ADVERTISEMENT

ತೆಲಂಗಾಣ ಖಚಿತ

ಕಾಂಗ್ರೆಸ್ ಕಾರ್ಯಕಾರಿಣಿಯಲ್ಲಿ ಅಂತಿಮ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 26 ಜುಲೈ 2013, 19:59 IST
Last Updated 26 ಜುಲೈ 2013, 19:59 IST
ತೆಲಂಗಾಣ ಖಚಿತ
ತೆಲಂಗಾಣ ಖಚಿತ   

ನವದೆಹಲಿ/ಹೈದರಾಬಾದ್(ಪಿಟಿಐ): ಆಂಧ್ರಪ್ರದೇಶ ತೆಲಂಗಾಣ ಪ್ರಾಂತ್ಯದ ಜನರು ಹಲವು ವರ್ಷಗಳಿಂದ ಕುತೂಹಲದಿಂದ ಎದುರು ನೋಡುತ್ತಿರುವ ಪ್ರತ್ಯೇಕ ರಾಜ್ಯ ರಚನೆಗೆ ಕೊನೆಗೂ ಕಾಲ ಕೂಡಿ ಬಂದಿದೆ.

ಈ ದಿಸೆಯಲ್ಲಿ ಅಭಿಪ್ರಾಯ ಸಂಗ್ರಹ ಪ್ರಕ್ರಿಯೆ ಪೂರ್ಣಗೊಂಡಿದ್ದು, ಕಾಂಗ್ರೆಸ್ ಕಾರ್ಯಕಾರಿಣಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ. ಸೋನಿಯಾ ಗಾಂಧಿ ಅಧ್ಯಕ್ಷತೆಯಲ್ಲಿ ಶುಕ್ರವಾರ ರಾತ್ರಿ ನಡೆದ ಕಾಂಗ್ರೆಸ್ ಪ್ರಮುಖರ ಸಭೆಯ ಬಳಿಕ ಈ ಸೂಚನೆ ಹೊರಬಿದ್ದಿದೆ.
ಸುಮಾರು ಎರಡು ತಾಸುಗಳ ಕಾಲ ನಡೆದ ಸಭೆಯಲ್ಲಿ ಪ್ರಧಾನಿ ಮನಮೋಹನ್ ಸಿಂಗ್, ಸಚಿವರಾದ ಎ.ಕೆ.ಆಂಟನಿ, ಪಿ.ಚಿದಂಬರಂ, ಸುಶೀಲ್ ಕುಮಾರ್ ಶಿಂಧೆ ಹಾಗೂ ಗುಲಾಂ ನಬಿ ಆಜಾದ್ ಭಾಗವಹಿಸಿದ್ದರು.

`ತೆಲಂಗಾಣ ವಿಷಯವಾಗಿ ಅಭಿಪ್ರಾಯ ಸಂಗ್ರಹ ಪ್ರಕ್ರಿಯೆ ಮುಗಿದಿದ್ದು, ಕಾಂಗ್ರೆಸ್ ಹಾಗೂ ಯುಪಿಎ ಸರ್ಕಾರದ ನಿರ್ಧಾರ ಮಾತ್ರ ಹೊರಬೀಳಬೇಕಿದೆ' ಎಂದು ಆಂಧ್ರಪ್ರದೇಶದಲ್ಲಿ ಎಐಸಿಸಿ ಉಸ್ತುವಾರಿಯಾಗಿರುವ ದಿಗ್ವಿಜಯ್ ಸಿಂಗ್ ಸುದ್ದಿಗಾರರಿಗೆ ತಿಳಿಸಿದರು.
ಕಾಂಗ್ರೆಸ್ ಪ್ರಮುಖರ ಸಭೆಗೂ ಮುನ್ನ ದಿಗ್ವಿಜಯ್ ಅವರು ಮುಖ್ಯಮಂತ್ರಿ ಕಿರಣ್ ಕುಮಾರ್ ರೆಡ್ಡಿ ಸೇರಿದಂತೆ ಆಂಧ್ರದ ಪ್ರಮುಖ ನಾಯಕರೊಂದಿಗೆ ಮೂರು ತಾಸುಗಳ ಕಾಲ ಸಮಾಲೋಚನೆ ನಡೆಸಿದ್ದರು.

