ADVERTISEMENT

ತಿವಾರಿ ಮನವಿಗೆ ನಕಾರ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2011, 19:30 IST
Last Updated 10 ಫೆಬ್ರುವರಿ 2011, 19:30 IST

ನವದೆಹಲಿ (ಪಿಟಿಐ): ಡಿಎನ್‌ಎ ಪರೀಕ್ಷೆಗೆ ಒಳಗಾಗುವಂತೆ ಈ ಮೊದಲು ಸೂಚಿಸಿದ್ದ ತನ್ನ ಆದೇಶದ ವಿರುದ್ಧ ಕಾಂಗ್ರೆಸ್‌ನ ಹಿರಿಯ ನಾಯಕ ಎನ್.ಡಿ. ತಿವಾರಿ ಅವರು ಸಲ್ಲಿಸಿದ ಮನವಿಯನ್ನು ದೆಹಲಿ ಹೈಕೋರ್ಟ್ ಗುರುವಾರ ತಳ್ಳಿ  ಹಾಕಿದೆ. ತಿವಾರಿ ಅವರ ಅಕ್ರಮ ದೈಹಿಕ ಸಂಪರ್ಕದಿಂದ ಜನಿಸಿದ ಪುತ್ರ ತಾನು ಎಂದು ಹೇಳಿಕೊಂಡಿರುವ ದೆಹಲಿಯ ಯುವಕನ ಮನವಿ ಮೇರೆಗೆ ಡಿಎನ್‌ಎ ಪರೀಕ್ಷೆಗೆ ಒಳಗಾಗುವಂತೆ ಈ ಹಿಂದೆ ಹೈಕೋರ್ಟ್ ಆದೇಶಿಸಿತ್ತು.

ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಮತ್ತು ಸಿದ್ಧಾರ್ಥ ಮೃದುಲ್ ಅವರನ್ನು ಒಳಗೊಂಡ ವಿಭಾಗೀಯ ಪೀಠವು ತಿವಾರಿ ಅವರ ಮನವಿಯನ್ನು ತಿರಸ್ಕರಿಸಿತು. ಅಲ್ಲದೆ ಡಿಎನ್‌ಎ ಪರೀಕ್ಷೆ ಒಳಗಾಗುವಂತೆ ಸೂಚಿಸಿದ್ದ ಆದೇಶ ಪ್ರಶ್ನಿಸಿದ್ದಕ್ಕಾಗಿ ಇದೇ ವೇಳೆ ಅವರಿಗೆ ರೂ 25 ಸಾವಿರ ದಂಡವನ್ನು ವಿಧಿಸಿತು.

‘ಆದೇಶವನ್ನು ತಕ್ಷಣ ಪಾಲಿಸದಿದ್ದರೆ ದಾವೆಯೇ ವ್ಯರ್ಥ ಆಗಬಹುದು ಮತ್ತು ಪ್ರಮುಖ ಸಾಕ್ಷ್ಯಾಧಾರವು ನಶಿಸಿಹೋಗಬಹುದು. ಇದರಿಂದ ಅರ್ಜಿದಾರರಿಗೆ ತುಂಬಲಾಗದ ನಷ್ಟವಾಗಬಹುದು’ ಎಂದು ಪೀಠ ಹೇಳಿದೆ. ದೆಹಲಿಯ ರೋಹಿತ್ ಶೇಖರ್ ಎಂಬ ಯುವಕನು ತಿವಾರಿ ಅವರು ತನ್ನ ತಾಯಿ ಉಜ್ವಲಾ ಶರ್ಮಾ ಅವರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಫಲವಾಗಿ ತಾನು ಜನಿಸಿದೆ ಎಂದು ಹೇಳಿಕೊಂಡಿದ್ದು ಕೋರ್ಟ್ ಮೊರೆ ಹೋಗಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.