ADVERTISEMENT

ದೆಹಲಿಗೆ ಲಗ್ಗೆಯಿಟ್ಟ ಸಾವಿರಾರು ರೈತರು

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2011, 19:30 IST
Last Updated 17 ಅಕ್ಟೋಬರ್ 2011, 19:30 IST

ನವದೆಹಲಿ: ಕೇಂದ್ರ ಯುಪಿಎ ಸರ್ಕಾರದ ಭೂ ಸ್ವಾಧೀನ-ಪುನರ್ವಸತಿ ಹಾಗೂ ಬೀಜ ಮಸೂದೆ ವಿರೋಧಿಸಲು ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ಸಾವಿರಾರು ರೈತರು ರಾಜಧಾನಿಗೆ ಲಗ್ಗೆ ಹಾಕಿದ್ದು, ಜಂತರ್ ಮಂತರ್ ಬಳಿ ಮಂಗಳವಾರ ಸಮಾವೇಶ ನಡೆಸಲಿದ್ದಾರೆ.

ಸಾರ್ವಜನಿಕ ಉದ್ದೇಶದ ನೆಪದಲ್ಲಿ ಸರ್ಕಾರ ರೈತರ ಜಮೀನು ಕಸಿದುಕೊಂಡು ಬೀದಿ ಪಾಲು ಮಾಡಿ ಉದ್ಯಮಿಗಳನ್ನು ಉದ್ಧಾರ ಮಾಡಲು ಹೊರಟಿದೆ. ಈ ಮಸೂದೆಯನ್ನು ರೈತರು ವಿರೋಧಿಸಲಿದ್ದಾರೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೆ.ಎಸ್. ಪುಟ್ಟಣ್ಣಯ್ಯ ಸೋಮವಾರ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

ರೈತರು ಬೀಜ ಸಂರಕ್ಷಣೆ ಮಾಡುವ ಹಕ್ಕನ್ನು ಕಸಿದುಕೊಳ್ಳುವ `ಬೀಜ ಮಸೂದೆ~ ಮತ್ತೊಂದು ಕರಾಳ ಮಸೂದೆ. ಜಾಗತಿಕ ಬೀಜ ಮಾರುಕಟ್ಟೆಯನ್ನು ಐದು ಬಹುರಾಷ್ಟ್ರೀಯ ಕಂಪೆನಿಗಳಿಗೆ ಬಿಟ್ಟುಕೊಟ್ಟು, ಅವುಗಳ ತಾಳಕ್ಕೆ ತಕ್ಕಂತೆ ಕುಣಿಯಲಾಗುತ್ತಿದೆ. ರೈತರು ಇದನ್ನು ಪ್ರತಿಭಟಿಸುತ್ತಿದ್ದಾರೆ ಎಂದು ಪುಟ್ಟಣ್ಣಯ್ಯ ವಿವರಿಸಿದರು.

ಕೃಷಿ ಭೂಮಿಯನ್ನು ~ವಿಶೇಷ ಕೃಷಿ ವಲಯ~ ಎಂದು ಪರಿಗಣಿಸಿ ಸಾರ್ವಜನಿಕ ಉದ್ದೇಶದ ನೆಪದಲ್ಲಿ ಖಾಸಗಿ ಕಂಪೆನಿಗಳಿಗೆ ವಶಕ್ಕೆ ಒಪ್ಪಿಸುವ ಭೂಸ್ವಾಧೀನ ಮಸೂದೆ ರದ್ದಾಗಬೇಕು. ಬೀಜ ಸಂರಕ್ಷಣೆ ರೈತರ ಹಕ್ಕು. ಜೈವಿಕ ಸಂಪತ್ತನ್ನು ಮಾರಾಟಕ್ಕೆ ಇಟ್ಟಿರುವ ಈ ಮಸೂದೆ ಕೈ ಬಿಡಬೇಕು. ಗ್ರಾಮ ಪಂಚಾಯತಿ ಮಟ್ಟದಲ್ಲಿ ರೈತರಾಧಾರಿತ ಬೀಜ ಬ್ಯಾಂಕ್ ಸ್ಥಾಪಿಸುವ ಮಸೂದೆ ಜಾರಿಯಾಗಬೇಕು.

ಕುಲಾಂತರಿ ತಳಿಗಳನ್ನು ನಿಷೇಧಿಸಬೇಕು. ಕೃಷಿ ವೇತನ ಆಯೋಗ ರಚಿಸಬೇಕು. ನೈಸರ್ಗಿಕ ಕೃಷಿಗೆ ಸಹಾಯಧನ ಕೊಡಬೇಕು. ಸರ್ಕಾರ ಸಹಿ ಮಾಡಿರುವ ಎಲ್ಲ ಮುಕ್ತ ವಾಣಿಜ್ಯ ಒಪ್ಪಂದಗಳಿಂದ ಹಿಂದೆ ಸರಿಯಬೇಕು ಎಂದು ಪುಟ್ಟಣ್ಣಯ್ಯ ಆಗ್ರಹಿಸಿದರು.

ರೈತರ ಸಮಾವೇಶದಲ್ಲಿ ತಮ್ಮಟ್ಟಿಗೆ ಭಾರತೀಯ ಕಿಸಾನ್ ಸಂಘಟನೆ ಅಧ್ಯಕ್ಷ ಅಜಮೇರ್‌ಸಿಂಗ್ ಲಾಖೋವಾಲ್, ಪ್ರಧಾನ ಕಾರ್ಯದರ್ಶಿ ಯದವೀರ್‌ಸಿಂಗ್, ನರೇಶ್ ಟಿಕಾಯತ್, ರಾಕೇಶ್ ಟಿಕಾಯತ್,  ವಿಜಯ ಜವಾಂದಿಯಾ ಅಧ್ಯಕ್ಷರು ಶೇತ್ಕರಿ ಸಂಘಟನೆ, ಕೋಡಿಹಳ್ಳಿ ಚಂದ್ರಶೇಖರ್ ಅಧ್ಯಕ್ಷರು ರಾಜ್ಯ ರೈತ ಸಂಘ, ತಮಿಳುನಾಡು ರೈತ ಸಂಘಟನೆಯ ಸೆಲ್ವ ಮುತ್ತು ಪಾಲ್ಗೊಳ್ಳುವರು ಎಂದು ಪುಟ್ಟಣ್ಣಯ್ಯ ಹೇಳಿದರು. ರೈತ ಸಂಘದ ಮುಖಂಡ ಬೂದನೂರು ಶಿವರಾಂ ಮತ್ತಿತರರು ಹಾಜರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.