ADVERTISEMENT

ತನಿಖೆ ಕಾರ್ಯವೈಖರಿಗೆ ಟಾಟಾ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2011, 15:55 IST
Last Updated 24 ಫೆಬ್ರುವರಿ 2011, 15:55 IST

ನವದೆಹಲಿ (ಪಿಟಿಐ): ಕಾರ್ಪೊರೇಟ್ ವಲಯದ ಪ್ರಭಾವಿ ಮಹಿಳೆ ನೀರಾ ರಾಡಿಯಾ ಸೇರಿದಂತೆ ಇತರರು ಹಾಗೂ ತಮ್ಮೊಂದಿಗಿನ ಸಂಭಾಷಣೆಯ ಧ್ವನಿಮುದ್ರಿಕೆಗಳು ಸೋರಿಕೆಯಾದ ಸಂಗತಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ನಡೆಸುತ್ತಿರುವ ತನಿಖೆಯ ಕಾರ್ಯವೈಖರಿಗೆ ಟಾಟಾ ಸಮೂಹದ ಮುಖ್ಯಸ್ಥ ರತನ್ ಟಾಟಾ ತೀವ್ರ ಅತೃಪ್ತಿ ವ್ಯಕ್ತಪಡಿಸಿದ್ದಾರೆ.

ನೀರಾ ರಾಡಿಯಾ ಹಾಗೂ ತಮ್ಮೊಂದಿಗಿನ ಮಾತುಕತೆಯನ್ನು ಬಹಿರಂಗಪಡಿಸಬಾರದು ಎಂದು ರತನ್ ಟಾಟಾ ಕೇಂದ್ರ ಸರ್ಕಾರದ ವಿರುದ್ಧ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಗುರುವಾರ ವಿಚಾರಣೆ ನಡೆಯಿತು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಿ.ಎಸ್.ಸಿಂಘ್ವಿ ಹಾಗೂ ಎ.ಕೆ.ಗಂಗೂಲಿ ಅವರನ್ನೊಳಗೊಂಡ ಪೀಠಕ್ಕೆ ಈ ಕುರಿತು ಟಾಟಾ ಅವರ ಅಸಮಾಧಾನವನ್ನು ಅವರ ಪರ ಹಿರಿಯ ವಕೀಲ ಹರೀಶ್ ಸಾಳ್ವೆ ಅರುಹಿದರು. ‘ಯಾವ ಧ್ವನಿಮುದ್ರಿಕೆಗಳು ಅವಶ್ಯವಿದೆಯೊ ಅಂತಹವುಗಳನ್ನು ಇರಿಸಿಕೊಂಡು ಉಳಿದವುಗಳನ್ನು ತಕ್ಷಣವೇ ನಾಶಪಡಿಸಬೇಕು’ ಎಂದೂ ಅವರು ಇದೇ ಸಂದರ್ಭದಲ್ಲಿ ಮನವಿ ಮಾಡಿದರು. ಸಿಬಿಐ ವಿಚಾರಣೆ: 2 ಜಿ ಸ್ಪೆಕ್ಟ್ರಂ ಹಗರಣಕ್ಕೆ ಸಂಬಂಧಿಸಿದಂತೆ ಟಾಟಾ ಸಮೂಹ ಸಂಸ್ಥೆಯ ಹಿರಿಯ ಅಧಿಕಾರಿಗಳಾದ ಆರ್.ಕೃಷ್ಣಕುಮಾರ್ ಮತ್ತು ಜಿ.ಉಬಾಲೆ ಅವರನ್ನು ಸಿಬಿಐ ಗುರುವಾರ ಪ್ರಶ್ನಿಸಿತು.

ಇಬ್ಬರೂ ಅಧಿಕಾರಿಗಳು ಬೆಳಿಗ್ಗೆ ಸಿಬಿಐ ಕಚೇರಿಗೆ ಹಾಜರಾಗಿದ್ದರು. ಯುನಿಟೆಕ್ ಕಂಪೆನಿಗೆ  2 ಜಿ ಸ್ಪೆಕ್ಟ್ರಂ ಪರವಾನಗಿ ಪಡೆಯುವಲ್ಲಿ 1,600 ಕೋಟಿ ರೂಪಾಯಿ ಸಾಲ ಪಡೆಯಲಾದ ಸಂಬಂಧ ಇವರನ್ನು ಪ್ರಶ್ನಿಸಲಾಯಿತು ಎಂದು ತಿಳಿದು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.