ಭುವನೇಶ್ವರ (ಐಎಎನ್‌ಎಸ್): ಎರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದ ಇಲ್ಲಿನ ಜನಜೀವನ ಅಸ್ತವ್ಯಸ್ತಗೊಂಡಿದೆ ಮತ್ತು ಕೆಲವು ಭಾಗಗಳಲ್ಲಿ ಬತ್ತದ ಬೆಳೆಗೆ ಹಾನಿಯುಂಟಾಗಿದೆ ಎಂದು ಹವಾಮಾನ ಇಲಾಖೆ ಶನಿವಾರ ತಿಳಿಸಿದೆ.
ಬಂಗಾಳ ಕೊಲ್ಲಿಯಲ್ಲಿ ಕಂಡುಬಂದ `ನೀಲಂ~ ಚಂಡಮಾರುತಕ್ಕೆ ಒಡಿಶಾದ ಹಲವು ಭಾಗಗಳು ಸಾಕ್ಷಿಯಾಗಿವೆ. ಚಂಡಮಾರುತ ದುರ್ಬಲಗೊಂಡಿದ್ದರೂ ಇಲ್ಲಿನ ಕೆಲ ಪ್ರದೇಶಗಳಲ್ಲಿ ಮಳೆ ನಿರಂತರವಾಗಿ ಸುರಿಯುತ್ತಿದೆ ಎಂದು ಭುವನೇಶ್ವರ ಹವಾಮಾನ ಕೇಂದ್ರದ ನಿರ್ದೇಶಕ ಎಸ್. ಸಿ. ಸಾಹು ಹೇಳಿದ್ದಾರೆ.
ಒಡಿಶಾದಲ್ಲಿ ಅತಿ ಹೆಚ್ಚಿನ ಮಳೆಯ ಪ್ರಮಾಣವು ಬಂದರು ನಗರಿ ಗೋಪಾಲಪುರದಲ್ಲಿ (123 ಮಿ.ಮೀ.) ದಾಖಲಾಗಿದ್ದು, ಪುರಿ ಮತ್ತು ಬೆಹರಾಂಪುರ್‌ದಲ್ಲಿ ಕ್ರಮವಾಗಿ 116.8 ಮತ್ತು 82 ಮಿ.ಮೀ, ಭುವನೇಶ್ವರದಲ್ಲಿ 88 ಮಿ.ಮೀ. ಮಳೆ ದಾಖಲಾಗಿದೆ.
ಕರಾವಳಿಯಲ್ಲಿ ಬತ್ತದ ಬೆಳೆಗೆ ಹಾನಿಯಾಗಿದೆ ಎಂದು ಕೃಷಿ ಇಲಾಖೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.