ADVERTISEMENT

ನನ್ನ ಬಾಯ್ಮುಚ್ಚಿಸಲು ಬಿಜೆಪಿಯಿಂದ ಸಾಧ್ಯವಿಲ್ಲ: ಪ್ರಕಾಶ್ ರೈ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2018, 5:08 IST
Last Updated 18 ಮಾರ್ಚ್ 2018, 5:08 IST
ಪ್ರಕಾಶ್ ರೈ (ಸಂಗ್ರಹ ಚಿತ್ರ)
ಪ್ರಕಾಶ್ ರೈ (ಸಂಗ್ರಹ ಚಿತ್ರ)   

ತ್ರಿಶ್ಶೂರ್: ಆರ್ಥಿಕ ವ್ಯವಸ್ಥೆಯಲ್ಲಿ  ಕುಸಿತ, ಕಂಗಾಲಾದ ರೈತರು ಮತ್ತು ನಿರುದ್ಯೋಗಿ ಯುವ ಜನಾಂಗ- ಇದು ನಾಲ್ಕು ವರ್ಷ ಅಧಿಕಾರ ನಡೆಸಿದ ಬಿಜೆಪಿ ದೇಶಕ್ಕೆ ನೀಡಿದ ಕೊಡುಗೆ ಎಂದು ನಟ, ಸಾಮಾಜಿಕ ಕಾರ್ಯಕರ್ತ ಪ್ರಕಾಶ್ ರೈ ಹೇಳಿರುವುದಾಗಿ ದ ಹಿಂದೂ ಪತ್ರಿಕೆ ವರದಿ ಮಾಡಿದೆ.

ಶನಿವಾರ ಸಂಜೆ ಪ್ರಜಾಪ್ರಭುತ್ವ ಸಂಘಟನೆಗಳು ಆಯೋಜಿಸಿದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಪ್ರಕಾಶ್ ರಾಜ್, ಬಿಜೆಪಿ ನಮ್ಮ ಎದುರಾಳಿ ಎಂದು ನಾನು ಪರಿಗಣಿಸುವುದಿಲ್ಲ. ಆದರೆ ಶೇ. 30ರಷ್ಟು ಹೆಚ್ಚು ಮತ ಪಡೆದು ದೇಶದ ಹಣೆಬರಹವನ್ನು ಬದಲಿಸಲು ಸಾಧ್ಯ ಎಂದು ಬಿಜೆಪಿ ತೋರಿಸಿಕೊಟ್ಟಿದೆ. ಬಿಜೆಪಿ ದೇಶದಲ್ಲಿ ಮಾಡಿದ ಅನಾಹುತಗಳನ್ನು ಸರಿ ಮಾಡಬೇಕಾಗದೆ ಇನ್ನು ಕನಿಷ್ಟ 10 ವರ್ಷಗಳು ಬೇಕಾಗುತ್ತವೆ. ಅವರಿಗೆ ಅಧಿಕಾರ ಮುಂದುವರಿಸಲು ಬಿಟ್ಟರೆ, ಗಾಯ ವಾಸಿಯಾಗಲು ಇನ್ನಷ್ಟು ಸಮಯಬೇಕು. ದೇಶದ ಐಕ್ಯತೆಯನ್ನೇ ಅವರು ಕದಡಿದ್ದಾರೆ ಎಂದಿದ್ದಾರೆ ರೈ.

ದೇಶ ಎದುರಿಸುತ್ತಿರುವ ಅತಿ ದೊಡ್ಡ ಸಮಸ್ಯೆ ಎಂದರೆ ಭ್ರಷ್ಟಾಚಾರ ಮತ್ತು ಕೋಮುವಾದ. ನಮ್ಮ ಶತ್ರುಗಳು ಯಾರು ಎಂಬುದನ್ನು ನಾವು ಗುರುತಿಸಬೇಕು. ದೊಡ್ಡ ರ‍್ಯಾಲಿಗಳನ್ನು ಆಯೋಜಿಸುವ ಬದಲು ಪ್ರಜಾಪ್ರಭುತ್ವ ಶಕ್ತಿಗಳು ಸಣ್ಣ ಸಣ್ಣ ಕೂಟಗಳನ್ನು ನಡೆಸಿದೆ ಫ್ಯಾಸಿಸ್ಟ್ ಶಕ್ತಿಗಳ ವಿರುದ್ದ ಹೋರಾಡಬಹುದು.

ADVERTISEMENT

ನನ್ನ ಬಾಯ್ಮುಚ್ಚಿಸಲು ಬಿಜೆಪಿಯಿಂದ ಸಾಧ್ಯವಿಲ್ಲ. ನನ್ನ ದಾರಿ ಮತ್ತು ಚಿಂತನೆ ಬಗ್ಗೆ ನನಗೆ ತಿಳಿದಿದೆ. ನನ್ನನ್ನು ಬೆನ್ನಟ್ಟಲು ಪ್ರಯತ್ನಿಸಬೇಡಿ. ನಾನು ಬೇಗನೆ ನನ್ನ ಗುರಿ ಮುಟ್ಟುವೆ. ನನಗೆ ವಿಷ ನೀಡಬೇಡಿ. ನಾನದನ್ನು ಕುಡಿದು ವಿಷಕಂಠ (ಶಿವ) ಆಗುವೆ ಎಂದು ರೈ ಹೇಳಿದ್ದಾರೆ.

ಲೇಖಕಿ ಮತ್ತು ಸಾಮಾಜಿಕ ಕಾರ್ಯಕರ್ತೆ ಸಾರಾ ಜೋಸೆಫ್, ನಟ ಜೋಯ್ ಮ್ಯಾಥ್ಯೂ, ಸಾಮಾಜಿಕ ಕಾರ್ಯಕರ್ತ ಕೆ.ವೇಣು, ಎಂ.ಎನ್ ಕರಸ್ಸೇರಿ ಮೊದಲಾದವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.