್ಷೇತ್ರಗಳಲ್ಲಿ ಯಾವುದೇ ಗೊಂದಲಗಳಿಲ್ಲ. ಸೂಕ್ತ ಅಭ್ಯರ್ಥಿಗಳಿಗಾಗಿ ಹುಡುಕಾಟ ನಡೆದಿದೆ. ಗೋವಾ ಮಾಜಿ ಮುಖ್ಯಮಂತ್ರಿ ಲುಸಿಯಾನ್ಹೊ ಫೆಲೆರೊ ನೇತೃತ್ವದ ಅಭ್ಯರ್ಥಿಗಳ ಆಯ್ಕೆ ಸಮಿತಿ ತನ್ನ ಕೆಲಸ ಮುಂದುವರಿಸಿದೆ.  ಈ ಪ್ರಕ್ರಿಯೆ ಮುಗಿದ ಬಳಿಕ ಕಾಂಗ್ರೆಸ್ ಅಧ್ಯಕ್ಷರ ಒಪ್ಪಿಗೆ ಪಡೆದು ಎರಡನೆ ಪಟ್ಟಿ ಪ್ರಕಟಿಸಲಾಗುವುದು ಎಂದು ಗುಜರಾತ್‌ನಲ್ಲಿರುವ ಮಿಸ್ತ್ರಿ ದೂರವಾಣಿಯಲ್ಲಿ `ಪ್ರಜಾವಾಣಿ'ಗೆ ಮಾಹಿತಿ ನೀಡಿದರು.

ಆರೋಪಗಳ ಸುರಿಮಳೆ: ಆದರೆ, `ಕಾಂಗ್ರೆಸ್ ಟಿಕೆಟ್ ಹಂಚಿಕೆಯಲ್ಲಿ ವ್ಯಾಪಕ ಅಕ್ರಮಗಳು ನಡೆದಿವೆ ಎನ್ನುವ ಆರೋಪಗಳು ಹೈಕಮಾಂಡ್ ಗಮನಕ್ಕೆ ಬಂದಿವೆ. ಬೇಕಾದಷ್ಟು ದೂರುಗಳು ದೆಹಲಿಗೆ ತಲುಪಿವೆ. ಈ ಹಿನ್ನೆಲೆಯಲ್ಲಿ ಸತ್ಯಾಸತ್ಯತೆ ಪರಿಶೀಲಿಸಲು ಮೂವರ ಸಮಿತಿ ರಚಿಸಲಾಗಿದೆ. ಸಮಿತಿ ಹೈಕಮಾಂಡ್‌ಗೆ ವರದಿ ಕೊಡಲಿದೆ' ಎಂದು ಕಾಂಗ್ರೆಸ್ ಉನ್ನತ ಮೂಲಗಳು ಖಚಿತಪಡಿಸಿವೆ.

`ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎನ್ನುವ ನಿರೀಕ್ಷೆಯಲ್ಲಿ ಮುಖ್ಯಮಂತ್ರಿ ಕುರ್ಚಿ ಮೇಲೆ ಕಣ್ಣಿಟ್ಟಿರುವ ನಾಯಕರು ತಮ್ಮ ನಿಷ್ಠಾವಂತ ಹಿಂಬಾಲಕರಿಗೆ  ಟಿಕೆಟ್ ಕೊಟ್ಟಿದ್ದಾರೆ. ಕಾಂಗ್ರೆಸ್ ಟಿಕೆಟ್ ಗಿಟ್ಟಿಸಲು ಚಾತಕ ಪಕ್ಷಿಗಳಂತೆ ಕಾಯುತ್ತಿರುವ ಕೆಲವರು ತಮ್ಮ ನಾಯಕರೇ ಮುಖ್ಯಮಂತ್ರಿ ಆಗಬೇಕೆಂದು ಈಗಾಗಲೇ ಲಾಬಿ ಆರಂಭಿಸಿದ್ದಾರೆ. ಈ ವಿಷಯವೂ ಹೈಕಮಾಂಡ್ ಅಂಗಳಕ್ಕೆ ಬಂದಿದೆ' ಎಂದು ಮೂಲಗಳು ತಿಳಿಸಿವೆ.

ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಸಮಯದಲ್ಲಿ ಕಾಂಗ್ರೆಸ್ ನಾಯಕರು ಕೇಂದ್ರದಲ್ಲಿ ರಾಜ್ಯವನ್ನು ಪ್ರತಿನಿಧಿಸಿರುವ ಸಚಿವರನ್ನು ಕಡೆಗಣಿಸಿದ್ದಾರೆ. ಸಚಿವರಾದ ಮಲ್ಲಿಕಾರ್ಜುನ ಖರ್ಗೆ, ರೆಹಮಾನ್ ಖಾನ್ ಮತ್ತು ಕೆ.ಎಚ್. ಮುನಿಯಪ್ಪ ಈಚೆಗೆ ಅಹಮದ್ ಪಟೇಲ್, ಆಸ್ಕರ್ ಫರ್ನಾಂಡಿಸ್, ಅಂಬಿಕಾ ಸೋನಿ ಸೇರಿದಂತೆ ಅನೇಕರನ್ನು ಕಂಡು ತಮ್ಮ ಅಸಮಾಧಾನ ಹೊರಹಾಕಿದ್ದಾರೆ. `ಟಿಕೆಟ್ ಹಂಚುವಾಗ ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ನಿರ್ಲಕ್ಷ್ಯ ಮಾಡಲಾಗಿದೆ. ಈ ಪಟ್ಟಿಯಲ್ಲಿ ಬದಲಾವಣೆ ಮಾಡದಿದ್ದರೆ ಪಕ್ಷಕ್ಕೆ ಹಿನ್ನಡೆ ಆಗಬಹುದು' ಎಂದು ಎಚ್ಚರಿಸಿದ್ದಾರೆ.

ವಿಧಾನಸಭೆ 224 ಕ್ಷೇತ್ರಗಳ ಪೈಕಿ 177ಕ್ಕೆ ಮಾತ್ರ ಕಾಂಗ್ರೆಸ್ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ. ಆದರೆ, 200 ಕ್ಷೇತ್ರಗಳ ಪಟ್ಟಿ ಸಿದ್ಧವಾಗಿದೆ; ಎರಡು ಡಜನ್ ಕ್ಷೇತ್ರದಲ್ಲಿ ಮಾತ್ರ ಗೊಂದಲವಿದೆ ಎಂದು ಪಕ್ಷದ ನಾಯಕರು ಮೊದಲಿಗೆ ಹೇಳಿದ್ದರು. ಇದಕ್ಕೆ ವ್ಯತಿರಿಕ್ತವಾಗಿ, ಸುಮಾರು ನಾಲ್ಕು ಡಜನ್ ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿದೆ ಎನ್ನುವ ಅಂಶ  ಮೊದಲ ಪಟ್ಟಿ ಪ್ರಕಟವಾದ ಬಳಿಕ ಬಹಿರಂಗಗೊಂಡಿದೆ. ಅಭ್ಯರ್ಥಿಗಳ ಆಯ್ಕೆಗೆ  ಸೋನಿಯಾ ಗಾಂಧಿ ನೇತೃತ್ವದ ಚುನಾವಣಾ ಸಮಿತಿ ಕೆಲವು ಮಾನದಂಡ ನಿಗದಿಪಡಿಸಿತ್ತು. ಈ ಮಾನದಂಡಗಳಿಗೆ ಬೆಲೆ ಸಿಕ್ಕಿಲ್ಲ ಎನ್ನುವ ಸತ್ಯ ಕಾಂಗ್ರೆಸ್ ಪಟ್ಟಿ ಕಂಡ ಯಾರಿಗಾದರೂ ಅರ್ಥವಾಗುತ್ತದೆ. ವಿದೇಶದಿಂದ ಸೋನಿಯಾ ಹಿಂತಿರುಗಿದ ಬಳಿಕ ಅಭ್ಯರ್ಥಿಗಳ ಆಯ್ಕೆ ಬಿಕ್ಕಟ್ಟು ಅಂತ್ಯಗೊಳ್ಳಲಿದೆ ಎಂದು ಮೂಲಗಳು ಹೇಳಿವೆ.

`ಟಿಕೆಟ್ ಹಂಚಿಕೆಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ಆರೋಪಗಳನ್ನು ಪರಿಶೀಲಿಸಲು ಹಿರಿಯ ನಾಯಕರ ಸಮಿತಿ ರಚಿಸಿಲ್ಲ. ಈ ಸಂಬಂಧ ಯಾವುದೇ ದೂರುಗಳು ಹೈಕಮಾಂಡ್‌ಗೆ ಬಂದಿಲ್ಲ'
ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಧುಸೂದನ ಮಿಸ್ತ್ರಿ

`ಸಮಿತಿ ರಚನೆ ಬಗ್ಗೆ ನನಗೇನೂ ಮಾಹಿತಿ ಇಲ್ಲ'
ಜಿ. ಪರಮೇಶ್ವರ್ , ಕೆಪಿಸಿಸಿ ಅಧ್ಯಕ್ಷ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.