ADVERTISEMENT

ದೂರುದಾರರಿಗೇ ದಂಡ ವಿಧಿಸಿದ ರಾಷ್ಟ್ರೀಯ ಗ್ರಾಹಕರ ಆಯೋಗ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2011, 19:30 IST
Last Updated 9 ಅಕ್ಟೋಬರ್ 2011, 19:30 IST

ನವದೆಹಲಿ: ಅರ್ಹತೆ ಮಾನದಂಡ ಪೂರೈಸಲು ವಿಫಲರಾದ ಕಾರಣಕ್ಕೆ ಸದಸ್ಯತ್ವ ನೀಡಲು ನಿರಾಕರಿಸಿದ ಬೆಂಗಳೂರು ಮೂಲದ ಕ್ಲಬ್‌ನ ಕ್ರಮ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ರಾಷ್ಟ್ರೀಯ ಗ್ರಾಹಕರ ಆಯೋಗ ವಜಾ ಮಾಡಿದೆ. ತನ್ನ ಸಮಯ ವ್ಯರ್ಥ ಮಾಡಿದ್ದಕ್ಕಾಗಿ ಅರ್ಜಿದಾರರಿಗೆ 10 ಸಾವಿರ ರೂಪಾಯಿ ದಂಡ ವಿಧಿಸಿದ ಅಪರೂಪದ ಪ್ರಕರಣ ನಡೆದಿದೆ.

ಅಶೋಕ್ ಲೋಬೊ ಎಂಬುವವರು 2008ರ ಜೂನ್‌ನಲ್ಲಿ 35 ಸಾವಿರ ರೂ ಪ್ರವೇಶ ಶುಲ್ಕ ಮತ್ತು ತೆರಿಗೆಯನ್ನು ಪಾವತಿಸಿ ಕೆಥೋಲಿಕ್ ಕ್ಲಬ್ ಸದಸ್ಯತ್ವಕ್ಕೆ ಅರ್ಜಿ ಸಲ್ಲಿಸಿದ್ದರು. ಕ್ಲಬ್ ತನ್ನ 58ನೇ ವಾರ್ಷಿಕ ಮಹಾಸಭೆಯಲ್ಲಿ ಶುಲ್ಕವನ್ನು 50 ಸಾವಿರಕ್ಕೆ ಏರಿಸಿತು. ಲೋಬೊ  ಹೆಚ್ಚುವರಿ ಶುಲ್ಕ ಕೊಡಲು ನಿರಾಕರಿಸಿದ್ದರಿಂದ ಅವರ ಅರ್ಜಿಯನ್ನು ತಿರಸ್ಕರಿಸಲಾಗಿತ್ತು. ಲೋಬೊ ಜಿಲ್ಲಾ ಗ್ರಾಹಕರ ವೇದಿಕೆಯ ಮೊರೆ ಹೋಗಿದ್ದರು.

ಆದರೆ ಜಿಲ್ಲಾ ವೇದಿಕೆ ಕ್ಲಬ್‌ನ ವಾದವನ್ನು ಮಾನ್ಯ ಮಾಡಿ ಲೋಬೊ  ಅರ್ಜಿಯನ್ನು ವಜಾ ಮಾಡಿತ್ತು. ಇದನ್ನು  ಪ್ರಶ್ನಿಸಿ ಅವರು ರಾಜ್ಯ ಗ್ರಾಹಕರ ವೇದಿಕೆಯ ಮೊರೆ ಹೋಗಿದ್ದರು. ಅಲ್ಲಿಯೂ ಅವರ ಅರ್ಜಿ ವಜಾ ಆಗಿತ್ತು.

ನಂತರ ಅವರು ರಾಷ್ಟ್ರೀಯ ಗ್ರಾಹಕರ ಆಯೋಗಕ್ಕೆ ಮೇಲ್ಮನವಿ ಸಲ್ಲಿಸಿ, ಕ್ಲಬ್ ತಮ್ಮ ವಿರುದ್ಧ ಅನುಸರಿಸಿರುವ ತಾರತಮ್ಯ ನೀತಿಯಿಂದ ಅನ್ಯಾಯವಾಗಿದೆ ಎಂದು ದೂರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.