ADVERTISEMENT

ನಾನೊಬ್ಬನೇ ನಿರ್ಧರಿಸಿಲ್ಲ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2010, 6:15 IST
Last Updated 25 ಡಿಸೆಂಬರ್ 2010, 6:15 IST

ನವದೆಹಲಿ (ಪಿಟಿಐ): ‘ನಾನು ಮುಗ್ಧ. ನಾನೊಬ್ಬನೇ ಯಾವ ನಿರ್ಧಾರವನ್ನೂ ಕೈಗೊಂಡಿಲ್ಲ. ಕಾರ್ಯಕಾರಿ ಮಂಡಳಿಯೇ ಎಲ್ಲ ತೀರ್ಮಾನಗಳನ್ನೂ ತೆಗೆದುಕೊಂಡಿದೆ’ಎಂದು ಸುರೇಶ್ ಕಲ್ಮಾಡಿ ಪ್ರತಿಕ್ರಿಯಿಸಿದ್ದಾರೆ.

ಇಲ್ಲಿನ ತಮ್ಮ ನಿವಾಸದ ಮೇಲೆ ಸಿಬಿಐ ದಾಳಿ ನಡೆದ ಸಂದರ್ಭದಲ್ಲಿ ಅಧಿಕಾರಿಗಳಿಂದ ವಿಚಾರಣೆಗೆ ಒಳಗಾದ ಬಳಿಕ ಹೊರಬಂದ ಅವರು ದಿಟ್ಟತನದಿಂದ ಸುದ್ದಿಗಾರರನ್ನು ಎದುರಿಸಲು ಯತ್ನಿಸಿದರು.‘ನಾನು ಮುಗ್ಧ. ನೀವೆಲ್ಲರೂ (ಮಾಧ್ಯಮದವರು) ನನ್ನನ್ನು ಅಪರಾಧಿಯನ್ನಾಗಿ ಬಿಂಬಿಸುತ್ತಿದ್ದೀರಿ’ ಎಂದು ಸರಣಿ ಪ್ರಶ್ನೆಗಳಿಗೆ ಕಲ್ಮಾಡಿ ಉತ್ತರಿಸಿದರು.

‘ತನಿಖಾ ಸಂಸ್ಥೆಗೆ ಸಂಪೂರ್ಣ ಸಹಕಾರದ ಭರವಸೆ ನೀಡಿದ್ದೇನೆ. ಕ್ರೀಡಾಕೂಟವನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಸಿಡಬ್ಲುಜಿ ಯಾವುದೇ ತನಿಖೆಗೂ ಸಿದ್ಧವಾಗಿದೆ’ ಎಂದರು.

‘ನಾನಾಗಲಿ ಅಥವಾ ಅಧಿಕಾರಿಗಳಾಗಲೀ ತನಿಖಾ ಸಂಸ್ಥೆಯಿಂದ ಏನನ್ನೂ ಮುಚ್ಚಿಡ ಬಯಸುವುದಿಲ್ಲ. ಆದರೆ ನಾನು ತನಿಖೆಯಲ್ಲಿ ಮೂಗುತೂರಿಸುತ್ತಿದ್ದು ನನ್ನನ್ನು ತೆಗೆದುಹಾಕಬೇಕೆಂದು ಕೋರಿ ಸಿಬಿಐ ನಿರ್ದೇಶಕ ಎ.ಪಿ.ಸಿಂಗ್ ಸರ್ಕಾರಕ್ಕೆ ಪತ್ರ ಬರೆದಿರುವುದು ಅಚ್ಚರಿ ಮೂಡಿಸಿದೆ’ ಎಂದರು.

‘ಒಂದು ವೇಳೆ ಯಾವ ಕಡತವಾದರೂ ಬಾಕಿ ಇದ್ದರೆ ಅವು ಇತರ ತನಿಖಾ ಸಂಸ್ಥೆಗಳಾದ ಆದಾಯ ತೆರಿಗೆ, ಸಿಎಜಿ ಅಥವಾ ಜಾರಿ ನಿರ್ದೇಶನಾಲಯದ ಬಳಿ ಸೇರಿರಬಹುದು. ಸಿಬಿಐ ಕಾಣೆಯಾಗಿರುವ ದಾಖಲೆಗಳ ಪಟ್ಟಿ ನೀಡಿದರೆ ತಾವು ಮತ್ತು ತಮ್ಮ ತಂಡ ಅವುಗಳನ್ನು ಒದಗಿಸಲು ಸಿದ್ಧ ಎಂದರು. ದಾಳಿ ವೇಳೆ ಸಿಬಿಐ ಏನೇನು ವಶಪಡಿಸಿಕೊಂಡಿದೆ ಎಂಬುದಕ್ಕೆ, ಅದು ನನಗೆ ತಿಳಿಯದು ಸಂಸ್ಥೆ ನನಗೆ ಅದರ ಪಟ್ಟಿ ನೀಡಿದೆ ಎಂದಷ್ಟೇ’ ತಿಳಿಸಿದರು. ಸಿಬಿಐ ಅಧಿಕಾರಿಗಳು ನನಗೆ ಉಪಾಹಾರ ತಂದಿದ್ದರು. ನಾನು ಅವರಿಗೆ ಕಾಫಿ ನೀಡಿದೆ ಎಂದು ಲಘುವಾಗಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.