ಸಿತೇರಿ, ತಮಿಳುನಾಡು (ಪಿಟಿಐ): ಅರಕ್ಕೋಣಂ ಜಂಕ್ಷನ್‌ನಲ್ಲಿ ಮಂಗಳವಾರ ರಾತ್ರಿ ಸಂಭವಿಸಿದ ರೈಲುಗಳ ಡಿಕ್ಕಿಗೆ ಸಂಬಂಧಿಸಿದಂತೆ ನಡೆಯುವ ತನಿಖೆಯಿಂದಷ್ಟೇ ಕಾರಣ ತಿಳಿದು ಬರಲಿದ್ದು, ಮುಂದೆ ಇಂತಹ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಲು ಸಾಧ್ಯವಾಗುತ್ತದೆ ಎಂದು ರೈಲ್ವೆ ಸಚಿವ ದಿನೇಶ್ ತ್ರಿವೇದಿ ಹೇಳಿದರು.
ಯಾರನ್ನೇ ಆಗಲಿ ಘಟನೆಗೆ ಹೊಣೆ ಎಂದು ಈಗ ಹೇಳಲಾಗದು. ಬದಲಾಗಿ ಪೂರ್ಣ ತನಿಖೆಯ ನಂತರ ಈ ಬಗ್ಗೆ ನಿರ್ಣಯಕ್ಕೆ ಬರಹುದು ಎಂದರು.ಘಟನೆಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಅವರು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳುಗಳನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ವಿದ್ಯುತ್ ಚಾಲಿತ ರೈಲಿನ ಚಾಲಕ ಸಿಗ್ನಲ್‌ನಲ್ಲಿ ರೈಲು ನಿಲ್ಲಿಸಿದ್ದರೆ ಘಟನೆ ನಡೆಯುತ್ತಿರಲಿಲ್ಲ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ ಎಂದರು. ಮಂಗಳವಾರ ರಾತ್ರಿ ಕರ್ತವ್ಯಕ್ಕೆ ಹಾಜರಾಗುವ ಮುನ್ನ ಚಾಲಕ 15 ಗಂಟೆಗಳ ವಿಶ್ರಾಂತಿ ಪಡೆದಿದ್ದ ಎಂದೂ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ರೈಲು ಸಂಚಾರದಲ್ಲಿ ವ್ಯತ್ಯಯ
ಬೆಂಗಳೂರು/ಚೆನ್ನೈ (ಐಎಎನ್‌ಎಸ್): ಅರಕ್ಕೋಣಂ ಜಂಕ್ಷನ್‌ನಲ್ಲಿ ಮಂಗಳವಾರ ರಾತ್ರಿ ಸಂಭವಿಸಿದ ರೈಲುಗಳ ಡಿಕ್ಕಿಯಿಂದಾಗಿ, ತಮಿಳುನಾಡು ಹಾಗೂ ಕರ್ನಾಟಕದ ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.
ಬೆಂಗಳೂರು- ಚೆನ್ನೈ ಹಗಲು ಎಕ್ಸ್‌ಪ್ರೆಸ್ ರೈಲು ಸಂಚಾರ ರದ್ದು ಪಡಿಸಲಾಗಿದೆ. ಚೆನ್ನೈಗೆ ತೆರಳಬೇಕಾಗಿದ್ದ ಲಾಲ್‌ಬಾಗ್ ಮತ್ತು ಬೃಂದಾವನ ಇಂಟರ್‌ಸಿಟಿ ಸೂಪರ್‌ಪಾಸ್ಟ್, ಚೆನ್ನೈ ಮೂಲಕ ವಾರಣಾಸಿಗೆ ತೆರಳಬೇಕಾಗಿದ್ದ ಸಂಘಮಿತ್ರ ಎಕ್ಸ್‌ಪ್ರೆಸ್ ರೈಲಿನ ವೇಳಾಪಟ್ಟಿಯನ್ನು ಬದಲಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.