ADVERTISEMENT

ತಮಿಳುನಾಡು ವಿಧಾನಸಭೆ : ಚುನಾವಣೆ ಮುಂದೂಡಿಕೆ ಅಸಾಧ್ಯ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2011, 19:30 IST
Last Updated 4 ಮಾರ್ಚ್ 2011, 19:30 IST

ನವದೆಹಲಿ (ಪಿಟಿಐ): ತಮಿಳುನಾಡಿನಲ್ಲಿ ಏಪ್ರಿಲ್ 13ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯನ್ನು ಮುಂದೂಡುವ ಸಾಧ್ಯತೆಯಿಲ್ಲ ಎಂದು  ಚುನಾವಣಾ ಆಯೋಗವು ಶುಕ್ರವಾರ ಹೇಳಿದೆ.

ತಮಿಳುನಾಡು ವಿರೋಧ ಪಕ್ಷ ಎಐಎಡಿಎಂಕೆ ಸೇರಿದಂತೆ ಪ್ರಮುಖ ರಾಜಕೀಯ ಪಕ್ಷಗಳು ಚುನಾವಣೆ ಮುಂದೂಡುವಂತೆ ಒತ್ತಾಯಿಸಿರುವ ಹಿನ್ನೆಲೆಯಲ್ಲಿ  ಚುನಾವಣಾ ಆಯೋಗ ಈ ರೀತಿ ಹೇಳಿದೆ.

ಚುನಾವಣೆ ನಡೆಯಲಿರುವ ಎಲ್ಲಾ ರಾಜ್ಯಗಳಲ್ಲಿನ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡೇ ಆಯೋಗ ಮಂಗಳವಾರದಂದು ಚುನಾವಣಾ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ ಎಂದು ಆಯೋಗದ ಆಯುಕ್ತ ಎಸ್.ವೈ.ಖುರೇಷಿ ಹೇಳಿದ್ದಾರೆ.

‘ನಾವು ಪ್ರತಿಯೊಂದು ಸಾಧ್ಯತೆಯನ್ನು ಗಮನಕ್ಕೆ ತೆಗೆದುಕೊಂಡಿದ್ದೇವೆ. ಅದೇ ದಿನ ಚುನಾವಣೆ ನಡೆಯಲಿರುವ ಇತರ ರಾಜ್ಯಗಳ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡಿದ್ದೇವೆ. ಹಾಗಾಗಿ ತಮಿಳುನಾಡಿನಲ್ಲಿ ಕೂಡ ಅದೇ ದಿನ ಚುನಾವಣೆ ನಡೆಯುವುದೇ ಸೂಕ್ತ’ ಎಂದು ಖುರೇಷಿ ಸುದ್ದಿಗಾರರಿಗೆ ತಿಳಿಸಿದರು. ತಮಿಳುನಾಡಿನಲ್ಲಿ ನಡೆಯಲಿರುವ ಚುನಾವಣೆಯನ್ನು ಮುಂದೂಡುವಂತೆ ಕೋರಿ ಎಐಎಡಿಎಂಕೆ ಮುಖ್ಯಸ್ಥೆ ಜಯಲಲಿತಾ ಗುರುವಾರ ಖುರೇಷಿಗೆ ಪತ್ರ ಬರೆದಿದ್ದರು.

ಚುನಾವಣಾ ವೇಳಾಪಟ್ಟಿ ಬಗ್ಗೆ ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರೂ ಬುಧವಾರ ಅಸಮಾಧಾನ ವ್ಯಕ್ತಪಡಿಸಿದ್ದರು. ವೇಳಾಪಟ್ಟಿ ಬಿಡುಗಡೆ ಮಾಡುವ ಮೊದಲು ಆಯೋಗ ಆಡಳಿತ ಪಕ್ಷದೊಂದಿಗೆ ಚರ್ಚೆ ನಡೆಸಿಲ್ಲ ಎಂದಿದ್ದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.