ADVERTISEMENT

ನಿಡಗಲ್‌ನಲ್ಲಿ ಹೊತ್ತೊಯ್ದು ಅತ್ಯಾಚಾರ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2018, 19:24 IST
Last Updated 2 ಮಾರ್ಚ್ 2018, 19:24 IST
ನಾಗಲಕ್ಷ್ಮಿ ಬಾಯಿ
ನಾಗಲಕ್ಷ್ಮಿ ಬಾಯಿ   

ತುಮಕೂರು: ‘ಪಾವಗಡ ತಾಲ್ಲೂಕಿನ ನಿಡಗಲ್‌ನಲ್ಲಿ ಹೆಣ್ಣು ಮಕ್ಕಳು ಮತ್ತು ಮಹಿಳೆಯರನ್ನು ದುಷ್ಕರ್ಮಿಗಳು ಬಲವಂತವಾಗಿ ಹೊತ್ತೊಯ್ದು ಅತ್ಯಾಚಾರ ನಡೆಸುತ್ತಿದ್ದಾರೆ. ಐದಾರು ದಿನಗಳ ನಂತರ ಅವರನ್ನು ಮನೆಗೆ ಕರೆತಂದು ಬಿಡುತ್ತಿದ್ದಾರೆ’ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಬಾಯಿ ಗಂಭೀರ ಆರೋಪ ಮಾಡಿದರು.

ಶುಕ್ರವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೆಲ ದಿನಗಳ ಹಿಂದೆ ಗ್ರಾಮದ 20 ಜನರು ನನ್ನ ಕಚೇರಿಗೆ ಬಂದಿದ್ದರು. ಅವರಲ್ಲಿ ಒಬ್ಬ ಮಹಿಳೆ, ತನ್ನ ಮೇಲೆ ನಡೆದ ಹಲ್ಲೆ ಹಾಗೂ ಮಹಿಳೆಯರನ್ನು ಹೊತ್ತೊಯ್ಯುತ್ತಿರುವ ಬಗ್ಗೆ ತಿಳಿಸಿದರು. ನಾನು ಬುಧವಾರ (ಫೆ.28) ಗ್ರಾಮಕ್ಕೆ ಭೇಟಿ ನೀಡಿದಾಗ ಈ ಬಗ್ಗೆ ಮತ್ತಷ್ಟು ಮಂದಿ ಅಳಲು ತೋಡಿಕೊಂಡರು’ ಎಂದು ವಿವರಿಸಿದರು.

‘ಅಸಹಾಯಕರು, ಒಂಟಿ ಮಹಿಳೆಯರು, ವಿಧವೆಯರು ಹೀಗೆ ಕೆಲವರನ್ನೇ ಗುರಿ ಮಾಡಿಕೊಂಡು ಈ ಕೃತ್ಯ ಎಸಗಲಾಗುತ್ತಿದೆ. ಬಹುತೇಕ ಮಹಿಳೆಯರು ಹೆಸರು ಹೇಳಲು ಭಯಪಡುತ್ತಿದ್ದಾರೆ. ಐದಾರು ತಿಂಗಳ ಹಿಂದೆ ಒಬ್ಬ ಮಹಿಳೆಯನ್ನು ಹೊತ್ತೊಯ್ದು ಅತ್ಯಾಚಾರ ನಡೆಸಿದ್ದರು. ಆಕೆ ನಮಗೆ ಮಾಹಿತಿ ನೀಡಲು ಹಿಂದೇಟು ಹಾಕಿದಳು. ಈ ಬಗ್ಗೆ ಹೇಳಿದರೆ ಇಡೀ ವಂಶವನ್ನೇ ನಾಶ ಮಾಡುತ್ತಾರೆ ಎಂದು ಭಯದಿಂದ ಹೆದರಿದಳು’ ಎಂದು ತಿಳಿಸಿದರು.

ADVERTISEMENT

‘ದುಷ್ಕರ್ಮಿಗಳು ಪೊಲೀಸರಿಗೆ ದೂರು ನೀಡದಂತೆ ಬೆದರಿಕೆ ಹಾಕುತ್ತಿದ್ದಾರೆ. ಜನರು ಹೇಳುವ ಪ್ರಕಾರ ಇವರಿಗೆ ಮಾಜಿ ಶಾಸಕ ಹಾಗೂ ಅವರ ಪುತ್ರನ ಬೆಂಬಲ ಇದೆಯಂತೆ. ನಾನು ಗ್ರಾಮಕ್ಕೆ ಭೇಟಿ ನೀಡಿ ವಾಪಸ್ ಆದ ನಂತರ ದುಷ್ಕರ್ಮಿಗಳು ಮತ್ತೆ ಕೆಲವು ಮಹಿಳೆಯರಿಗೆ ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರ ಜತೆ ಮಾತನಾಡಿ ತನಿಖೆಗೆ ಸೂಚಿಸಿದ್ದೇನೆ. ಗೃಹಸಚಿವರು ಹಾಗೂ ಮುಖ್ಯಮಂತ್ರಿಯವರಿಗೂ ಮಾಹಿತಿ ನೀಡುವೆ’ ಎಂದು ಹೇಳಿದರು.

