ADVERTISEMENT

ತನಿಖೆ ವಿಳಂಬ: ಅಬ್ರಹಾಂ ದೂರು

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2018, 19:30 IST
Last Updated 5 ಏಪ್ರಿಲ್ 2018, 19:30 IST

ನವದೆಹಲಿ: ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಮೇಲಿರುವ ಭ್ರಷ್ಟಾಚಾರ ಆರೋಪದ ತನಿಖೆಗೆ ಸಂಬಂಧಿಸಿದಂತೆ ವಿಳಂಬ ಮತ್ತು ನಿರ್ಲಕ್ಷ್ಯ ಧೋರಣೆ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಹಾಂ ಅವರು ಸಿಬಿಐನ ಹಿರಿಯ ಅಧಿಕಾರಿಗಳಿಗೆ ಗುರುವಾರ ದೂರು ನೀಡಿದ್ದಾರೆ.

ಅಧಿಕಾರಿಗಳು ಮತ್ತು ಆರೋಪಿಗಳೊಂದಿಗಿನ ಅಪವಿತ್ರ ಮೈತ್ರಿಯು ಪ್ರಕರಣದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡಿದೆ ಎಂದು ಅವರು ಬ್ಯಾಂಕ್ ಭದ್ರತೆ ಮತ್ತು ವಂಚನೆ ವಿಭಾಗದ ಡಿಜಿಪಿಗೆ ನೀಡಿರುವ ದೂರಿನಲ್ಲಿ ಹೇಳಿದ್ದಾರೆ. ತಮ್ಮ ಮೇಲಿನ ದೂರನ್ನು ರದ್ದತಿಗೆ ಕೃಷ್ಣಯ್ಯ ಶೆಟ್ಟಿ 2014ರಲ್ಲಿ ರಾಜ್ಯ ಹೈಕೋರ್ಟ್‌ಗೆ ಸಲ್ಲಿಸಿರುವ ಮೇಲ್ಮನವಿ ಅರ್ಜಿ ಇದುವರೆಗೂ ಇತ್ಯರ್ಥಗೊಂಡಿಲ್ಲ, ಪ್ರಕರಣದ ವಿಚಾರಣೆ ವಿಳಂಬಕ್ಕೆ ಸಿಬಿಐ ಅಧಿಕಾರಿಗಳು ಕಾರಣ ಎಂದು ಅವರು ಹೇಳಿದ್ದಾರೆ.

ಎಚ್‍ಎಎಲ್, ಐಟಿಐ, ಎಡಿಇ, ಬಿಇಎಂಎಲ್, ಬಿಎಂಟಿಸಿ,ಬೆಸ್ಕಾಮ್, ಕೆಎಸ್‍ಆರ್‍ಟಿಸಿ, ನೋವಾ ಟೆಕ್ನಾಲಜೀಸ್ ಸಂಸ್ಥೆಗಳ ನಕಲಿ ವೇತನ ದಾಖಲೆಗಳನ್ನು ಸೃಷ್ಟಿಸಿ ಸ್ಟೇಟ್ ಬ್ಯಾಂಕ್ ಅಫ್ ಮೈಸೂರು ಶಾಖೆಯಿಂದ 2008ರಲ್ಲಿ ರೂ 7.17 ಕೋಟಿ ಸಾಲ ಪಡೆದು ಅವ್ತವಹಾರ ಎಸಗಿದ್ದು, ಇದರ ಬಗ್ಗೆ ಬ್ಯಾಂಕ್ ಅಧಿಕಾರಿಗಳೇ ಗಮನಿಸಿ ಸಿಬಿಐಗೆ ದೂರು ನೀಡಿದ್ದರು. ಪ್ರಕರಣದ ವಿಚಾರಣೆಗೆ ಸಿಬಿಐ ವಿಶೇಷ ನ್ಯಾಯಾಲಯ ಒಪ್ಪಿಗೆ ಸೂಚಿಸಿತ್ತು.ಇದನ್ನು ಪ್ರಶ್ನಿಸಿ ಕೃಷ್ಣಯ್ಯ ಶೆಟ್ಟಿ 2014ರಲ್ಲಿ ರಾಜ್ಯ ಹೈಕೋರ್ಟ್ ಗೆ ದೂರು ನೀಡಿ ಸಿಬಿಐ ತನಿಖೆ ಆದೇಶ ರದ್ದುಗೊಳಿಸಬೇಕು ಎಂದು ಕೋರಿದ್ದು, ಪ್ರಕರಣ ಇತ್ಯರ್ಥಗೊಂಡಿಲ್ಲ 2017ರ ಜುಲೈಯಲ್ಲಿ ಈ ಪ್ರಕರಣದ ವಿಚಾರಣೆ ಸಂದರ್ಭ ಒಂದು ವಾರದ ಬಳಿಕ ವಿಚಾರಣೆ‌ಗೆ ಹೈಕೋರ್ಟ್ ಆದೇಶಿಸಿತ್ತು. ಆದರೆ 8 ತಿಂಗಳು ಕಳೆದರೂ ವಿಚಾರಣೆಗೆ ಸಿಬಿಐ ಆಸಕ್ತಿ ತೋರುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ.

ADVERTISEMENT

ಬಿಜೆಪಿ ಮುಖಂಡರ ವಿರುದ್ಧ ಇರುವ ಪ್ರಕರಣಗಳ ವಿಚಾರಣೆ ನಡೆಸಬಾರದೆಂಬ ನಿರ್ದೇಶನ ಸಿಬಿಐಗೆ ಬಂದಿದೆಯೇ ಅಥವಾ ಭ್ರಷ್ಟಾಚಾರಬಪ್ರಕರಣಗಳ ಕುರಿತು ಸಿಬಿಐ ಇಂತಹ ಧೋರಣೆ ತಾಳಿದೆಯೇ ಎಂದು ಭಾವಿಸಬೇಕೇ ಎಂದು ಅಬ್ರಹಾಂ ದೂರಿನಲ್ಲಿ ಪ್ರಶ್ನಿಸಿದ್ದಾರೆ.

14 ದಿನಗಳಲ್ಲಿ ಪ್ರಕರಣದ ಬಗ್ಗೆ ಹೈ ಕೋರ್ಟ್ ನಲ್ಲಿ ವಿಚಾರಣೆ ನಡೆಯದಿದ್ದರೆ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಲಾಗುವುದು ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.