ADVERTISEMENT

ತಿವಾರಿ ಸಾವಿನ ತನಿಖೆಗೆ ಅತೃಪ್ತಿ

ಹೈಕೋರ್ಟ್‌ ಮೊರೆ ಹೋಗಲು ಕುಟುಂಬದ ಚಿಂತನೆ

​ಪ್ರಜಾವಾಣಿ ವಾರ್ತೆ
Published 4 ಜೂನ್ 2017, 19:03 IST
Last Updated 4 ಜೂನ್ 2017, 19:03 IST
ತಿವಾರಿ ಸಾವಿನ ತನಿಖೆಗೆ ಅತೃಪ್ತಿ
ತಿವಾರಿ ಸಾವಿನ ತನಿಖೆಗೆ ಅತೃಪ್ತಿ   

ಲಖನೌ: ಕರ್ನಾಟಕ ವೃಂದದ ಐಎಎಸ್‌ ಅಧಿಕಾರಿ ಅನುರಾಗ್‌ ತಿವಾರಿ ಅವರ ನಿಗೂಢ ಸಾವಿನ ತನಿಖೆ ಬಗ್ಗೆ ಅತೃಪ್ತಿ ಹೊಂದಿರುವ ಅವರ ಕುಟುಂಬ, ನ್ಯಾಯಾಲಯಕ್ಕೆ ದೂರು ನೀಡಲು ಚಿಂತಿಸುತ್ತಿದೆ.

ತನಿಖೆಯನ್ನು ಸಿಬಿಐ ತಕ್ಷಣದಿಂದಲೇ ಕೈಗೆತ್ತಿಕೊಳ್ಳಬೇಕು ಎಂದು ಕೋರಿ ಅಲಹಾಬಾದ್‌ ಹೈಕೋರ್ಟ್‌ನ ಲಖನೌ ಪೀಠಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಕುಟುಂಬದ ಮೂಲಗಳು ಹೇಳಿವೆ.

ಪ್ರಕರಣದ ತನಿಖೆಯನ್ನು ಸಿಬಿಐ ವಹಿಸಿಕೊಳ್ಳಬೇಕು ಎಂದು ಉತ್ತರ ಪ್ರದೇಶ ಸರ್ಕಾರ ಈಗಾಗಲೇ ಶಿಫಾರಸು ಮಾಡಿದೆ. ಆದರೆ ಸಿಬಿಐ ಇನ್ನೂ ತನಿಖೆ ಆರಂಭಿಸಿಲ್ಲ.

ADVERTISEMENT

ಉತ್ತರ ಪ್ರದೇಶದ ಹಿರಿಯ ಐಎಎಸ್‌ ಅಧಿಕಾರಿ ಅಮಿತಾಭ್‌ ಠಾಕೂರ್‌ ಅವರನ್ನು ಅನುರಾಗ್‌ ಅವರ ಸಹೋದರ ಅಲೋಕ್‌ ತಿವಾರಿ ಅವರು ಭೇಟಿಯಾಗಿ ನೆರವು ನೀಡುವಂತೆ ಕೋರಿದ್ದಾರೆ. ಸಾವಿಗೆ ಸಂಬಂಧಿಸಿದ ತನಿಖೆಯಲ್ಲಿ ಯಾವ ಹೊಸ ವಿಚಾರವೂ ಬಹಿರಂಗವಾಗಿಲ್ಲ ಎಂದು ಅನುರಾಗ್‌ ಅವರ ಹೆಂಡತಿ ನೂತನ್‌ ಹೇಳಿದ್ದಾರೆ.

ಇಬ್ಬರು ಸದಸ್ಯರ ವಿಶೇಷ ತನಿಖಾ ತಂಡ ಇತ್ತೀಚೆಗೆ ಬೆಂಗಳೂರಿಗೆ ಭೇಟಿ ನೀಡಿ ತನಿಖೆ ನಡೆಸಿತ್ತು. ಈ ತಂಡ ಶನಿವಾರ ಲಖನೌಗೆ ಹಿಂದಿರುಗಿದೆ.

ಕರ್ನಾಟಕದ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯಲ್ಲಿ ಆಯುಕ್ತರಾಗಿದ್ದ ಅನುರಾಗ್‌ ಅವರ ಮೃತದೇಹ ಕಳೆದ ತಿಂಗಳು ಲಖನೌದ ರಸ್ತೆ ಬದಿಯಲ್ಲಿ ಪತ್ತೆಯಾಗಿತ್ತು. ಮರಣೋತ್ತರ ಪರೀಕ್ಷೆಯಲ್ಲಿಯೂ ಸಾವಿಗೆ ಏನು ಕಾರಣ ಎಂಬುದು ಸ್ಪಷ್ಟವಾಗಿ ತಿಳಿದು ಬಂದಿಲ್ಲ.

* ವಿಶೇಷ ತನಿಖಾ ತಂಡದ ತನಿಖೆ ಔಪಚಾರಿಕತೆ ಮಾತ್ರ. ತಂಡವು ತನಿಖೆಯನ್ನು ಗಂಭೀರವಾಗಿ ಪರಿಗಣಿಸಿಯೇ ಇಲ್ಲ.

– ತಿವಾರಿ ಕುಟುಂಬದ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.