ADVERTISEMENT

ನೊಯಿಡಾ ಭೂಸ್ವಾಧೀನ ಪ್ರಕರಣ: 3 ಗ್ರಾಮಗಳಲ್ಲಿ ಅಧಿಸೂಚನೆ ರದ್ದು

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2011, 19:30 IST
Last Updated 21 ಅಕ್ಟೋಬರ್ 2011, 19:30 IST

ಅಲಹಾಬಾದ್ (ಪಿಟಿಐ): ಗೌತಮ ಬುದ್ಧ ನಗರ ಜಿಲ್ಲೆಯ ಮೂರು ಗ್ರಾಮಗಳಲ್ಲಿ ಭೂ ಸ್ವಾಧೀನದ ಅಧಿಸೂಚನೆಯನ್ನು ಅಲಹಾಬಾದ್ ಹೈಕೋರ್ಟ್ ಶುಕ್ರವಾರ ರದ್ದುಗೊಳಿಸಿದೆ.

ಅಲ್ಲದೆ ಇತರ ಗ್ರಾಮಗಳಲ್ಲಿ ಇದೇ ರೀತಿ ತೊಂದರೆಗೊಳಗಾಗಿರುವ ರೈತರಿಗೆ ಹೆಚ್ಚುವರಿ ಪರಿಹಾರ ನೀಡಬೇಕು ಎಂದೂ ಆದೇಶಿಸಿದೆ.

ಗ್ರೇಟರ್ ನೊಯಿಡಾ ಮತ್ತು ನೊಯಿಡಾ ವಿಸ್ತರಣಾ ಪ್ರದೇಶಗಳ ಅಭಿವೃದ್ಧಿಗಾಗಿ ಭೂ ಸ್ವಾಧೀನ ಮಾಡಿಕೊಂಡ ಉತ್ತರಪ್ರದೇಶ ಸರ್ಕಾರದ ನೀತಿಯನ್ನು ಪ್ರಶ್ನಿಸಿದ ಕೋರ್ಟ್ `ಭೂಮಿ ಬಳಕೆಯ ಬದಲಾವಣೆ~ ಕುರಿತು ತನಿಖೆ ನಡೆಸಬೇಕು ಎಂದು ರಾಜ್ಯದ ಮುಖ್ಯ ಕಾರ್ಯದರ್ಶಿಗೆ ನಿರ್ದೇಶನ ನೀಡಿದೆ.

ADVERTISEMENT

ಸಂಬಂಧಿಸಿದ ಯೋಜನಾ ಮಂಡಳಿಯಿಂದ ಅನುಮತಿ ಪಡೆಯದೆ ಮತ್ತ್ಯಾವುದೇ ಕಟ್ಟಡ ಕಾಮಗಾರಿ ಕೈಗೊಳ್ಳಬಾರದು ಎಂದೂ ಅಧಿಕಾರಿಗಳಿಗೆ ಸೂಚಿಸಿದೆ.

ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಎಸ್.ಯು. ಖಾನ್ ಮತ್ತು ವಿ.ಕೆ. ಶುಕ್ಲ  ಅವರನ್ನು ಒಳಗೊಂಡ ಮೂವರು ನ್ಯಾಯಮೂರ್ತಿಗಳ ಪೀಠವು ಈ ತೀರ್ಪನ್ನು ನೀಡಿದೆ.

ಪೀಠವು ಒಟ್ಟು 491 ಅರ್ಜಿಗಳ ಕುರಿತ ಆದೇಶವನ್ನು ಈ ಹಿಂದೆ ಕಾಯ್ದಿರಿಸಿತ್ತು.

ಅಸ್ದುಲ್ಲಾಪುರ್, ಯೂಸೂಫ್‌ಪುರ್ ಚಕ್ ಶಬೇರಿ ಮತ್ತು ದೆವ್ಲಾ ಗ್ರಾಮಗಳ ರೈತರ ಅರ್ಜಿಗಳನ್ನು ಅಂಗೀಕರಿಸಿದ ಕೋರ್ಟ್ ಈ ಗ್ರಾಮಗಳಲ್ಲಿ ಭೂ ಸ್ವಾಧೀನ ಪಡಿಸಿಕೊಂಡಿರುವ ಪ್ರಕಟಣೆಗಳನ್ನು ರದ್ದುಗೊಳಿಸಲಾಗಿದೆ. ಅರ್ಜಿದಾರರು ತಮ್ಮ ಭೂಮಿಯನ್ನು ಪುನರ್ ವಶಕ್ಕೆ ಪಡೆಯಬಹುದು. ಇದಕ್ಕೆ ಮೊದಲು ಒಪ್ಪಂದದಂತೆ ತಾವು ಪಡೆದ ಭೂ ಪರಿಹಾರದ ಹಣವನ್ನು ಜಿಲ್ಲಾಧಿಕಾರಿ ಅವರಿಗೆ ಹಿಂತಿರುಗಿಸಬೇಕು ಎಂದು ಹೇಳಿದೆ.

ಇತರ ಗ್ರಾಮಗಳ ರೈತರು `ಹೆಚ್ಚುವರಿ ಪರಿಹಾರ ಹಣ ಪಡೆಯಲು ಅರ್ಹರಾಗಿರುತ್ತಾರೆ~ ಈ ಮೊತ್ತವು ಈ ಮೊದಲು ಪಡೆದ ಪರಿಹಾರದ ಶೇಕಡಾ 64.70ರವರೆಗೆ ಇರಬಹುದು. ನೊಯಿಡಾ/ ಗ್ರೇಟರ್ ನೊಯಿಡಾದವರು ಆದಷ್ಟು ಬೇಗ ಈ  ಪರಿಹಾರ ಒದಗಿಸಬೇಕು ಎಂದು ಕೋರ್ಟ್ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.