ADVERTISEMENT

ನಿರಂತರವಾಗಿ ಕಾಡುತ್ತಿದ್ದ ಭಯ...

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2011, 19:30 IST
Last Updated 27 ಫೆಬ್ರುವರಿ 2011, 19:30 IST
ನಿರಂತರವಾಗಿ ಕಾಡುತ್ತಿದ್ದ ಭಯ...
ನಿರಂತರವಾಗಿ ಕಾಡುತ್ತಿದ್ದ ಭಯ...   

ನವದೆಹಲಿ (ಪಿಟಿಐ): ಕಳೆದ 14 ದಿನಗಳಿಂದ ಹೆಚ್ಚಿನ ಜನರು ನೀರು ಆಹಾರವಿಲ್ಲದೆ ಜೀವ ಸವೆಸಿದ್ದರು....
-ಅಂಶಾತಿ ಪೀಡಿತ ಲಿಬಿಯಾದಿಂದ ಸ್ವದೇಶಕ್ಕೆ ವಾಪಸ್ ಬಂದ ಭಾರತೀಯರು ಭಯ ಮಿಶ್ರಿತ, ಕಂಪಿಸುವ ಧ್ವನಿಯಲ್ಲಿ ಹೇಳಿದ ವಾಕ್ಯವಿದು.

ಫೆಬ್ರುವರಿ 14ರಂದು ಸರ್ವಾಧಿಕಾರಿ ಗಡಾಫಿ ಆಡಳಿತದ ವಿರುದ್ಧ ಆರಂಭಗೊಂಡ ಪ್ರತಿಭಟನೆಯಿಂದಾಗಿ ಮನೆಯಿಂದ ಹೊರಬರಲಾರದ ಸ್ಥಿತಿ ಉಂಟಾಗಿತ್ತು ಎಂದು ವಿಶೇಷ ಏರ್ ಇಂಡಿಯಾ ವಿಮಾನದಲ್ಲಿ ನವದೆಹಲಿಗೆ ಭಾನುವಾರ ಮುಂಜಾನೆ ಬಂದಿಳಿದ ಭಾರತೀಯರು ಅಲ್ಲಿ ಅನುಭವಿಸಿದ ಭಯಾನಕ ಸ್ಥಿತಿಯನ್ನು ಕಿಕ್ಕಿರಿದು ಸೇರಿದ್ದ ಮಾಧ್ಯಮ ಮಂದಿಯ ಜೊತೆ ಹಂಚಿಕೊಂಡರು.

ಸ್ವದೇಶಕ್ಕೆ ಮರಳಿದ ಬಳಿಕವೂ ಅವರ  ಮುಖದಲ್ಲಿ ಆವರಿಸಿದ್ದ ಭಯದ ಛಾಯೆ   ಮಾಸಿರಲಿಲ್ಲ.  ‘ಫ್ರತಿಭಟನೆ ಆರಂಭಗೊಂಡಾಗಿನಿಂದ ಲಿಬಿಯಾದಲ್ಲಿ ಪರಿಸ್ಥಿತಿ ಬಿಗಡಾಯಿಸಿತು. ಜನರು ಜೀವಭಯದಿಂದ ನರಳಲು ಆರಂಭಿಸಿದರು. ನಾನು ಹಾಗೂ ಇನ್ನಿತರ ಭಾರತೀಯರು ಎರಡು ದಿನಗಳ ಕಾಲ ಶಿಬಿರವೊಂದರಲ್ಲಿ ಸಿಕ್ಕಿಹಾಕಿಕೊಂಡೆವು. ಕೆಲವರು ಲ್ಯಾಪ್‌ಟಾಪ್, ಫೋನ್ ಸೇರಿದಂತೆ ನಮ್ಮಲ್ಲಿದ್ದ ಬೆಲೆಬಾಳುವ ವಸ್ತುಗಳನ್ನು ಲೂಟಿ ಮಾಡಿದರು’ ಎಂದು 31 ವರ್ಷಗಳಿಂದ ಲಿಬಿಯಾದಲ್ಲಿ ನೆಲೆಸಿರುವ ಕೇರಳ ಮೂಲದ ಮೊಹಮ್ಮದ್ ಸಲಿ ಹೇಳಿದರು.

 ‘ದಂಗೆ ಆರಂಭಗೊಂಡ ನಂತರ ಅಲ್ಲಿ ಕಾನೂನು ಸುವ್ಯವಸ್ಥೆ ಇರಲಿಲ್ಲ. ಟ್ರಿಪೊಲಿಯಲ್ಲಿರುವ ಹೆಚ್ಚಿನ ಪೊಲೀಸ್ ಠಾಣೆಗಳನ್ನು ಪ್ರತಿಭಟನಾಕಾರರು ಸುಟ್ಟುಹಾಕಿದ್ದರು’ ಎಂದು ಅವರು ಹೇಳಿದರು.

