ADVERTISEMENT

ನನ್ನ ಅನುಪಸ್ಥಿತಿಯಲ್ಲಿ ಸಿಬಿಐ ದಾಳಿ ನಡೆಸಿದ್ದು ಸರಿಯಲ್ಲ: ಲಾಲೂ ಪ್ರಸಾದ್ ಯಾದವ್

​ಪ್ರಜಾವಾಣಿ ವಾರ್ತೆ
Published 7 ಜುಲೈ 2017, 13:14 IST
Last Updated 7 ಜುಲೈ 2017, 13:14 IST
ಲಾಲೂ ಪ್ರಸಾದ್  ಯಾದವ್
ಲಾಲೂ ಪ್ರಸಾದ್ ಯಾದವ್   

ನವದೆಹಲಿ: ರೈಲ್ವೆ ಇಲಾಖೆಯಲ್ಲಿ ಅಕ್ರಮ ಆರೋಪಿಸಿ ಪಟನಾದಲ್ಲಿರುನ ತಮ್ಮ ನಿವಾಸದ ಮೇಲೆ ಸಿಬಿಐ ದಾಳಿ ನಡೆದಿರುವ ಬಗ್ಗೆ ಪ್ರತಿಕ್ರಿಯಿಸಿದ  ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್, ನಾನು ಅಕ್ರಮವೆಸಗಿಲ್ಲ ಎಂದು ಹೇಳಿದ್ದಾರೆ.

2006ರಲ್ಲಿ ಲಾಲೂ ಅವರು ರೈಲ್ವೆ ಸಚಿವರಾಗಿದ್ದಾಗ ರೈಲು ನಿಲ್ದಾಣಗಳ ಬಳಿ ಇರುವ ಹೋಟೆಲ್‌ಗಳ ನಿರ್ವಹಣೆಗಾಗಿ ಇಲಾಖೆ ನಡೆಸಿದ್ದ ಹರಾಜು ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿ ಶುಕ್ರವಾರ ಬೆಳಗ್ಗೆ  ಸಿಬಿಐ ದಾಳಿ ನಡೆಸಿತ್ತು.

ಏತನ್ಮಧ್ಯೆ, ತನ್ನ ಅನುಪಸ್ಥಿತಿಯಲ್ಲಿ ತನ್ನ ಮಕ್ಕಳ ಮನೆ ಮೇಲೆ ಸಿಬಿಐ ದಾಳಿ ನಡೆಸಿದ್ದು ಸರಿಯಲ್ಲ ಇದೆಲ್ಲವೂ ಬಿಜೆಪಿಯ ಕುತಂತ್ರ. ಇದಕ್ಕೆ ನಾನು ಬಗ್ಗಲ್ಲ ಎಂದು ಲಾಲೂ ಹೇಳಿದ್ದಾರೆ.

ADVERTISEMENT

ಮೇವು ಹಗರಣದ ವಿಚಾರಣೆಗಾಗಿ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಲಾಲೂ ಮತ್ತು ಅವರ ಪತ್ನಿ ಹಾಜರಾಗಿದ್ದ ವೇಳೆ ಅವರ ನಿವಾಸದ ಮೇಲೆ ಸಿಬಿಐ ದಾಳಿ ನಡೆದಿತ್ತು. ಇದಾದ ನಂತರ ಮೊರಾಬದಿಯಲ್ಲಿರುವ ರಾಜ್ಯ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿ ಕರೆದು ಮಾತನಾಡಿದ ಲಾಲೂ, ನನ್ನ ನಿವಾಸದ ಮೇಲೆ ದಾಳಿ ನಡೆಸಲು ಸಿಬಿಐ ಅಧಿಕಾರಿಗಳು ಬಂದಿದ್ದಾರೆ ಎಂಬ ಸುದ್ದಿ ತಿಳಿದ ಕೂಡನೇ ನಾನು ನಮ್ಮ ಮಕ್ಕಳಿಗೆ  (ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಮತ್ತು ಆರೋಗ್ ಸಚಿವ ತೇಜ್ ಪ್ರತಾಪ್) ಫೋನ್ ಮಾಡಿ, ಸಿಬಿಐ ಅಧಿಕಾರಿಗಳನ್ನು ಸ್ವಾಗತಿಸಿ. ಅವರು ಏನು ಬೇಕೋ ಅದನ್ನು ಹುಡುಕಲಿ ಎಂದು ಹೇಳಿದ್ದೆ.