ಅಖಂಡ ಆಂಧ್ರಪ್ರದೇಶ ಉಳಿಸಿಕೊಳ್ಳಲು ಶುಕ್ರವಾರ ದೆಹಲಿಗೆ ದೌಡಾಯಿಸಿದ್ದ ಆಂಧ್ರದ ಮುಖಂಡರಿಗೆ ನಿರಾಸೆ ಕಾದಿತ್ತು.
ಫಲಿಸದ ಕೊನೆಯ ಪ್ರಯತ್ನ: ರಾಜ್ಯದ ವಿಭಜನೆ  ತಡೆಯಲು ಮುಖ್ಯಮಂತ್ರಿ ಕಿರಣ್ ಕುಮಾರ್ ರೆಡ್ಡಿ ನೇತೃತ್ವದ ನಿಯೋಗ ಮಾಡಿದ ಕೊನೆಯ ಪ್ರಯತ್ನ ಫಲಿಸಲಿಲ್ಲ. ಆಂಧ್ರಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬೊತ್ಸ ಸತ್ಯನಾರಾಯಣ ರೆಡ್ಡಿ, ಉಪಮುಖ್ಯಮಂತ್ರಿ ದಾಮೋದರ್ ರಾಜನರಸಿಂಹ ನಿಯೋಗದಲ್ಲಿ ಇದ್ದರು.

ತೆಲಂಗಾಣ ವಿಷಯವಾಗಿ ಶುಕ್ರವಾರ ಇಡೀ ದಿನ ರಾಜಧಾನಿ ದೆಹಲಿ ಬಿರುಸಿನ ರಾಜಕೀಯ ಚಟುವಟಿಕೆಗೆ ಸಾಕ್ಷಿಯಾಗಿತ್ತು. ಪ್ರತ್ಯೇಕ ರಾಜ್ಯ ಬೇಡಿಕೆಯ ಪರ ಹಾಗೂ ವಿರೋಧಿ ಬಣದವರು ಕೇಂದ್ರ ನಾಯಕತ್ವದ ಮೇಲೆ ಒತ್ತಡ ಹಾಕಲು ಇಲ್ಲಿಗೆ ಬಂದಿದ್ದರು.

ದಿಢೀರ್ ಬದಲಾದ ನಿಲುವು:  ಪ್ರತ್ಯೇಕ ತೆಲಂಗಾಣ ರಚನೆ ಬೇಡಿಕೆ ವಿಷಯವನ್ನು ಕಾಂಗ್ರೆಸ್ ಮುಖಂಡರು ಹೈಕಮಾಂಡ್ ಮರ್ಜಿಗೆ ಬಿಟ್ಟಿದ್ದರು. ಪ್ರತ್ಯೇಕ ರಾಜ್ಯ ರಚನೆಗೆ ಆರಂಭದಲ್ಲಿ ವೈಎಸ್‌ಆರ್ ಕಾಂಗ್ರೆಸ್ ಪಕ್ಷ ಕೂಡ ಒಪ್ಪಿಗೆ ನೀಡಿತ್ತು. ಆದರೆ ಮೊದಲ ಹಂತದ ಪಂಚಾಯ್ತಿ ಚುನಾವಣೆ ಬಳಿಕ ಅದರ ನಿಲುವು ಏಕಾಏಕಿ ಬದಲಾಯಿತು. ಮೆಹಬೂಬ್ ನಗರ ಬಿಟ್ಟರೆ ತೆಲಂಗಾಣ ಭಾಗದ ಯಾವುದೇ ಜಿಲ್ಲೆಯಲ್ಲಿ ಪಕ್ಷದ ಹಿಡಿತ ಇಲ್ಲ.  ಬಹುಶಃ ಇದೇ ಕಾರಣಕ್ಕೆ ಪಕ್ಷವು `ಅಖಂಡ ಆಂಧ್ರ' ನಿಲುವಿಗೆ ಅಂಟಿಕೊಳ್ಳಬೇಕಾಯಿತು.

ಅಚ್ಚರಿ: ಪ್ರತ್ಯೇಕ ತೆಲಂಗಾಣ ವಿರೋಧಿಸಿ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ 16 ಶಾಸಕರು ರಾಜೀನಾಮೆ ನೀಡಿರುವುದು ತೆಲಂಗಾಣ ಪ್ರಾಂತ್ಯದ ಪಕ್ಷದ ನಾಯಕರಿಗೆ ಮಾತ್ರವಲ್ಲ, ಆಡಳಿತಾರೂಢ ಕಾಂಗ್ರೆಸ್ ಹಾಗೂ ವಿರೋಧ ಪಕ್ಷ ಟಿಡಿಪಿಗೂ ಅಚ್ಚರಿ ಮೂಡಿಸಿತ್ತು.

