ADVERTISEMENT

ನಾಪತ್ತೆಯಾಗಿದ್ದ ಆರೋಪಿ ಠಾಣೆ ಜೈಲಿನಲ್ಲಿ ಪತ್ತೆ!

ಮುಂಬೈ: ಸಾಮೂಹಿಕ ಅತ್ಯಾಚಾರ ಪ್ರಕರಣ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2013, 19:59 IST
Last Updated 26 ಸೆಪ್ಟೆಂಬರ್ 2013, 19:59 IST

ಮುಂಬೈ (ಪಿಟಿಐ): ಪತ್ರಿಕಾ ಛಾಯಾಗ್ರಾಹಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಐವರು ಆರೋಪಿಗಳ ಪೈಕಿ ನಾಪತ್ತೆಯಾಗಿದ್ದ ಒಬ್ಬ ಆರೋಪಿ ಗುರುವಾರ ಮಹಾರಾಷ್ಟ್ರದ ಠಾಣೆ ಕಾರಾಗೃಹದಲ್ಲಿ ಪತ್ತೆಯಾಗಿದ್ದಾನೆ.

  ಈ ಕುರಿತು ಮುಂಬೈ ಪೊಲೀಸರು ಮತ್ತು ಠಾಣೆ ಜೈಲು ಅಧಿಕಾರಿಗಳು ಪರಸ್ಪರ ಕ್ಷಮೆಯಾಚಿಸಿದ್ದಾರೆ. ಸಾಮೂಹಿಕ ಅತ್ಯಾಚಾರ ಪ್ರಕರಣ ಸಂಬಂಧ ನ್ಯಾಯಾ­ಲಯಕ್ಕೆ ಹಾಜರುಪಡಿಸಲು ಕರೆದೊಯ್ಯುತ್ತಿದ್ದಾಗ ಆರೋಪಿ ಪರಾರಿಯಾಗಿದ್ದ. ಇದರಿಂದ ಪೊಲೀಸರು ತೀವ್ರ ಮುಜುಗರ ಅನುಭವಿಸಬೇಕಾಗಿತು.

ಆರೋಪಿಗಳಾದ ವಿಜಯ್‌ ಜಾಧವ್‌, ಖಾಸಿಂ ಬಂಗಾಳಿ ಮತ್ತು ಸಲೀಂ   ಅನ್ಸಾರಿ ಜೆಗೆ ಇನ್ನೊಬ್ಬ ಆರೋಪಿ ಸಿರಾಜ್‌ ರೆಹಮಾನ್‌ ಖಾನ್‌ನನ್ನು ನ್ಯಾಯಾ­ಲಯಕ್ಕೆ ಏಕೆ ಹಾಜರುಪಡಿಸಿಲ್ಲ ಎಂದು ಇಲ್ಲಿನ ಸೆಷನ್ಸ್‌ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶೆ ಶಾಲಿನಿ ಫನ್‌ಸಾಲ್ಕರ್‌ ಜೋಷಿ ಪ್ರಶ್ನಿಸಿದರು. ಇದಕ್ಕೆ ವಿಶೇಷ ಸರ್ಕಾರಿ ಅಭಿಯೋಜಕ ಉಜ್ವಲ್‌ ನಿಕ್ಕಂ, ನಾಪತ್ತೆಯಾಗಿದ್ದ ಸಿರಾಜ್‌ ರೆಹಮಾನ್‌ ಖಾನ್‌ ಠಾಣೆಯ ಜೈಲಿನಲ್ಲಿ ಇದ್ದಾನೆ ಎಂದು ಮಾಹಿತಿ ನೀಡಿದರು.

  ‘ಈ ಕುರಿತು ಠಾಣೆಯ ಜೈಲು ಅಧಿಕಾರಿಗಳನ್ನು ಸಂಪರ್ಕಿಸಿದಾಗ ಖಾನ್‌ ನಮ್ಮ ಜೈಲಿನಲ್ಲಿಲ್ಲ ಎಂದು ತಿಳಿಸಿದ್ದಾರೆ. ಆದರೆ, ಮುಂಬೈ ಪೊಲೀಸರು ಮಾತ್ರ, ಖಾನ್‌ ಠಾಣೆ ಜೈಲಿನಲ್ಲಿರುವುದಾಗಿ ತಿಳಿಸಿದ್ದಾರೆ’ ಎಂದು ನಿಕ್ಕಂ ಬಳಿಕ ಸುದ್ದಿಗಾರರಿಗೆ ವಿವರಿಸಿದರು.  ಠಾಣೆಯ ಜೈಲು ಅಧೀಕ್ಷಕರಿಗೆ ಸಮನ್ಸ್‌ ನೀಡಿರುವ ನ್ಯಾಯಾಲಯ, ಈ ಕುರಿತು ಶುಕ್ರವಾರ ನ್ಯಾಯಾಲಯಕ್ಕೆ ಹಾಜರಾಗಿ ವಿವರಣೆ ನೀಡುವಂತೆ  ಸೂಚಿಸಿದೆ.

  ಖಾನ್‌ ಇನ್ನೂ ಪತ್ತೆಯಾಗಿಲ್ಲ ಎಂಬ ವರದಿಯನ್ನು ಅಲ್ಲಗಳೆದಿರುವ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ (ಕಾರಾಗೃಹ) ಮೀರನ್‌ ಬೋರ್ವಾಂಕರ್‌, ‘ಖಾನ್‌ ಠಾಣೆಯ ಜೈಲಿನಲ್ಲಿಯೇ ಇದ್ದಾನೆ. ಈ ಕುರಿತು ಠಾಣೆಯ ಜೈಲಿನ ಮುಖ್ಯಸ್ಥರೊಂದಿಗೆ ಮಾತನಾಡಿದ್ದೇನೆ. ಏಕೆ ಗೊಂದಲ ಉಂಟಾಗಿದೆ ಎನ್ನುವುದು ನನಗೆ ತಿಳಿಯುತ್ತಿಲ್ಲ’ ಎಂದಿದ್ದಾರೆ.


‘ಖಾನ್‌ ಪರಾರಿಯಾಗಿಲ್ಲ. ಆಡಳಿತಾತ್ಮಕ ಕಾರಣಗಳಿಂದಾಗಿ ಆರೋಪಿಯನ್ನು ಗುರುವಾರ ಹಾಜರುಪಡಿಸಲು ಸಾಧ್ಯವಾಗಿಲ್ಲ. ಈ ಕುರಿತು ಸ್ವತಃ  ಪರಿಶೀಲನೆ ನಡೆಸಿದ್ದೇನೆ’ ಎಂದು ಠಾಣೆಯ ಜೈಲು ಅಧೀಕ್ಷಕ ಯು.ಟಿ. ಪವಾರ್‌ ತಿಳಿಸಿದ್ದಾರೆ. ಎರಡು ದಿನಗಳ ಹಿಂದೆ ಖಾನ್‌ ವಿರುದ್ಧ ವಾರಂಟ್‌ ಹೊರಡಿಸಿದ್ದ ನ್ಯಾಯಾಲಯ, ಆತನನ್ನು ಹಾಜರುಪಡಿಸುವಂತೆ ಠಾಣೆಯ ಜೈಲು ಅಧಿಕಾರಿಗಳಿಗೆ ಸೂಚಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT