ADVERTISEMENT

ದಾಳಿ ನಡೆದಿಲ್ಲ ಎಂದು ಬಿಂಬಿಸಲು ಪಾಕ್‌ ಯತ್ನ

ಏಜೆನ್ಸೀಸ್
Published 2 ಅಕ್ಟೋಬರ್ 2016, 19:30 IST
Last Updated 2 ಅಕ್ಟೋಬರ್ 2016, 19:30 IST

ಮಂಧೋಲ್ (ಪಾಕ್‌ ಆಕ್ರಮಿತ ಕಾಶ್ಮೀರ) : ಭಾರತದ ಸೈನಿಕರು ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ದಾಟಿಬಂದು, ಕಾರ್ಯಾಚರಣೆ ನಡೆಸುವುದು ಅಸಾಧ್ಯ ಎಂದು ಪಾಕಿಸ್ತಾನದ ಸೇನೆ ಹೇಳಿದೆ.

ಅಂತರರಾಷ್ಟ್ರೀಯ ಮಾಧ್ಯಮಗಳ ಕೆಲವು ಪ್ರತಿನಿಧಿಗಳನ್ನು ಎಲ್‌ಒಸಿ ಬಳಿ ಶನಿವಾರ ಕರೆದೊಯ್ದ ಪಾಕಿಸ್ತಾನದ ಸೇನೆ, ದಾಳಿ ನಡೆದಿಲ್ಲ ಎಂದು ಹೇಳಿಕೊಳ್ಳುವ ಪ್ರಯತ್ನ ನಡೆಸಿದೆ. ಪಾಕಿಸ್ತಾನದ ಸೇನೆಯು ಮಾಧ್ಯಮ ಪ್ರತಿನಿಧಿಗಳನ್ನು ಹೀಗೆ ಕರೆದೊಯ್ದಿರುವುದು ತೀರಾ ಅಪರೂಪ ಎನ್ನಲಾಗಿದೆ.

ದಾಳಿ ನಡೆಸಿರುವುದಾಗಿ ಭಾರತ ಹೇಳಿರುವ ಪ್ರದೇಶದ ಸಮೀಪ ಮಾಧ್ಯಮ ಪ್ರತಿನಿಧಿಗಳನ್ನು ಕರೆದೊಯ್ಯಲಾಗಿತ್ತು. ಪತ್ರಕರ್ತ ಜೊತೆ ಪಾಕಿಸ್ತಾನಿ ಸೇನೆಯ ವಕ್ತಾರ, ಲೆಫ್ಟಿನೆಂಟ್ ಜನರಲ್ ಅಸೀಂ ಬಾಜ್ವಾ ಅವರೂ ಇದ್ದರು.

ಎಲ್‌ಒಸಿ ಸಮೀಪ ಇರುವ ಮಂಧೋಲ್‌ ಹಳ್ಳಿಯಲ್ಲಿ ಜನಜೀವನ ಸಹಜವಾಗಿತ್ತು. ಅಂಗಡಿಗಳು, ವಾಣಿಜ್ಯ ಕೇಂದ್ರಗಳಲ್ಲಿ ಚಟುವಟಿಕೆಗಳು ಸಹಜವಾಗಿದ್ದವು. ಮಕ್ಕಳು ಶಾಲೆಗೆ ಹೋಗುತ್ತಿದ್ದರು.

‘ಪರಿಸ್ಥಿತಿ ಹೇಗಿದೆ ಎಂಬುದನ್ನು ನೀವೇ ನೋಡಿದ್ದೀರಿ. ಪಾಕಿಸ್ತಾನದ ಕಡೆಯಿಂದ ದೊಡ್ಡ ಮಟ್ಟದ ರಕ್ಷಣಾ ವ್ಯವಸ್ಥೆ ಇದೆ. ಭಾರತದವರೂ ವಿವಿಧ ಹಂತದ ರಕ್ಷಣಾ ವ್ಯವಸ್ಥೆಯನ್ನು ಹೊಂದಿದ್ದಾರೆ. ಎಲ್‌ಒಸಿ ದಾಟಿ ಬರುವುದು ಸಾಧ್ಯವಿಲ್ಲ’ ಎಂಬ ವಿವರಣೆಯನ್ನು ಬಾಜ್ವಾ ನೀಡಿದರು.

‘ಅವರು (ಭಾರತೀಯರು) ನಮಗೆ ಅಷ್ಟೊಂದು ದೊಡ್ಡ ಮಟ್ಟದ ಹಾನಿ ಉಂಟುಮಾಡಿದ್ದೇವೆ ಎಂದು ಹೇಳುತ್ತಿದ್ದಾರೆ. ಆದರೆ ನಮಗೆ ಹಾನಿ ಆಗಿರುವುದು ಕಾಣುತ್ತಿಲ್ಲ! ಇಲ್ಲಿರುವ ಸಾಮಾನ್ಯರನ್ನು ನೀವು ಭೇಟಿಯಾಗಬಹುದು. ನಮ್ಮ ಕಡೆಯ ಭೂಭಾಗವು ವಿಶ್ವಸಂಸ್ಥೆಯವರಿಗೆ, ಮಾಧ್ಯಮಗಳಿಗೆ ಹಾಗೂ ಸಾರ್ವಜನಿಕರ ಪ್ರವೇಶಕ್ಕೆ ಮುಕ್ತವಾಗಿದೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.