ADVERTISEMENT

ನವಜಾತ ಶಿಶುವಿನ ಜನನಾಂಗ ಕತ್ತರಿಸಿ ಗಂಡು ಮಗುವನ್ನು ಹೆಣ್ಣು ಮಗುವನ್ನಾಗಿಸಲು ಯತ್ನಿಸಿದ ವೈದ್ಯ; ಶಿಶು ಸಾವು

ಏಜೆನ್ಸೀಸ್
Published 27 ಏಪ್ರಿಲ್ 2018, 10:07 IST
Last Updated 27 ಏಪ್ರಿಲ್ 2018, 10:07 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ರಾಂಚಿ: ಜಾರ್ಖಂಡ್‍ನ ಜೈ ಪ್ರಕಾಶ್ ನಗರದಲ್ಲಿರುವ ಓಂ ನರ್ಸಿಂಗ್ ಹೋಮ್‍ನಲ್ಲಿ ವೈದ್ಯರೊಬ್ಬರು ನವಜಾತ ಶಿಶುವಿನ ಗುಪ್ತಾಂಗವನ್ನು ಕತ್ತರಿಸಿ, ಮಗು ಸಾವಿಗೀಡಾದ ಘಟನೆ ಮಂಗಳವಾರ ನಡೆದಿದೆ.

ಪೊಲೀಸರ ಪ್ರಕಾರ ಎಂಟು ತಿಂಗಳ ಗರ್ಭಿಣಿ ಗುಡಿಯಾ ದೇವಿ ಎಂಬಾಕೆ ಓಂ ನರ್ಸಿಂಗ್ ಹೋಮ್‍ಗೆ ಚೆಕ್ಅಪ್‍ಗಾಗಿ ಬಂದಾಗ ಅಲ್ಟ್ರಾ ಸೌಂಡ್ ಸ್ಕ್ಯಾನ್ ಮಾಡಿಸಿಕೊಳ್ಳಲು ವೈದ್ಯರು ಸೂಚಿಸಿದ್ದಾರೆ.

ಅನುಜ್ ಕುಮಾರ್ ಎಂಬ ವೈದ್ಯರು ಸೋನೊಗ್ರಫಿ ನಡೆಸಿದ್ದು, ಗರ್ಭದಲ್ಲಿರುವ ಮಗು ಹೆಣ್ಣು ಎಂದು ಗುಡಿಯಾ ದೇವಿ ಅವರ ಪತಿ ಅನಿಲ್ ಪಾಂಡಾ ಅವರಿಗೆ ತಿಳಿಸಿದ್ದರು. ಅಷ್ಟೇ ಅಲ್ಲದೆ ಸಿಸೇರಿಯನ್ ಸೆಕ್ಷನ್ ಮಾಡಬೇಕೆಂದು ವೈದ್ಯರು ಹೇಳಿದ್ದರು. ಇದಕ್ಕಾಗಿ ಪಾಂಡಾ ಹಣವನ್ನೂ ಪಾವತಿ ಮಾಡಿದ್ದರು. ಮಂಗಳವಾರ ರಾತ್ರಿ ಸಿಸೇರಿಯನ್ ನಡೆದಿತ್ತು.

ADVERTISEMENT

ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಆದರೆ ಕುಟುಂಬದವರಲ್ಲಿ ಹುಟ್ಟಲಿರುವ ಮಗು ಹೆಣ್ಣು ಎಂದು ಹೇಳಿದ್ದರಿಂದ ಆ ವೈದ್ಯರು ಗಂಡುವಿನ ಜನನಾಂಗವನ್ನು ಕತ್ತರಿಸಿದ್ದು, ಈ ವೇಳೆ ಮಗು ಸಾವಿಗೀಡಾಗಿದೆ. ಆದರೆ ವೈದ್ಯರು, ಹೆಣ್ಣು ಮಗು ಹುಟ್ಟಿದೆ. ಹುಟ್ಟಿದಾಗ ಮಗು ವೈಕಲ್ಯದಿಂದ ಕೂಡಿದ್ದು ಸಾವನ್ನಪ್ಪಿದೆ ಎಂದು ಕುಟುಂಬದವರಲ್ಲಿ ಸುಳ್ಳು ಹೇಳಿದ್ದರು.

ಆದರೆ ಮಗುವಿನ ಅಮ್ಮ ವೈದ್ಯರ ಕೃತ್ಯವನ್ನು ತಮ್ಮ ಕುಟುಂಬದವರಲ್ಲಿ ಹೇಳಿದ್ದಾರೆ. ಈ ಬಗ್ಗೆ ಡಾ. ಅನುಜ್ ಕುಮಾರ್ ಅವರನ್ನು ಪ್ರಶ್ನಿಸಿದಾಗ ಅವರು ಅಲ್ಲಿಂದ ತಲೆಮರೆಸಿಕೊಂಡಿದ್ದಾರೆ.

ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ ನಂತರ ಬುಧವಾರ ಬೆಳಗ್ಗೆ ಪೊಲೀಸರು ನರ್ಸಿಂಗ್ ಹೋಮ್‍ಗೆ ಬೀಗಮುದ್ರೆ ಹಾಕಿ ಮಗುವಿನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರು. ಪ್ರಕರಣದ ತನಿಖೆ ಮುಂದುವರೆದಿದ್ದು ತಲೆಮರೆಸಿಕೊಂಡ ವೈದ್ಯರಿಗಾಗಿ ಹುಡುಕಾಟ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.