ADVERTISEMENT

ದೆಹಲಿ ಆಡಳಿತಕ್ಕೆ ಲೆ. ಗವರ್ನರ್‌ ಮುಖ್ಯಸ್ಥ

ಹೈಕೋರ್ಟ್ ಆದೇಶದಿಂದ ಸರ್ಕಾರಕ್ಕೆ ಹಿನ್ನಡೆ: ಸುಪ್ರೀಂಕೋರ್ಟ್‌ ಮೊರೆ ಹೋಗಲು ನಿರ್ಧಾರ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2016, 19:30 IST
Last Updated 4 ಆಗಸ್ಟ್ 2016, 19:30 IST
ನಜೀಬ್ ಜಂಗ್
ನಜೀಬ್ ಜಂಗ್   

ನವದೆಹಲಿ (ಪಿಟಿಐ): ದೆಹಲಿಯ ಲೆಫ್ಟಿನೆಂಟ್‌ ಗವರ್ನರ್‌ ಅವರು ರಾಷ್ಟ್ರ ರಾಜಧಾನಿ ಪ್ರದೇಶದ (ಎನ್‌ಸಿಟಿ) ಆಡಳಿತ ಮುಖ್ಯಸ್ಥ ಎಂದು ದೆಹಲಿ ಹೈಕೋರ್ಟ್‌ ಗುರುವಾರದ ಆದೇಶದಲ್ಲಿ ಸ್ಪಷ್ಟಪಡಿಸಿದೆ.

ದೆಹಲಿ ಸಚಿವ ಸಂಪುಟ ನೀಡುವ ಸಲಹೆ ಆಧರಿಸಿಯೇ ಲೆಫ್ಟಿನೆಂಟ್‌ ಗವರ್ನರ್‌ ಕೆಲಸ ಮಾಡಬೇಕು ಎಂದು ಆಮ್‌ ಆದ್ಮಿ ಪಕ್ಷದ (ಎಎಪಿ) ಸರ್ಕಾರ ಮುಂದಿಟ್ಟಿರುವ ವಾದ ಹುರುಳಿಲ್ಲದ್ದು ಎಂದು ಹೈಕೋರ್ಟ್‌ ಹೇಳಿದೆ. ಈ ಆದೇಶ ಎಎಪಿ ಸರ್ಕಾರಕ್ಕೆ ದೊಡ್ಡ ಹಿನ್ನಡೆ ಎಂದು ವಿಶ್ಲೇಷಿಸಲಾಗಿದೆ.

ದೆಹಲಿ ಮೇಲಿನ ನಿಯಂತ್ರಣಕ್ಕಾಗಿ ಅಲ್ಲಿನ ಲೆಫ್ಟಿನೆಂಟ್‌ ಗವರ್ನರ್ ನಜೀಬ್ ಜಂಗ್ ಮತ್ತು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನಡುವೆ ತಿಂಗಳುಗಳಿಂದ ಸಂಘರ್ಷ ನಡೆದಿರುವುದನ್ನು ಇಲ್ಲಿ ಸ್ಮರಿಸಬಹುದು.

ರಾಷ್ಟ್ರ ರಾಜಧಾನಿಯಲ್ಲಿ ಅಧಿಕಾರಿಗಳ ನೇಮಕ ವಿಚಾರದಲ್ಲಿ ಲೆಫ್ಟಿನೆಂಟ್‌ ಗವರ್ನರ್‌ಗೆ ಪರಮಾಧಿಕಾರ ನೀಡಿ ಕೇಂದ್ರ ಸರ್ಕಾರ 2015ರ ಮೇ 21ರಂದು ಹೊರಡಿಸಿದ್ದ ಅಧಿಸೂಚನೆ ಪ್ರಶ್ನಿಸಿ ಎಎಪಿ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿದೆ. ಈ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಜಿ. ರೋಹಿಣಿ ಮತ್ತು ನ್ಯಾಯಮೂರ್ತಿ ಜಯಂತ್ ಸಿನ್ಹಾ ಅವರಿದ್ದ ಪೀಠ ನಡೆಸಿತ್ತು.

ಅಧಿಕಾರಕ್ಕೆ ಮರಳಿದ ನಂತರ ಕೇಜ್ರಿವಾಲ್‌  ಹೊರಡಿಸಿದ್ದ ಹಲವು ಅಧಿಸೂಚನೆಗಳನ್ನು ಹೈಕೋರ್ಟ್‌ ರದ್ದುಪಡಿಸಿದೆ. ಲೆಫ್ಟಿನೆಂಟ್‌ ಗವರ್ನರ್‌ ಸಮ್ಮತಿ ಇಲ್ಲದೆಯೇ ಈ ಅಧಿಸೂಚನೆಗಳನ್ನು ಹೊರಡಿಸಿದ್ದು ಕಾನೂನು ಬಾಹಿರ ಎಂದು ಆದೇಶದಲ್ಲಿ ಹೇಳಲಾಗಿದೆ.

