ADVERTISEMENT

ದೊಡ್ಡ ಮೈತ್ರಿ: ತೃಣಮೂಲ ಕಾಂಗ್ರೆಸ್ ಅಪೇಕ್ಷೆ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2011, 19:30 IST
Last Updated 5 ಮಾರ್ಚ್ 2011, 19:30 IST

ಕೋಲ್ಕತ್ತ (ಐಎಎನ್‌ಎಸ್): ಪಶ್ಚಿಮ ಬಂಗಾಳದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಪೂರ್ಣ ಬಹುಮತ ಸಾಧಿಸುವ ವಿಶ್ವಾಸವನ್ನು ವ್ಯಕ್ತಪಡಿಸಿರುವ ಪ್ರಮುಖ ಪ್ರತಿಪಕ್ಷ ತೃಣಮೂಲ ಕಾಂಗ್ರೆಸ್, ಆಡಳಿತಾರೂಢ ಸಿಪಿಎಂ ಅನ್ನು ಅಧಿಕಾರದಿಂದ ಕಿತ್ತೊಗೆಯಲು ಜಾತ್ಯತೀತ ಶಕ್ತಿಗಳೊಂದಿಗೆ ‘ದೊಡ್ಡ ಮೈತ್ರಿ’ಯನ್ನು ಮಾಡಿಕೊಳ್ಳಲು ಬಯಸುವುದಾಗಿ ಶುಕ್ರವಾರ ಹೇಳಿದೆ.

‘ಈ ಬಾರಿಯ ಚುನಾವಣೆಯಲ್ಲಿ ಬಹುಮತ ಸಾಧಿಸುವ ವಿಶ್ವಾಸ ನಮಗಿದೆ. ಎಡಪಕ್ಷದ ಮೂರು ದಶಕಗಳ ಆಡಳಿತದಿಂದ ಬೇಸತ್ತಿರುವ ರಾಜ್ಯದ ಮತದಾರರ ಮನೋಭಾವವನ್ನು ಗಮನಿಸಿ ಹೇಳುವುದಾದರೆ ಚುನಾವಣೆಯಲ್ಲಿ ನಮಗೆ ಗೆಲುವು ಖಚಿತ’ ಎಂದು ತೃಣಮೂಲ ಕಾಂಗ್ರೆಸ್ ಮುಖಂಡ ಪಾರ್ಥ ಚಟರ್ಜಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. 2009ರ ಲೋಕಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಮತ್ತು ಕಾಂಗ್ರೆಸ್, ಎಸ್‌ಯುಸಿಐ-ಸಿ ನೊಂದಿಗೆ ಮೈತ್ರಿ ಮಾಡಿಕೊಂಡು 42 ಲೋಕಸಭಾ ಕ್ಷೇತ್ರಗಳಲ್ಲಿ 26 ಸ್ಥಾನವನ್ನು ಪಡೆಯುವುದರ ಮೂಲಕ 1977ರ ಜೂನ್‌ನಿಂದ ರಾಜ್ಯದ ಚುಕ್ಕಾಣಿ ಹಿಡಿದಿರುವ ಸಿಪಿಎಂಗೆ ಭಾರಿ ಆಘಾತ ನೀಡಿದ್ದವು. ಬಿಜೆಪಿಯೂ ನಿಮ್ಮ ‘ಉನ್ನತ ಮೈತ್ರಿ’ಯ ಭಾಗವಾಗಿದೆಯೇ ಎಂದು ಕೇಳಿದ ಪ್ರಶ್ನೆಗೆ, ‘ಬಿಜೆಪಿ ನಮ್ಮ ಭಾಗವಾಗಿಲ್ಲ’ ಎಂದು ಚಟರ್ಜಿ ಉತ್ತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.