ಪ್ರತಿಭಟನೆ ನಡೆಯುತ್ತಿದ್ದರೂ ತಮಗೆ ಆಶ್ರಯ ನೀಡಿದ ಕೆಲವು ಲಿಬಿಯಾ ನಾಗರಿಕರಿಗೆ ಅವರು ಇದೇ ಸಂದರ್ಭದಲ್ಲಿ ಕೃತಜ್ಞತೆ ಸಲ್ಲಿಸಿದರು.

ಲಿಬಿಯಾದಲ್ಲಿ ಪರಿಸ್ಥಿತಿ ಸಾಮಾನ್ಯ ಸ್ಥಿತಿಗೆ ಮರಳಿದರೂ ಇನ್ನೆಂದೂ ಅಲ್ಲಿಗೆ ಮರಳುವುದಿಲ್ಲ ಎಂದು ಕಟ್ಟಡ ನಿರ್ಮಾಣ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಕರ್ಮವೀರ ಎಂಬುವವರು ಹೇಳಿದರು.

 ‘ಅಲ್ಲಿನ ಪರಿಸ್ಥಿತಿ ಚಿಂತಾಜನಕವಾಗಿದೆ. ಜನರು ಕಳ್ಳತನ ಮಾಡುತ್ತಿದ್ದಾರೆ. ಕೊಲೆಯನ್ನೂ ಮಾಡುತ್ತಿದ್ದಾರೆ. ಅಲ್ಲಿ ಪೊಲೀಸರು ಇಲ್ಲ. ಸುರಕ್ಷತೆ ಇಲ್ಲವೇ ಇಲ್ಲ’ ಎಂದು ಭಯಮಿಶ್ರಿತ ಧ್ವನಿಯಲ್ಲಿ ಕರ್ಮವೀರ ಲಿಬಿಯಾದ ಪರಿಸ್ಥಿತಿ ವಿವರಿಸಿದರು.

ಕಳೆದ ಕೆಲವು ವರ್ಷಗಳಿಂದ ಲಿಬಿಯಾದಲ್ಲಿ ನಲೆಸಿರುವ ಡಾ.ನವ್‌ಬೀರ್, ‘ಜನರು ದಂಗೆ ಏಳುವವರೆಗೆ ಆ ದೇಶದಲ್ಲಿ ಅಸುರಕ್ಷತೆ ನನಗೆ ಕಾಡಿರಲಿಲ್ಲ. ನಾನು ವಿದೇಶಿ ನೆಲದಲ್ಲಿದ್ದೇನೆ, ಎಂದು ಎಂದಿಗೂ ಅನಿಸಿರಲಿಲ್ಲ. ನಾನು ವಿಮಾನಕ್ಕೆ ಹತ್ತುವಾಗಲೂ ಅಲ್ಲಿದ್ದವರು ಹೋಗಬೇಡ ಎಂದು ಹೇಳಿದ್ದರು’ ಎಂದು ಹೇಳಿದರು.

ಉತ್ತರ ಪ್ರದೇಶ ಮೂಲದ ಮೊಬಿನ್ ಖುರೇಶಿ ಅವರ ಕಥೆ ಸ್ವಲ್ವ ಭಿನ್ನವಾಗಿದೆ.  ‘ನಮಗೆ ಸಹಾಯ ಮಾಡುವ ಒಬ್ಬರು ಅಲ್ಲಿರಲಿಲ್ಲ. ಎಲ್ಲಾ ಮನೆಗಳನ್ನು ಸುಟ್ಟು ಹಾಕಲಾಗಿತ್ತು. ನಾವು ಆಹಾರ ಇಲ್ಲದೆ ದಿನಗಳನ್ನು ಕಳೆದೆವು. ಕಾರ್ಮಿಕರ ಶಿಬಿರಲ್ಲಿರುವ ಭಾರತೀಯರ ಪರಿಸ್ಥಿತಿಯಂತೂ ಚಿಂತಾಜನಕವಾಗಿದೆ’ ಎಂದು ಹೇಳಿದರು.

 ಲಿಬಿಯಾದ ಆಸ್ಪತ್ರೆಯೊಂದರಲ್ಲಿ ಕಾರ್ಯನಿರ್ವಹಿಸುವ ಹೈದರಾಬಾದ್ ಮೂಲದ ಸಜ್ಜನ್ ಲಾಲ್ ‘ಮುಅಮ್ಮರ್ ಗಡಾಫಿ ಒಬ್ಬ ಉತ್ತಮ ವ್ಯಕ್ತಿ’ ಎಂದು ಹೊಗಳಿದರು.

ಅಲ್ಲಿನ ಪೊಲೀಸರು ನಮಗೆ ಭದ್ರತೆ ನೀಡುವ ಬದಲು ನಮ್ಮಲ್ಲಿರುವ ವಸ್ತುಗಳನ್ನೇ ದೋಚಿದರು ಎಂದು ಇನ್ನು ಕೆಲವರು ಆರೋಪಿಸಿದರು.

