ADVERTISEMENT

ದೇಶದಲ್ಲಿ 92 ಸ್ಮಾರಕ ನಾಪತ್ತೆ!

ಪಟ್ಟಿಯಲ್ಲಿ ಕಿತ್ತೂರು, ಹೆಜ್ಜಾಲ, ಚಿಕ್ಕಜಾಲ, ನಂದಿಕೇಶ್ವರ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2013, 19:59 IST
Last Updated 2 ಸೆಪ್ಟೆಂಬರ್ 2013, 19:59 IST

ನವದೆಹಲಿ: ಮಹಾಲೇಖಪಾಲರ ವರದಿಯಿಂದ ಎಚ್ಚೆತ್ತುಕೊಂಡ ಕೇಂದ್ರ ಸರ್ಕಾರ, ನಾಪತ್ತೆಯಾಗಿರುವ ಭಾರತೀಯ ಪುರಾತತ್ವ ಇಲಾಖೆಯ 92 ಸಂರಕ್ಷಿತ ಸ್ಮಾರಕಗಳಿಗಾಗಿ ಹುಡುಕಾಟ ಆರಂಭಿಸಿದೆ.

ಮಹಾಲೇಖಪಾಲರ ವರದಿಯಲ್ಲಿ ಪ್ರಸ್ತಾಪಿಸಿರುವ ವಿಷಯಗಳನ್ನು ಪರಿಶೀಲಿಸಿ ಸಮಗ್ರ ವರದಿ ನೀಡುವಂತೆ ಕೇಂದ್ರ ಸಂಸ್ಕೃತಿ ಸಚಿವಾಲಯ ಸಂಬಂಧಿಸಿದ ಭಾರತೀಯ ಪುರಾತತ್ವ ಇಲಾಖೆಯ ಕಚೇರಿಗಳಿಗೆ ಪತ್ರ ಬರೆದಿದೆ.

ದೇಶದ ವಿವಿಧ ಭಾಗಗಳಲ್ಲಿರುವ 35 ಸ್ಮಾರಕಗಳು ಕಣ್ಮರೆಯಾಗಿವೆ ಎಂದು ಸಚಿವಾಲಯ ಲೋಕಸಭೆಗೆ ತಪ್ಪು ಮಾಹಿತಿ ನೀಡಿತ್ತು. ಆದರೆ, ಇದಕ್ಕೆ ವ್ಯತಿರಿಕ್ತವಾದ ವರದಿಯನ್ನು ನೀಡಿದ ಮಹಾಲೇಖಪಾಲರು, `ಕಣ್ಮರೆಯಾಗಿರುವುದು 35 ಸ್ಮಾರಕಗಳಲ್ಲ, ಬದಲಾಗಿ 92 ಸ್ಮಾರಕಗಳು' ಎಂಬ ವರದಿ ನೀಡಿತ್ತು.

ಉತ್ತರ ಪ್ರದೇಶ ಮತ್ತು ದೆಹಲಿ ಪಟ್ಟಿಯಲ್ಲಿ ಕ್ರಮವಾಗಿ ಮೊದಲೆರಡು ಸ್ಥಾನದಲ್ಲಿವೆ.

ಕರ್ನಾಟಕದ ಕಿತ್ತೂರು, ಬೆಂಗಳೂರಿನ ಚಿಕ್ಕಜಾಲ ಮತ್ತು ಹೆಜ್ಜಾಲ, ವಿಜಾಪುರದ ನಂದಿಕೇಶ್ವರದ ಶಾಸನಗಳು ಸಹ ಕಣ್ಮರೆಯಾದ ಸ್ಮಾರಕಗಳ ಪಟ್ಟಿಗೆ ಸೇರಿವೆ.

ಪುರಾತತ್ವ ಇಲಾಖೆ ಕಾಣೆಯಾದ ಸ್ಮಾರಕಗಳ ನಿರ್ವಹಣೆಯ ಹೆಸರಿನಲ್ಲಿ ಸರ್ಕಾರದ ಅನುದಾನವನ್ನು ಬಳಕೆ ಮಾಡಿಕೊಂಡಿರುವ ಆಶ್ಚರ್ಯಕರ ವಿಷಯವನ್ನು ಮಹಾಲೇಖಪಾಲರ ವರದಿ ಬೆಳಕಿಗೆ ತಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.