ADVERTISEMENT

ತೆಲಂಗಾಣ: ಹೈಕಮಾಂಡ್‌ಗೆ ಸಿಎಂ ಸವಾಲು

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2013, 14:02 IST
Last Updated 9 ಡಿಸೆಂಬರ್ 2013, 14:02 IST

ಹೈದರಾಬಾದ್‌(ಪಿಟಿಐ): ತೆಲಂಗಾಣ ವಿಷಯವಾಗಿ ಕಾಂಗ್ರೆಸ್ ಹೈಕಮಾಂಡ್‌ಗೆ ಸವಾಲೆದಿರುವ ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್‌ ಕಿರಣ್‌ ಕುಮಾರ್ ರೆಡ್ಡಿ, ‘ಎಪಿ ಪುನರ್‌ಸಂಘಟನಾ ಮಸೂದೆ –2013’ರ ಕರಡು ರಾಜ್ಯ ವಿಧಾನಸಭೆಯ ಅನುಮೋದನೆಗಾಗಿ ಬಂದಾಗ ಸೋಲನ್ನು ಖಚಿತಪಡಿಸುವುದಾಗಿ ಸೋಮವಾರ ತಿಳಿಸಿದ್ದಾರೆ.

‘ಕರಡು ಮಸೂದೆ ಅನುಮೋದನೆಗಾಗಿ ವಿಧಾನಸಭೆಗೆ ಬಂದಾಗ ನಾವು ನಿಶ್ಚಿತವಾಗಿಯೂ ಅದನ್ನು ಸೋಲಿಸುತ್ತೇವೆ. ಸಂಸತ್‌ ಹೇಗೆ ಅದನ್ನು ಪಾಸ್‌ಮಾಡಲಿದೆ ಎಂದು ನಾವು ನೋಡುತ್ತೇವೆ’ ಎಂದು ಆಂಧ್ರಪ್ರದೇಶ ಇಬ್ಬಾಗವನ್ನು ವಿರೋಧಿಸುತ್ತಿರುವ ಮುಖ್ಯಮಂತ್ರಿ ನುಡಿದಿದ್ದಾರೆ.

‘ನಿಮ್ಮ ತಪ್ಪನ್ನು ಅರಿತುಕೊಂಡು ಆಂಧ್ರಪ್ರದೇಶವನ್ನು ಇಬ್ಬಾಗ ಮಾಡುವ ನಿರ್ಧಾರವನ್ನು ಹಿಂಪಡೆಯಿರಿ. ನಿಮ್ಮ ನಿರ್ಧಾರ ರಾಜ್ಯದ ಶೇಕಡಾ 75ರಷ್ಟು ಜನರ ಹೃದಯಗಳನ್ನು ನೋಯಿಸುತ್ತಿದೆ’ ಎಂದು ವಿಜಯವಾಡದಲ್ಲಿ ಅವರು ಹೇಳಿದ್ದಾರೆ.

ADVERTISEMENT

ಅಲ್ಲದೇ, ‘ಯಾರದೋ ಒಬ್ಬರ ಪಟ್ಟಭದ್ರ ಹಿತಾಸಕ್ತಿಯನ್ನು ತಣಿಸಲು ರಾಜ್ಯವನ್ನು  ಇಬ್ಬಾಗ ಮಾಡದಿರಿ. ಟಿಆರ್‌ಎಸ್‌ ಮುಖ್ಯಸ್ಥ ಕೆಸಿಆರ್‌  ಅವರ ಒತ್ತಾಯ ಅಥವಾ ವೈಎಸ್‌ಆರ್‌ಸಿಪಿ ಮುಖ್ಯಸ್ಥ ಜಗನ್‌ಅವರ ಬೆಂಬಲದ ಮೇಲೆ ಕಣ್ಣಿಟ್ಟಿದ್ದರೇ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡು ಮುಖ್ಯಮಂತ್ರಿ ಮಾಡಿ. ಆದರೆ ರಾಜ್ಯವನ್ನು ಒಡೆಯದಿರಿ’ ಎಂದು ಖಡಕ್ಕಾಗಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.