ADVERTISEMENT

ತಿಹಾರ್‌ನಲ್ಲಿ ಅಮರ್‌ಸಿಂಗ್‌ಗೆ ಪ್ರತ್ಯೇಕ ಕೊಠಡಿ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2011, 19:30 IST
Last Updated 9 ಸೆಪ್ಟೆಂಬರ್ 2011, 19:30 IST

ನವದೆಹಲಿ (ಪಿಟಿಐ): ವೋಟಿಗಾಗಿ ನೋಟು ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ರಾಜ್ಯಸಭಾ ಸದಸ್ಯ ಅಮರ್‌ಸಿಂಗ್ ಅವರನ್ನು ಜೈಲಿನಲ್ಲಿ ನೈರ್ಮಲ್ಯ ಕಾಯ್ದುಕೊಂಡಿರುವ ಪ್ರತ್ಯೇಕ ಕೊಠಡಿಯಲ್ಲಿ ಇರಿಸಲಾಗಿದೆ ಎಂದು ತಿಹಾರ್ ಜೈಲಿನ ಅಧಿಕಾರಿಗಳು ದೆಹಲಿ ಕೋರ್ಟ್‌ಗೆ ಶುಕ್ರವಾರ ಮಾಹಿತಿ ನೀಡಿದ್ದಾರೆ.

ಆರೋಗ್ಯದ ಹಿನ್ನೆಲೆಯಲ್ಲಿ  ಜಾಮೀನು ನೀಡಬೇಕೆಂದು ಕೋರಿ  ಅಮರ್‌ಸಿಂಗ್ ಅರ್ಜಿ ಸಲ್ಲಿಸಿದ್ದರು.
ವಿಶೇಷ ನ್ಯಾಯಮೂರ್ತಿ ಸಂಗೀತಾ ಧಿಂಗ್ರ ಸೆಹ್‌ಗಲ್ ಅವರಿಗೆ ಜೈಲಿನ ಅಧಿಕಾರಿಗಳು ಫ್ಯಾಕ್ಸ್ ಮೂಲಕ ವರದಿ ಸಲ್ಲಿಸಿದ್ದಾರೆ. ಸಿಂಗ್ ಅವರ ಕೆಲವು ವೈದ್ಯಕೀಯ ಪರೀಕ್ಷೆಗಳ ಫಲಿತಾಂಶ ಇನ್ನೂ ಬರಬೇಕಿದೆ ಎಂದೂ ವರದಿ ಹೇಳಿದೆ.

ವರದಿಯನ್ನು ಸ್ವೀಕರಿಸಿದ ಬಳಿಕ ಕೋರ್ಟ್ ಜಾಮೀನು ಅರ್ಜಿ ವಿಚಾರಣೆಯನ್ನು ಈ ತಿಂಗಳ 12ಕ್ಕೆ ನಿಗದಿಗೊಳಿಸಿತು ಅಲ್ಲದೆ ಎಲ್ಲಾ ವೈದ್ಯಕೀಯ ವರದಿಗಳನ್ನು ಸೋಮವಾರ ಬೆಳಿಗ್ಗೆ 11ರ ವೇಳೆಗೆ ಸಲ್ಲಿಸುವಂತೆ ಕೂಡ ಜೈಲಿನ ಅಧಿಕಾರಿಗಳಿಗೆ ಸೂಚಿಸಿತು.

`ಅಮರ್‌ಸಿಂಗ್ ಅವರನ್ನು ಪರೀಕ್ಷಿಸುತ್ತಿರುವ ವೈದ್ಯರ ಪ್ರಕಾರ, ರಕ್ತ ಮತ್ತು ಮೂತ್ರ ಪರೀಕ್ಷೆಯಂತಹ ಕೆಲವು ವೈದ್ಯಕೀಯ ಪರೀಕ್ಷೆಗಳಿಗೆ ಸಲಹೆ ನೀಡಲಾಗಿದೆ. ಇವುಗಳ ಫಲಿತಾಂಶ ಇನ್ನೂ ಬರಬೇಕಿದ್ದು ಈ ವರದಿಯನ್ನು ಈ ತಿಂಗಳ 12ರಂದು ಬೆಳಿಗ್ಗೆ 11ರ ವೇಳೆಗೆ ಸಲ್ಲಿಸಬೇಕು~ ಎಂದು ನ್ಯಾಯಮೂರ್ತಿ ಹೇಳಿದರು.

ತುರ್ತು ಸ್ಥಿತಿಯಲ್ಲಿ ರೋಗಿಗಳನ್ನು ಸೂಕ್ತ ಆಸ್ಪತ್ರೆಗೆ ಕೊಂಡೊಯ್ಯಲು ಜೈಲಿನ ಆಸ್ಪತ್ರೆಯು ಸುಸಜ್ಜಿತವಾದ ಆಂಬುಲೆನ್ಸ್ ಹೊಂದಿದೆ ಎಂದೂ ಜೈಲಿನ ಅಧಿಕಾರಿಗಳು ತಮ್ಮ ವರದಿಯಲ್ಲಿ ತಿಳಿಸಿದ್ದಾರೆ.ಈ ತಿಂಗಳ 6ರಂದು ಬಂಧನಕ್ಕೆ ಒಳಗಾದ ಸಿಂಗ್ ಅವರನ್ನು ಜೈಲ್ ನಂಬರ್ ಮೂರರ ನಾಲ್ಕನೇ ವಾರ್ಡ್‌ನಲ್ಲಿ ಇರಿಸಲಾಗಿದೆ.

ಇಲ್ಲಿ 20 ಕೋಣೆಗಳು ಇವೆ. ಪ್ರತಿ ಕೋಣೆಗೂ ಪ್ರತ್ಯೇಕ ಶೌಚಾಲಯ ಮತ್ತು ಸ್ನಾನಗೃಹವಿದೆ ಎಂದು ಹೇಳಿದ್ದಾರೆ.
ವೈದ್ಯಕೀಯ ಪರೀಕ್ಷೆಗಾಗಿ ಈ ಮೊದಲು ತಮ್ಮ ರಕ್ತ ನೀಡಲು ನಿರಾಕರಿಸಿದ್ದ ಸಿಂಗ್ ಶುಕ್ರವಾರ ಬೆಳಿಗ್ಗೆ ಇದಕ್ಕೆ ಒಪ್ಪಿಕೊಂಡರು ಎಂದು ವರದಿ ಹೇಳಿದೆ.

ಕಳೆದ ಮೂರು ದಿನಗಳಲ್ಲಿ ಸಿಂಗ್ ಅವರು ತಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ ಯಾವುದೇ ದೂರು ನೀಡಿಲ್ಲ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.`ವರದಿಗಳು ಸಮಗ್ರವಾಗಿಲ್ಲ, ಅವಸರದಲ್ಲಿ ಸಿದ್ಧಪಡಿಸಿರುವಂತಿದೆ, ಜೈಲಿನ ಅಧೀಕ್ಷರ ಅಭಿಪ್ರಾಯವನ್ನು ಆಧಾರವಾಗಿರಿಸಿಕೊಳ್ಳಲು ಸಾಧ್ಯವಿಲ್ಲ~ ಎಂದು ಸಿಂಗ್ ಪರ ವಕೀಲ ಹರಿಹರನ್ ಕೋರ್ಟ್‌ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.