ADVERTISEMENT

ತಿಂಗಳಾಂತ್ಯಕ್ಕೆ ಕಾಂಗ್ರೆಸ್‌ ಅಭ್ಯರ್ಥಿಗಳ ಪಟ್ಟಿ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2019, 18:20 IST
Last Updated 9 ಫೆಬ್ರುವರಿ 2019, 18:20 IST

ನವದೆಹಲಿ: ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಕಾಂಗ್ರೆಸ್‌ ಅಭ್ಯರ್ಥಿಗಳ ಮೊದಲ ಪಟ್ಟಿ ಫೆಬ್ರುವರಿ ಅಂತ್ಯಕ್ಕೆ ಬಿಡುಗಡೆಯಾಗುವ ಸಾಧ್ಯತೆ ಇದೆ.

ಇದೇ 25ರ ಒಳಗಾಗಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಎಐಸಿಸಿಗೆ ಸಲ್ಲಿಸುವಂತೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿ ಅವರು ರಾಜ್ಯ ನಾಯಕರಿಗೆ ಸೂಚಿಸಿದ್ದಾರೆ.

ಎಲ್ಲ ರಾಜ್ಯಗಳ ಕಾಂಗ್ರೆಸ್‌ ಘಟಕದ ಮುಖಸ್ಥರು ಮತ್ತು ಶಾಸಕಾಂಗ ಪಕ್ಷಗಳ ನಾಯಕರ ಜತೆ ಶನಿವಾರ ಅವರು ಸಭೆ ನಡೆಸಿದ್ದಾರೆ.

ADVERTISEMENT

ಸತತವಾಗಿ ಎರಡು ಅಥವಾ ಮೂರು ಚುನಾವಣೆಗಳಲ್ಲಿ ಸೋತವರಿಗೆ ಟಿಕೆಟ್‌ ನೀಡಬಾರದು ಮತ್ತು ಒಂದು ಕುಟುಂಬದಿಂದ ಒಬ್ಬರಿಗೆ ಮಾತ್ರ ಟಿಕೆಟ್‌ ಕೊಡುವಂತೆ ತಾಕೀತು ಮಾಡಿದ್ದಾರೆ.

ತೊಗಾಡಿಯಾ ಹೊಸ ಪಕ್ಷ

ವಿಶ್ವ ಹಿಂದೂ ಪರಿಷತ್‌ (ವಿಎಚ್‌ಪಿ) ಮಾಜಿ ನಾಯಕ ಪ್ರವೀಣ್‌ ತೊಗಾಡಿಯಾ ಅವರು ಶನಿವಾರ ಹೊಸ ರಾಜಕೀಯ ಪಕ್ಷ ಹುಟ್ಟು ಹಾಕಿದ್ದಾರೆ.

ತೊಗಾಡಿಯಾ ನೇತೃತ್ವದ ‘ಹಿಂದೂಸ್ತಾನ ನಿರ್ಮಾಣ ದಳ’ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶ ಮತ್ತು ಗುಜರಾತ್‌ನಲ್ಲಿ ತನ್ನ ಅಭ್ಯರ್ಥಿ
ಗಳನ್ನು ಕಣಕ್ಕಿಳಿಸಲಿದೆ.

ಟಿಎಂಸಿ–ಕಾಂಗ್ರೆಸ್‌ ಮೈತ್ರಿ ಇಲ್ಲ

ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್‌ ಜತೆ ಮೈತ್ರಿ ಸಾಧ್ಯತೆಯನ್ನು ಕಾಂಗ್ರೆಸ್‌ ಶನಿವಾರ ತಳ್ಳಿ ಹಾಕಿದೆ.ಟಿಎಂಸಿ ಬದಲು ಎಡ ಪಕ್ಷಗಳ ಜತೆ ಕೈಜೋಡಿಸುವ ಬಗ್ಗೆ ಕಾಂಗ್ರೆಸ್‌ ಸುಳಿವು ನೀಡಿದೆ.ಭಾನುವಾರ ಕೋಲ್ಕತ್ತದಲ್ಲಿ ಆರಂಭವಾಗಲಿರುವ ಎರಡು ದಿನಗಳ ಸಿಪಿಎಂ ಪಾಲಿಟ್‌ ಬ್ಯುರೊ ಸಭೆಯಲ್ಲಿ ಕಾಂಗ್ರೆಸ್‌ ಜತೆ ಮೈತ್ರಿ ಬಗ್ಗೆ ನಿರ್ಧರಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ನಾಳೆ ಉತ್ತರ ಪ್ರದೇಶಕ್ಕೆ ಪ್ರಿಯಾಂಕಾ

ಲಖನೌ: ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾಗಿರುವ ಪ್ರಿಯಾಂಕಾ ಗಾಂಧಿ ಸೋಮವಾರ ಉತ್ತರ ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ.

ಕಾಂಗ್ರೆಸ್‌ ಅಧ್ಯಕ್ಷ ಹಾಗೂ ಸಹೋದರ ರಾಹುಲ್‌ ಗಾಂಧಿ ಮತ್ತು ಸಂಸದ ಜ್ಯೋತಿರಾಧಿತ್ಯ ಸಿಂಧಿಯಾ ಅವರು ಪ್ರಿಯಾಂಕಾ ಜತೆಗೆ ಇರಲಿದ್ದಾರೆ.

ವಿಮಾನ ನಿಲ್ದಾಣದಿಂದ ಪಕ್ಷದ ಕಚೇರಿವರೆಗೆ ಅವರು ರೋಡ್‌ ಶೊ ನಡೆಸಲಿದ್ದು, ಐತಿಹಾಸಿಕ ಸ್ವಾಗತ ನೀಡಲು ಕಾಂಗ್ರೆಸ್‌ ಸಜ್ಜಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.