ADVERTISEMENT

ನೌಕಾನೆಲೆ ಬಳಸಿಕೊಳ್ಳಲು ಒಪ್ಪಿಗೆ

14 ಮಹತ್ವದ ಒಪ್ಪಂದಗಳಿಗೆ ಭಾರತ ಮತ್ತು ಫ್ರಾನ್ಸ್‌ ಸಹಿ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2018, 20:08 IST
Last Updated 10 ಮಾರ್ಚ್ 2018, 20:08 IST
ನವದೆಹಲಿಯ ಹೈದರಾಬಾದ್‌ ಹೌಸ್‌ನಲ್ಲಿ ಸಭೆ ಆರಂಭಕ್ಕೂ ಮುನ್ನ ಹಸ್ತಲಾಘವ ಮಾಡಿದ ಫ್ರಾನ್ಸ್‌ ಅಧ್ಯಕ್ಷ ಇಮ್ಯಾನ್ಯುವೆಲ್‌ ಮ್ಯಾಕ್ರೋನ್‌ ಮತ್ತು ಪ್ರಧಾನಿ ಮೋದಿ
ನವದೆಹಲಿಯ ಹೈದರಾಬಾದ್‌ ಹೌಸ್‌ನಲ್ಲಿ ಸಭೆ ಆರಂಭಕ್ಕೂ ಮುನ್ನ ಹಸ್ತಲಾಘವ ಮಾಡಿದ ಫ್ರಾನ್ಸ್‌ ಅಧ್ಯಕ್ಷ ಇಮ್ಯಾನ್ಯುವೆಲ್‌ ