ADVERTISEMENT

ದತ್ತು ವಿರುದ್ಧದ ಅರ್ಜಿ ವಜಾ

ನಿಯೋಜಿತ ಮುಖ್ಯ ನ್ಯಾಯಮೂರ್ತಿ ವಿರುದ್ಧ ಲೈಂಗಿಕ ಕಿರುಕುಳ ಆರೋಪ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2014, 19:30 IST
Last Updated 19 ಸೆಪ್ಟೆಂಬರ್ 2014, 19:30 IST

ನವದೆಹಲಿ (ಐಎಎನ್‌ಎಸ್‌): ಸುಪ್ರೀಂ ಕೋರ್ಟ್‌ನ ನಿಯೋಜಿತ ಮುಖ್ಯ ನ್ಯಾಯ­ಮೂರ್ತಿ ಎಚ್‌. ಎಲ್‌ ದತ್ತು ಅವರ ನೇಮಕವನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿ ‘ರಾ’ದ ಮಾಜಿ ಅಧಿ­ಕಾರಿ ಹಾಗೂ ವಕೀಲೆಯೊಬ್ಬರು ಸಲ್ಲಿ­ಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್‌ ಶುಕ್ರವಾರ ವಜಾ ಮಾಡಿದೆ.

2011ರಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಕಾನೂನು ವಿದ್ಯಾರ್ಥಿನಿಯಾಗಿದ್ದಾಗ ತಾನು ವಾದಿಸಿದ್ದ ಎಲ್ಲ ಪ್ರಕರಣಗಳನ್ನು ನ್ಯಾಯಮೂರ್ತಿ ದತ್ತು ಅವರು ವಜಾ ಮಾಡಿದ್ದಾರೆ ಎಂದು ಮಹಿಳೆ ದೂರಿ­ನಲ್ಲಿ ಹೇಳಿದ್ದಾರೆ.‘ಸುಪ್ರೀಂ ಕೋರ್ಟ್‌ ರೂಪಿಸಿರುವ ವಿಶಾಖಾ ಮಾರ್ಗದರ್ಶಿ ಸೂತ್ರಗಳ ಪ್ರಕಾರ, ಇನ್ನೊಬ್ಬರು ಲೈಂಗಿಕ ಕಿರುಕುಳ ನೀಡಿದರೂ ನನ್ನನ್ನು ರಕ್ಷಿಸುವುದು ದತ್ತು ಅವರ ಹೊಣೆಗಾರಿಕೆಯಾಗಿತ್ತು. ಆದರೆ ಅವರೇ ನನಗೆ ತೀವ್ರವಾದ ಲೈಂಗಿಕ ಕಿರುಕುಳ ನೀಡಿದ್ದಾರೆ’ ಎಂದು 51 ವರ್ಷ ವಯಸ್ಸಿನ ಮಹಿಳೆ ಆರೋಪಿಸಿ­ದ್ದಾರೆ. ಹಾಗಾಗಿ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿ ಅವರ ನಿಯೋ­ಜನೆ­ಯನ್ನು ರದ್ದು­ಪಡಿಸಬೇಕು ಎಂದು ಮಹಿಳೆ ಆಗ್ರಹಿಸಿದ್ದಾರೆ.

ಮುಖ್ಯ ನ್ಯಾಯಮೂರ್ತಿ ಜಿ. ರೋಹಿಣಿ ಮತ್ತು ನ್ಯಾಯಮೂರ್ತಿ ಪ್ರದೀಪ್‌ ನಂದರಜೋಗ್‌ ಅವರನ್ನೊಳ­ಗೊಂಡ ವಿಭಾಗೀಯ ಪೀಠ ಅರ್ಜಿ­ಯನ್ನು ವಜಾ ಮಾಡಿತು. ರಾಷ್ಟ್ರಪತಿ ಅವರು ಈಗಾಗಲೇ ದತ್ತು ಅವರನ್ನು ಮುಖ್ಯ ನ್ಯಾಯಮೂರ್ತಿಯಾಗಿ ನಿಯೋಜನೆ ಮಾಡಿದ್ದಾರೆ. ಹೀಗಾಗಿ ಈ ವಿಷಯದಲ್ಲಿ ಮಧ್ಯ ಪ್ರವೇಶ ಸಾಧ್ಯವಿಲ್ಲ ಎಂದು ಪೀಠ ಹೇಳಿತು.

ಮಹಿಳೆಯ ವಾದವನ್ನು ಸರ್ಕಾರದ ಪರವಾಗಿ ಹಾಜರಾಗಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಸಂಜಯ್‌ ಜೈನ್‌ ಅವರು ವಿರೋಧಿಸಿದರು. ಇದು ಅತ್ಯಂತ ಕ್ಷುಲ್ಲಕವಾದ ದೂರು ಎಂದು ಅವರು ವಾದಿಸಿದರು.ಮಹಿಳೆಯು 1987ರ ತಂಡದ ‘ರಾ’ದ ಒಂದನೇ ಶ್ರೇಣಿ ಕಾರ್ಯ­ನಿರ್ವಾ­ಹಕ ­ಅಧಿಕಾರಿಯಾಗಿದ್ದರು. 2009ರಲ್ಲಿ ಅವರು ಕಡ್ಡಾಯ ನಿವೃತ್ತಿ ಪಡೆದುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.