ಗೌರವಾಧ್ಯಕ್ಷೆ ವೈ.ಎಸ್.ವಿಜಯಮ್ಮ ಅವರನ್ನು ಬಿಟ್ಟು ಉಳಿದ ಎಲ್ಲ ಶಾಸಕರೂ ರಾಜೀನಾಮೆ ನೀಡಿರುವುದನ್ನು ಪಕ್ಷದ ನಿರ್ಧಾರ ಎಂದು ಬಿಂಬಿಸಲಾಗಿದೆ. ಮೊದಲಿನಿಂದಲೂ ಪ್ರತ್ಯೇಕ ರಾಜ್ಯ ರಚನೆ ಬೇಡಿಕೆ ಬೆಂಬಲಿಸುತ್ತ ಬಂದಿರುವ, ತೆಲಂಗಾಣ ಪ್ರಾಂತ್ಯದ ಮಾಜಿ ಸಚಿವೆ ಕೊಂಡ ಸುರೇಖಾ, ಪಕ್ಷದಲ್ಲಿನ ಈ ಬೆಳವಣಿಗೆ ಬಗ್ಗೆ ತೀವ್ರ ಅಸಮಾಧಾನಗೊಂಡಿದ್ದಾರೆ. ತೆಲಂಗಾಣ ವಿಷಯದಲ್ಲಿ ಪಕ್ಷದ ನಿಲುವು ಸ್ಪಷ್ಟಪಡಿಸುವಂತೆ ವಿಜಯಮ್ಮ ಅವರಿಗೆ ಗಡುವು ನೀಡಿದ್ದಾರೆ. ಅಲ್ಲದೇ ಶಾಸಕರ ರಾಜೀನಾಮೆಗೆ ಸ್ಪಷ್ಟನೆ ನೀಡುವಂತೆಯೂ ಆಗ್ರಹಿಸಿದ್ದಾರೆ.

ಪ್ರಮುಖ ಸವಾಲು: ಸೀಮಾಂಧ್ರ ವಲಯದ ಜನರ ಹಿತಾಸಕ್ತಿ ರಕ್ಷಿಸುವುದು ಇದೀಗ ಕಾಂಗ್ರೆಸ್ ನಾಯಕತ್ವಕ್ಕೆ ದೊಡ್ಡ ಸವಾಲಾಗಿದೆ. ಅಖಂಡ ಆಂಧ್ರದ ರಾಜಧಾನಿಯಾಗಿರುವ ಹೈದರಾಬಾದ್, ಉದ್ದೇಶಿತ ತೆಲಂಗಾಣ ರಾಜ್ಯದ ಹೃದಯ ಭಾಗದಲ್ಲಿಯೇ ಇರುವುದರಿಂದ ರಾಯಲ್‌ಸೀಮೆ ಹಾಗೂ ಕರಾವಳಿ ಆಂಧ್ರವನ್ನು ಒಳಗೊಂಡ ಸೀಮಾಂಧ್ರ ಜನರ ವಾಣಿಜ್ಯ ವಹಿವಾಟಿಗೆ ಧಕ್ಕೆಯಾಗಲಿದೆ.

ಹೈದರಾಬಾದ್ ನಗರ ವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಬೇಕು ಎನ್ನುವುದು ಸೀಮಾಂಧ್ರ ಜನರ ಒತ್ತಾಯ. `ಹೈದರಾಬಾದ್ ಹೊಸ ರಾಜ್ಯದ ರಾಜಧಾನಿಯಾಗಬೇಕೇ ಹೊರತೂ ಕೇಂದ್ರಾಡಳಿತ ಪ್ರದೇಶವನ್ನಾಗಿ ಅದನ್ನು ಒಪ್ಪಿಕೊಳ್ಳಲಾಗದು. ಬೇಕಿದ್ದಲ್ಲಿ ಕೆಲ ವರ್ಷಗಳ ಕಾಲ ರಾಜಧಾನಿಯನ್ನು ಹಂಚಿಕೊಳ್ಳಲು ಸಿದ್ಧ' ಎಂಬುದು ತೆಲಂಗಾಣ ಜನರ ವಾದ.

ಮತ್ತಿಬ್ಬರು ಶಾಸಕರ ರಾಜೀನಾಮೆ: ಆಂಧ್ರಪ್ರದೇಶ ವಿಭಜನೆ ವಿರೋಧಿಸಿ ಸೀಮಾಂಧ್ರ ಪ್ರಾಂತ್ಯದ ಮತ್ತಿಬ್ಬರು ಶಾಸಕರು ಶುಕ್ರವಾರ ರಾಜೀನಾಮೆ ಘೋಷಿಸಿದ್ದಾರೆ.

