ADVERTISEMENT

ನದ್ವಿ ಭೇಟಿಯಾದ ಶ್ರೀಶ್ರೀ ರವಿಶಂಕರ್

ಪಿಟಿಐ
Published 1 ಮಾರ್ಚ್ 2018, 19:55 IST
Last Updated 1 ಮಾರ್ಚ್ 2018, 19:55 IST
ಶ್ರೀಶ್ರೀ ರವಿಶಂಕರ್‌
ಶ್ರೀಶ್ರೀ ರವಿಶಂಕರ್‌   

ಲಖನೌ: ಮಾತುಕತೆ ಮೂಲಕ ಅಯೋಧ್ಯೆಯ ರಾಮಮಂದಿರ ನಿರ್ಮಾಣ ವಿವಾದ ಬಗೆಹರಿಸಲು ಮುಂದಾಗಿರುವ ‘ಆರ್ಟ್‌ ಆಫ್‌ ಲಿವಿಂಗ್‌’ ಸಂಸ್ಥೆಯ ಮುಖ್ಯಸ್ಥ ಶ್ರೀಶ್ರೀ ರವಿಶಂಕರ್ ಗುರೂಜಿ, ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ (ಎಐಎಂಪಿಎಲ್‌ಬಿ) ಉಚ್ಚಾಟಿತ ಸದಸ್ಯ ಸಲ್ಮಾನ್‌ ನದ್ವಿ ಅವರನ್ನು ಗುರುವಾರ ಭೇಟಿ ಮಾಡಿದ್ದಾರೆ.

‘ಸಮಸ್ಯೆಯನ್ನು ಮಾತುಕತೆ ಮೂಲಕ ಬಗೆಹರಿಸಲು ಪ್ರಯತ್ನಿಸುತ್ತಿದ್ದೇನೆ. ಈ ಪ್ರಯತ್ನ ಯಶಸ್ಸು ಕಾಣುತ್ತಿದ್ದು, ಎಲ್ಲೆಡೆಯಿಂದ ಉತ್ತಮ ಸ್ಪಂದನೆ ದೊರೆತಿದೆ. ಎರಡೂ ಸಮುದಾಯಗಳ ಮಧ್ಯೆ ಪ್ರೀತಿ ಮತ್ತು ಸಾಮರಸ್ಯ ಮೂಡಿಸಿ, ರಾಮ ಮಂದಿರ ನಿರ್ಮಾಣಕ್ಕೆ ಅನುವಾಗುವ ಬಗ್ಗೆ ಮಾತನಾಡಿದ್ದೇನೆ’ ಎಂದು ಶ್ರೀಶ್ರೀ ರವಿಶಂಕರ್‌ ಅವರು ತಿಳಿಸಿದ್ದಾರೆ.

‘ಇನ್ನೂ ಹಲವರನ್ನು ಭೇಟಿ ಮಾಡಬೇಕಿದೆ. ಹಾಗಾಗಿಯೇ ಇಲ್ಲಿಗೆ ಬಂದಿದ್ದೇನೆ’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.

ADVERTISEMENT

ನ್ಯಾಯಾಲಯದ ಹೊರಗೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ನಡೆಸುತ್ತಿರುವ ನಿಮ್ಮ ಪ್ರಯತ್ನಕ್ಕೆ ಮುಸ್ಲಿಂ ಸಮುದಾಯದಿಂದ ತೀವ್ರ ಟೀಕೆಗಳು ವ್ಯಕ್ತವಾಗುತ್ತಿರುವ ಬಗ್ಗೆ ಕೇಳಿದ್ದಕ್ಕೆ ಪ್ರತಿಕ್ರಿಯಿಸಿರುವ ಅವರು, ‘ಮುಸ್ಲಿಂ ಸಮುದಾಯದಿಂದ ಸಾಕಷ್ಟು ಒಳ್ಳೆಯ ಅಭಿಪ್ರಾಯ ಮತ್ತು ಸಹಕಾರ ದೊರೆತಿದೆ’ ಎಂದು ಪ್ರತಿಕ್ರಿಯಿಸಿದ್ದಾರೆ.

‘ಈ ಸಂಬಂಧ ಚರ್ಚಿಸಲು ಮಾರ್ಚ್‌ 28ರಂದು ಲಖನೌನಲ್ಲಿ ಮುಸ್ಲಿಂ ನಾಯಕರು ಮತ್ತು ಉಲೇಮಾಗಳ ಬೃಹತ್‌ ಸಭೆ ಆಯೋಜಿಸಲಾಗಿದೆ’ ಎಂದು ಆರ್ಟ್‌ ಆಫ್‌ ಲಿವಿಂಗ್‌ನ ವಕ್ತಾರ ಗೌತಮ್‌ ವಿಗ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.