[related]

ಅದೇ ವೇಳೆ ಸಿಬಿಐ ಅಧಿಕಾರಿಗಳಿಗೆ ಭದ್ರತೆಯನ್ನೂ ನೀಡಿ ಎಂದು ನಾನು ಹೇಳಿದೆ. ಒಂದು ವೇಳೆ ಯಾರಾದರೂ ಸಿಬಿಐ ಅಧಿಕಾರಿಗಳ ಮೇಲೆ ಕಲ್ಲು ತೂರಾಟ ನಡೆಸಿದರೆ, ಲಾಲೂ ಅವರು ಸಿಬಿಐ ಜತೆ ಸಹಕರಿಸುತ್ತಿಲ್ಲ ಎಂದು ಸುದ್ದಿಯಾಗಬಹುದು. ನಾನು ಮನೆಯಲ್ಲಿಲ್ಲದ ವೇಳೆ ಸಿಬಿಐ ದಾಳಿ ನಡೆಸಿದ್ದು ಸರಿಯಲ್ಲ. ಅದರಲ್ಲಿ ಅಧಿಕಾರಿಗಳದ್ದೇನೂ ತಪ್ಪಿಲ್ಲ. ಅವರು ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರದ ಆದೇಶವನ್ನು ಪಾಲಿಸುತ್ತಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಕೈಬರಹದಲ್ಲಿ ಬರೆದಿರುವ ಟಿಪ್ಪಣಿಯೊಂದನ್ನು ಲಾಲೂ ಓದಿ ಹೇಳಿದ್ದಾರೆ. ಸಿಬಿಐ ತನ್ನ ಮೇಲೆ ಎಫ್‍ಐಆರ್ ದಾಖಲಿಸಿದ ಮತ್ತು ದಾಳಿ ನಡೆಸಿದ ಮಾಹಿತಿಯಿರುವ ಟಿಪ್ಪಣಿಯಾಗಿದೆ ಅದು.

ಭಾರತೀಯ ರೈಲ್ವೆಯ ಆಹಾರ ವಿತರಣೆ ಮತ್ತು ಪ್ರವಾಸೋದ್ಯಮ ನಿಗಮದ (ಐಆರ್‌ಸಿಟಿಸಿ) 1999ರಲ್ಲಿ ಸ್ಥಾಪನೆಯಾಗಿದ್ದು,  2002ರಲ್ಲಿ ಕಾರ್ಯಾಚರಣೆ ಆರಂಭಿಸಿತ್ತು. 2003ರಲ್ಲಿ ದೆಹಲಿ, ಪುರಿ, ರಾಂಚಿ ಮತ್ತು ಹೌರಾದಲ್ಲಿರುವ ಹೋಟೆಲ್‍ಗಳನ್ನು ಐಆರ್‌ಸಿಟಿಸಿಗೆ ನೀಡಲಾಗಿತ್ತು. ಮೇ 31, 204ರಂದು ನಾನು ರೈಲ್ವೆ ಸಚಿವನಾದೆ. ಅಷ್ಟೊತ್ತರಲ್ಲಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‍ಡಿಎ ಸರ್ಕಾರ ಈ ಹೋಟೆಲ್‍ಗಳನ್ನು ಖಾಸಗಿಯವರಿಗೆ ನೀಡಿತ್ತು.

ಐಆರ್‍‍ಸಿಟಿಸಿ ಎಂಬುದು ಸ್ವಾಯತ್ತ ಸಂಸ್ಥೆಯಾಗಿದೆ. ಅಲ್ಲಿಂದ ಒಂದೇ ಒಂದು ಕಡತ ಕೂಡಾ ರೈಲ್ವೆ ಸಚಿವರತ್ತ ಬರುವುದಿಲ್ಲ. ರೈಲ್ವೇ ಸಚಿವರು ಒಪ್ಪಿಗೆ ನೀಡಿರುವ ಒಂದೇ ಒಂದು ಕಡತವನ್ನಾದರೂ ತೋರಿಸಿ ಎಂದು ನಾನು ಸವಾಲು ಹಾಕುತ್ತಿದ್ದೇನೆ. 2006ರಲ್ಲಿ ಕೆಲವು ಹೋಟೆಲ್‍ಗಳನ್ನು ಓಪನ್ ಟೆಂಡರ್ ಮೂಲದ ಗರಿಷ್ಠ ಬಿಡ್‍ಗೆ ಖಾಸಗಿ ಸಂಸ್ಥೆಗಳಿಗೆ ನೀಡಲಾಗಿತ್ತು.

ನಾನು ಪ್ರಲೋಭನೆಗೆ ಒಳಗಾಗಲ್ಲ ಎಂದು ಅವರಿಗೆ ಗೊತ್ತು. ಹಾಗಾಗಿ  ನನ್ನನ್ನು ಜೈಲಿಗಟ್ಟಲು ಅಥವಾ ಶರಣಾಗುವಂತೆ ಮಾಡಲು ಬಿಜೆಪಿ ಯತ್ನಿಸುತ್ತಿದೆ. ಅವರು ನನ್ನನ್ನು ಹೆದರಿಸಲು ಯತ್ನಿಸುತ್ತಿದ್ದಾರೆ. ಆದರೆ ಇದಕ್ಕೆ ನಾನೇನೂ ಹೆದರಲ್ಲ ಎಂದಿದ್ದಾರೆ ಲಾಲೂ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.