ದೆಹಲಿ ಸಂಪುಟ ನೀಡಿದ ಸಲಹೆಗೆ ಅನುಗುಣವಾಗಿ ಲೆಫ್ಟಿನೆಂಟ್‌ ಗವರ್ನರ್‌ ಕೆಲಸ ಮಾಡಲೇಬೇಕು ಎಂದು ಎಎಪಿ ಸರ್ಕಾರ ಮುಂದಿಟ್ಟಿದ್ದ ವಾದವನ್ನು ಒಪ್ಪಲಾಗದು ಎಂದು ಕೋರ್ಟ್‌ ಹೇಳಿದೆ.

ಹೈಕೋರ್ಟ್‌ನ ಈ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ತಕ್ಷಣ ಪ್ರಶ್ನಿಸಲಾಗುವುದು ಎಂದು ದೆಹಲಿ ಸರ್ಕಾರದ ವಕೀಲ ರಾಹುಲ್ ಮೆಹ್ರಾ ತಿಳಿಸಿದ್ದಾರೆ.
ಹೈಕೋರ್ಟ್‌ನ ಈ ಆದೇಶವು, ಸಚಿವ ಸಂಪುಟಕ್ಕೆ ಸಂವಿಧಾನದತ್ತವಾಗಿ ಸಿಕ್ಕಿರುವ ಅಧಿಕಾರವನ್ನು ಮೊಟಕುಗೊಳಿಸಿದೆ. ಹಾಗಾಗಿ ಈ ಆದೇಶವನ್ನು ಪ್ರಶ್ನಿಸಲಾಗುವುದು ಎಂದು ದೆಹಲಿ ಗೃಹ ಸಚಿವ ಸತ್ಯೇಂದ್ರ ಜೈನ್‌ ಹೇಳಿದ್ದಾರೆ.

ಭ್ರಷ್ಟಾಚಾರದ ವಿರುದ್ಧ ಯಾವುದೇ ಕ್ರಮ ಜರುಗಿಸಲು ಕೇಂದ್ರ ಸರ್ಕಾರ ಕೇಜ್ರಿವಾಲ್ ಅವರಿಗೆ ಅವಕಾಶ ನೀಡುತ್ತಿಲ್ಲ ಎಂದು ಜೈನ್ ದೂರಿದ್ದಾರೆ.
ಪ್ರಜಾತಾಂತ್ರಿಕ ಮಾರ್ಗದಲ್ಲಿ ಅಧಿಕಾರಕ್ಕೆ ಬಂದ ಸರ್ಕಾರದ ಬಲ ಕುಗ್ಗಿಸುವುದು ಸಲ್ಲದು. ಆದೇಶವನ್ನು ಮೇಲಿನ ನ್ಯಾಯಾಲಯದಲ್ಲಿ ಪ್ರಶ್ನಿಸಲಾ
ಗುವುದು. ಈ ಹೋರಾಟ ಅಧಿಕಾರದ ಮೇಲಾಟಕ್ಕಾಗಿ ಅಲ್ಲ. ಇದು ಪ್ರಜಾತಂತ್ರಕ್ಕಾಗಿ ಎಂದು ಎಎಪಿ ನಾಯಕ ರಾಘವ್ ಛಡ್ಡಾ ಹೇಳಿದ್ದಾರೆ.

ಆದೇಶಕ್ಕೆ ಬಿಜೆಪಿ ಹರ್ಷ
ಪುದುಚೇರಿ (ಪಿಟಿಐ):
ಲೆಫ್ಟಿನೆಂಟ್ ಗವರ್ನರ್ಪರ ದೆಹಲಿ ಹೈಕೋರ್ಟ್‌ ನೀಡಿರುವ ಆದೇಶವನ್ನು ಬಿಜೆಪಿ ಪುದುಚೇರಿ ಘಟಕ ಸ್ವಾಗತಿಸಿದೆ. ‘ಈ ಆದೇಶವು ಪುದುಚೇರಿ ಕೇಂದ್ರಾಡಳಿತ ಪ್ರದೇಶಕ್ಕೂ ಅನ್ವಯವಾಗುತ್ತದೆ’ ಎಂದು ಪುದುಚೇರಿ ಬಿಜೆಪಿ ಅಧ್ಯಕ್ಷ ವಿ. ಸ್ವಾಮಿನಾಥನ್ ಹೇಳಿದರು.

ಪುದುಚೇರಿ ಮುಖ್ಯಮಂತ್ರಿ ವಿ. ನಾರಾಯಣಸ್ವಾಮಿ ಮತ್ತು ಅಲ್ಲಿನ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ನಡುವೆ ಕೂಡ ಅಧಿಕಾರವ್ಯಾಪ್ತಿ ಕುರಿತು ಸಂಘರ್ಷ ಇದೆ. ‘ಆಡಳಿತ ಸುಗಮವಾಗಿ ಸಾಗಲು ನಾರಾಯಣಸ್ವಾಮಿ ಅವರು ಬೇಡಿ ಅವರ ಜೊತೆ ಕೈಜೋಡಿಸಬೇಕು’ ಎಂದು ಸ್ವಾಮಿನಾಥನ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.