ಪ್ರತ್ಯೇಕ ತೆಲಂಗಾಣ ರಚನೆ ನಿರ್ಧಾರ  ವಿರೋಧಿಸಿ ರಾಜೀನಾಮೆ ಕೊಟ್ಟ ಶಾಸಕರ ಸಂಖ್ಯೆ 19ಕ್ಕೆ ಏರಿದೆ. ವೈಎಸ್‌ಆರ್ ಕಾಂಗ್ರೆಸ್ ಪಕ್ಷದ 16 ಶಾಸಕರು ಹಾಗೂ ಆಡಳಿತಾರೂಢ ಕಾಂಗ್ರೆಸ್ ಶಾಸಕರೊಬ್ಬರು ಗುರುವಾರ ರಾಜೀನಾಮೆ ನೀಡಿದ್ದರು. ಇದೀಗ ಕಾಂಗ್ರೆಸ್‌ನ ಇನ್ನಿಬ್ಬರು ಶಾಸಕರು ಸ್ಪೀಕರ್ ಎನ್.ಮನೋಹರ್ ಅವರಿಗೆ ರಾಜೀನಾಮೆ ಪತ್ರ ಕಳಿಸಿದ್ದಾರೆ. `ಸ್ಪೀಕರ್‌ಗೆ ರಾಜೀನಾಮೆ ಪತ್ರವನ್ನು ಫ್ಯಾಕ್ಸ್ ಮಾಡಿದ್ದೇವೆ' ಎಂದು ಕರಾವಳಿ ಆಂಧ್ರ ನೆಲ್ಲೂರು ಜಿಲ್ಲೆಯ ಕಾಂಗ್ರೆಸ್ ಶಾಸಕರಾದ ಶ್ರೀಧರ್ ಕೃಷ್ಣ ರೆಡ್ಡಿ ಹಾಗೂ ಪ್ರಭಾಕರ್ ರೆಡ್ಡಿ ಸುದ್ದಿಗಾರರಿಗೆ ತಿಳಿಸಿದರು.

ಶಾಸಕರ ರಾಜೀನಾಮೆ ಪರ್ವವು 2009ರಲ್ಲಿ ಉದ್ಭವಿಸಿದ್ದ ಪರಿಸ್ಥಿತಿಯನ್ನು ನೆನಪಿಸುತ್ತದೆ. ಆಗ ಕೇಂದ್ರವು ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆ ಪ್ರಕ್ರಿಯೆ ಘೋಷಿಸಿದ ಬಳಿಕ ಸೀಮಾಂಧ್ರ ಶಾಸಕರು ಪಕ್ಷಭೇದ ಮರೆತು ರಾಜೀನಾಮೆ ನೀಡಿದ್ದರು.

ಅಖಂಡ ಆಂಧ್ರಕ್ಕೆ ಆಗ್ರಹಿಸಿ ಪ್ರತಿಭಟನೆ: ಅಖಂಡ ಆಂಧ್ರವನ್ನು ಬೆಂಬಲಿಸಿ ಶುಕ್ರವಾರ ರಾಯಲ್‌ಸೀಮೆ ಹಾಗೂ ಕರಾವಳಿ ಆಂಧ್ರ ಪ್ರಾಂತ್ಯದ ಹಲವು ಕಡೆ ಪ್ರತಿಭಟನೆಗಳು ನಡೆದವು.

ಪ್ರತ್ಯೇಕ ತೆಲಂಗಾಣ ವಿರೋಧಿಸಿ ರ‍್ಯಾಲಿ, ಧರಣಿ  ನಡೆಯಿತು.

ತೆಲಂಗಾಣ ಹೊರಳು ನೋಟ
2009, ಡಿಸೆಂಬರ್ 9: 
ಕೇಂದ್ರದಿಂದ ತೆಲಂಗಾಣ ಪ್ರತ್ಯೇಕ ರಾಜ್ಯ ರಚನೆ ಪ್ರಕ್ರಿಯೆ ಘೋಷಣೆ.

2009, ಡಿಸೆಂಬರ್ 23: ಪ್ರತ್ಯೇಕ ರಾಜ್ಯ ರಚನೆ ನಿರ್ಧಾರಕ್ಕೆ ತಡೆ

2009ರಿಂದ ತೀವ್ರಗೊಂಡ ತೆಲಂಗಾಣ ಚಳವಳಿ. ಹೋರಾಟದ ಕೇಂದ್ರಬಿಂದುವಾದ ಉಸ್ಮಾನಿಯಾ ವಿ.ವಿ.

ತೆಲಂಗಾಣ ಪ್ರಾಂತ್ಯದ ಹತ್ತು ಜಿಲ್ಲೆಗಳು: ಹೈದರಾಬಾದ್, ಅದಿಲಾಬಾದ್, ಖಮ್ಮಂ, ಕರೀಂನಗರ, ಮೆಹಬೂಬ್‌ನಗರ, ಮೇದಕ್, ನಲಗೊಂಡ, ನಿಜಾಮಾಬಾದ್, ರಂಗಾರೆಡ್ಡಿ ಹಾಗೂ ವಾರಂಗಲ್
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.