ADVERTISEMENT

ನಕ್ಸಲ್ ದಾಳಿ: ಆರು ಮಂದಿ ಬಲಿ

​ಪ್ರಜಾವಾಣಿ ವಾರ್ತೆ
Published 14 ಮೇ 2012, 19:30 IST
Last Updated 14 ಮೇ 2012, 19:30 IST

ನವದೆಹಲಿ/ರಾಯ್‌ಪುರ (ಪಿಟಿಐ): ನಕ್ಸಲರ ದಾಳಿಗೆ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ (ಸಿಐಎಸ್‌ಎಫ್) ಆರು ಯೋಧರು ಮತ್ತು ವಾಹನ ಚಾಲಕ ಬಲಿಯಾದ ಸ್ಥಳಕ್ಕೆ ಸಿಐಎಎಸ್‌ಎಫ್ ಮಹಾನಿರ್ದೇಶಕರ ಮತ್ತು ಕೇಂದ್ರ ಗೃಹ ಸಚಿವಾಲಯದ ಹಿರಿಯ ಅಧಿಕಾರಿಗಳ ತಂಡ ಸೋಮವಾರ ಭೇಟಿ ನೀಡಿತು.

ಸಿಐಎಸ್‌ಎಫ್ ಮಹಾನಿರ್ದೇಶಕ (ಡಿಜಿ) ರಾಜೀವ್, ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ (ನಕ್ಸಲ್ ಸಮಸ್ಯೆ ನಿರ್ವಹಣೆ) ಎಂ.ಎ. ಗಣಪತಿ, ಸಿಐಎಸ್‌ಎಫ್ ವಿಶೇಷ ಡಿಜಿ ಆರ್.ಆರ್. ವರ್ಮಾ, ಡಿಐಜಿ (ಕಾರ್ಯಾಚರಣೆ) ಜೈದೀಪ್ ಪ್ರಸಾದ್ ಮತ್ತಿತರ ಹಿರಿಯ ಅಧಿಕಾರಿಗಳನ್ನು ಒಳಗೊಂಡ ತಂಡ ಭೇಟಿ ನೀಡಿ ಪರಿಶೀಲಿಸಿತು.

ಸ್ಥಳೀಯ ಪೊಲೀಸರು ಮತ್ತು ಎಂಎನ್‌ಡಿಸಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಹಿರಿಯ ಅಧಿಕಾರಿಗಳ ತಂಡ, ಭದ್ರತಾ ಪಡೆಗಳು ಮತ್ತು ನಕ್ಸಲರ ನಡುವೆ ಪದೇಪದೇ ಘರ್ಷಣೆ ನಡೆಯುತ್ತಿರುವ ಗಣಿ ಪ್ರದೇಶದ ರಕ್ಷಣೆಗೆ ಹೊಸ ಮಾರ್ಗಗಳ ಕುರಿತು ಚರ್ಚಿಸಿತು.

ಕರ್ನಾಟಕದ ಯೋಧ ಸಾವು: ಛತ್ತೀಸ್‌ಗಡದ ದಾಂತೇವಾಡ ಜಿಲ್ಲೆಯ ಕಿರನಂದುಲ್‌ನಲ್ಲಿರುವ ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮದ (ಎನ್‌ಎಂಡಿಸಿ) ಗಣಿ ಪ್ರದೇಶದಲ್ಲಿ ಅರೆಸೇನಾ ಪಡೆಯಾದ ಸಿಐಎಸ್‌ಎಫ್ ತಂಡದ ಮೇಲೆ ನಕ್ಸಲರು ಭಾನುವಾರ ದಾಳಿ ನಡೆಸಿದ್ದಾರೆ. ತಂಡದಲ್ಲಿದ್ದ ಕರ್ನಾಟಕದ ಯೋಧರೊಬ್ಬರು ಸೇರಿ ಆರು ಯೋಧರು ಮತ್ತು ವಾಹನ ಚಾಲಕರೊಬ್ಬರು ಸಾವನ್ನಪ್ಪಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.