ಭಾರತೀಯರನ್ನು ಕರೆಸಿಕೊಳ್ಳಲು ಹೆಚ್ಚು ವಿಮಾನಗಳು
ಕೊಚ್ಚಿ (ಪಿಟಿಐ):
ಅಶಾಂತಿ ಪೀಡಿತ ಲಿಬಿಯಾದಲ್ಲಿರುವ ಭಾರತೀಯರನ್ನು ವಾಪಸ್ ತವರಿಗೆ ಕರೆತರಲು ಇನ್ನೂ ಹೆಚ್ಚು ಏರ್ ಇಂಡಿಯಾ ವಿಮಾನಗಳನ್ನು ಕಳುಹಿಸಲಾಗುವುದು ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ವಯಲಾರ್ ರವಿ ಭಾನುವಾರ ಹೇಳಿದ್ದಾರೆ.

ಈಗಾಗಲೇ ಎರಡು ವಿಮಾನಗಳು ಲಿಬಿಯಾದಿಂದ ಭಾರತೀಯರನ್ನು ಕರೆ ತಂದಿವೆ. ಅಗತ್ಯಕ್ಕೆ ತಕ್ಕಂತೆ ಹೆಚ್ಚು ವಿಮಾನಗಳನ್ನು ಕಳುಹಿಸಲಾಗುವುದು ಎಂದು ಅವರು ಕೊಚ್ಚಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು. ಲಿಬಿಯಾದಲ್ಲಿ ಸುಮಾರು 18000 ಭಾರತೀಯರು ವಾಸವಾಗಿದ್ದಾರೆ ಎಂದು ಸಚಿವರು ಹೇಳಿದರು.

ಲಿಬಿಯಾದಿಂದ ಭಾರತೀಯರನ್ನು ಕರೆತರುವ ಕಾರ್ಯವನ್ನು ಕೇಂದ್ರ ಸರ್ಕಾರ ಶನಿವಾರ ಆರಂಭಿಸಿದ್ದು, ಏರ್ ಇಂಡಿಯಾದ ಎರಡು ವಿಶೇಷ ವಿಮಾನಗಳು 530 ಜನರನ್ನು ಸ್ವದೇಶಕ್ಕೆ ಕರೆ ತಂದಿವೆ. 88 ಜನರು ಭೂ ಮಾರ್ಗದ ಮೂಲಕ ಟ್ಯುನೀಷಿಯಾಗೆ ತೆರಳಿದ್ದಾರೆ.

291 ಭಾರತೀಯರಿದ್ದ ವಿಮಾನವೊಂದು ಶನಿವಾರ ರಾತ್ರಿ ನವದೆಹಲಿಗೆ ಬಂದಿಳಿದಿದ್ದು, 235 ಜನರಿದ್ದ ಮತ್ತೊಂದು ವಿಮಾನ ಭಾನುವಾರ ಮುಂಜಾನೆ ನವದೆಹಲಿಯ ಅಂತರರಾಷ್ಟ್ರೀಯ ವಿಮಾನಕ್ಕೆ ಬಂದಿಳಿದಿದೆ. ಮುಂಬೈ ವರದಿ: ಈ ಮಧ್ಯೆ, ಇನ್ನೂ ಎರಡು ವಿಮಾನಗಳನ್ನು ಮುಂಬೈ ಮತ್ತು ದೆಹಲಿಯಿಂದ ಟ್ರಿಪೋಲಿಗೆ ಕಳುಹಿಸುವುದಾಗಿ ಏರ್ ಇಂಡಿಯಾದ ಅಧಿಕಾರಿಗಳು ತಿಳಿಸಿದ್ದಾರೆ.

ಭಾರತೀಯರಿಗೆ ನೆರವು- ಕೃಷ್ಣ
ಕುವೈತ್ (ಐಎಎನ್‌ಎಸ್):
ಲಿಬಿಯಾವನ್ನು ತೊರೆಯಬೇಕೆಂದಿರುವ ಭಾರತೀಯರಿಗೆ ಅಗತ್ಯವಾದ ಎಲ್ಲಾ ನೆರವು ಒದಗಿಸುವುದು ಸರ್ಕಾರದ ಮುಖ್ಯ ಕಾಳಜಿಯಾಗಿದೆ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಎಂ. ಕೃಷ್ಣ ಭಾನುವಾರ ಇಲ್ಲಿ ಹೇಳಿದ್ದಾರೆ.

‘ಸಮಸ್ಯೆ ಶೀಘ್ರ ಪರಿಹರವಾಗಲಿದೆ ಎಂದು ನಾನು ನಂಬಿದ್ದೇನೆ. ಭಾರತಕ್ಕೆ ಮರಳಲು ಬಯಸುವವರಿಗೆ ನೆರವು ನೀಡುವುದು ನಮ್ಮ ತಕ್ಷಣದ ಗುರಿ’ ಎಂದು ಅವರು ಕುವೈತ್‌ನ ಎರಡು ದಿನಗಳ ಪ್ರವಾಸ ಪೂರ್ಣಗೊಳಿಸಿ ಹಿಂತಿರುಗುವ ವೇಳೆ ವರದಿಗಾರರಿಗೆ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.