ಗೋಷ್ಠಿಗೆ ಬಂದಿದ್ದ ಮಹಿಳೆಯೊಬ್ಬರು ‘ಸುನಿಲ್ ಎಂಬಾತ ನನ್ನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ. ಇದನ್ನು ತಡೆಯಲು ಬಂದ ನನ್ನ ಪತಿಯ ಮೇಲೂ ಹಲ್ಲೆ ನಡೆಸಿದ. ರಾಮಕೃಷ್ಣ, ಶಾರದಮ್ಮ, ದೇವರಾಜ್, ಶ್ರುತಿ ಆತನಿಗೆ ಸಹಕರಿಸಿದರು. ಇವರ ವಿರುದ್ಧ ದೂರು ನೀಡಿದ್ದು, ಅವರು ಗ್ರಾಮವನ್ನು ತೊರೆದಿದ್ದಾರೆ’ ಎಂದು ತಿಳಿಸಿದರು

‘ಗ್ರಾಮದಲ್ಲಿ ಕೆಲವರು ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಪಂಚಾಯಿತಿ ಅಧ್ಯಕ್ಷರಿಗೆ ದೂರು ನೀಡಿದೆವು. ಇದರ ಪರಿಣಾಮ ನನ್ನ ಪತಿ
ಯನ್ನು ಕಂಬಕ್ಕೆ ಕಟ್ಟಿ ಹೊಡೆದರು. ನನ್ನ ಮೇಲೂ ಹಲ್ಲೆ ನಡೆಸಿದರು’ ಎಂದು ಮತ್ತೊಬ್ಬ ಮಹಿಳೆ ಹೇಳಿದರು.

‘ನೀವು (ಮಾಧ್ಯಮ) ತೊಂದರೆಗೆ ಒಳಗಾದವರ ಮನೆಗೆ ನೇರವಾಗಿ ಬಂದು ಅವರಿಗೆ ಧೈರ್ಯ ಕೊಟ್ಟರೆ ಅತ್ಯಾಚಾರ, ಹಲ್ಲೆ ನಡೆದಿರುವ ಬಗ್ಗೆ ಮತ್ತಷ್ಟು ಜನರು ಮಾಹಿತಿ ನೀಡುವರು’ ಎಂದರು ಗ್ರಾಮಸ್ಥ ಹನುಮಂತರಾಯಪ್ಪ.

ನೀವೇ ಮಾಹಿತಿ ಸಂಗ್ರಹಿಸಿ

‘ಅತ್ಯಾಚಾರ ನಡೆದಿರುವ ಬಗ್ಗೆ ಹಲವು ಮಹಿಳೆಯರು ನನ್ನ ಬಳಿ ಹೇಳಿಕೊಂಡಿದ್ದಾರೆ. ಆದರೆ ಲಿಖಿತವಾಗಿ ದೂರು ನೀಡಿಲ್ಲ. ದೌರ್ಜನ್ಯಕ್ಕೆ ಸಂಬಂಧಿಸಿದಂತೆ ತಾಲ್ಲೂಕಿನ ಐವರು ಮಹಿಳೆಯರು ದೂರು ನೀಡಿದ್ದಾರೆ’ ಎಂದು ನಾಗಲಕ್ಷ್ಮಿ ಬಾಯಿ ತಿಳಿಸಿದರು.

ಮಹಿಳೆಯರನ್ನು ದುಷ್ಕರ್ಮಿಗಳು ಎಲ್ಲಿಗೆ ಕರೆದುಕೊಂಡು ಹೋಗುತ್ತಿದ್ದಾರೆ, ಇವರನ್ನು ಬೆಂಬಲಿಸುತ್ತಿರುವ ಮಾಜಿ ಶಾಸಕರು ಯಾರು, ಅತ್ಯಾಚಾರ ನಡೆಸುತ್ತಿರುವವರು ಯಾರು ಎಂದು ಪ್ರಶ್ನಿಸಿದಾಗ, ‘ಈ ಬಗ್ಗೆ ನೀವೇ (ಮಾಧ್ಯಮ) ಮಾಹಿತಿ ಸಂಗ್ರಹಿಸಿ. ಇದು ನಿಮ್ಮ ಜವಾಬ್ದಾರಿ ಸಹ’ ಎಂದು ನಾಗಲಕ್ಷ್ಮಿ ಬಾಯಿ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.