ADVERTISEMENT

ತಪ್ಪು ಜಾಹೀರಾತು ವಿರುದ್ಧ ಕ್ರಮಕ್ಕೆ ಹೊಸ ಕಾನೂನು

ಪಿಟಿಐ
Published 21 ಮಾರ್ಚ್ 2017, 19:30 IST
Last Updated 21 ಮಾರ್ಚ್ 2017, 19:30 IST
ನವದೆಹಲಿ: ಗ್ರಾಹಕರನ್ನು ರಕ್ಷಿಸುವ ಹೊಸ ಕಾನೂನನ್ನು ಕೇಂದ್ರ ಸರ್ಕಾರ ಜಾರಿಗೆ ತರಲಿದೆ. ಗ್ರಾಹಕರನ್ನು ತಪ್ಪು ದಾರಿಗೆ ಎಳೆಯುವ ಜಾಹೀರಾತು ಪ್ರಕಟಿಸುವ ಸಂಸ್ಥೆಗಳಿಗೆ ಕಠಿಣ ಶಿಕ್ಷೆ ವಿಧಿಸುವ ಅವಕಾಶ ಇರುವ ಕಾನೂನು ತರಲಾಗುವುದು ಎಂದು ಕೇಂದ್ರದ ಗ್ರಾಹಕ ವ್ಯವಹಾರಗಳ ಸಚಿವ ರಾಮ್‌ ವಿಲಾಸ್‌ ಪಾಸ್ವಾನ್‌ ಹೇಳಿದ್ದಾರೆ.
 
ಹುಸಿ ಮತ್ತು ತಪ್ಪು ದಾರಿಗೆ ಎಳೆಯುವ ಜಾಹೀರಾತುಗಳು ವಿವಿಧ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿವೆ ಎಂಬುದನ್ನು ಪಾಸ್ವಾನ್‌ ಅವರು ಲೋಕಸಭೆಯಲ್ಲಿ ಒಪ್ಪಿಕೊಂಡರು. ಇಂತಹ ಜಾಹೀರಾತು ಪ್ರಕಟಿಸುವ ಸಂಸ್ಥೆ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೆ ಅವಕಾಶ ಇರುವ ಕಾನೂನುಗಳು ಜಾರಿಯಲ್ಲಿವೆ ಎಂದರು. 
 
ಗ್ರಾಹಕ ರಕ್ಷಣೆಯ ಹೊಸ ಮಸೂದೆಯ ಕರಡು ಸಿದ್ಧವಾಗಿದ್ದು, ಸಂಪುಟ ಸದಸ್ಯರಿಗೆ  ನೀಡಲಾಗಿದೆ. ಈ ಮಸೂದೆಯಲ್ಲಿ ಹಲವು ಕಠಿಣ ಕ್ರಮಗಳನ್ನು ಪ್ರಸ್ತಾವಿಸಲಾಗಿದೆ ಎಂದು  ತಿಳಿಸಿದ್ದಾರೆ. 
 
ಗ್ರಾಹಕ ರಕ್ಷಣೆ ಮಸೂದೆ 2015ಕ್ಕೆ ಸಂಸತ್ತಿನ ಸ್ಥಾಯಿ ಸಮಿತಿಯು ಹಲವು ಬದಲಾವಣೆಗಳನ್ನು ಸೂಚಿಸಿದೆ. ಅವೆಲ್ಲವನ್ನೂ ಹೊಸ ಮಸೂದೆಯಲ್ಲಿ ಸೇರಿಸಲಾಗುವುದು ಎಂದು ಅವರು ಹೇಳಿದ್ದಾರೆ. 
 
ದಾರಿ ತಪ್ಪಿಸುವ ಜಾಹೀರಾತು ತಯಾರಿಸಿದವರು, ಅಭಿನಯಿಸಿದ ನಟ–ನಟಿಯರು ಮತ್ತು ಜಾಹೀರಾತಿನಲ್ಲಿ ಭಾಗಿಯಾದ ಎಲ್ಲರ ವಿರುದ್ಧ ಕ್ರಮ ಕೈಗೊಳ್ಳಲು ಹೊಸ ಕಾನೂನಿನಲ್ಲಿ ಅವಕಾಶ ಇರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.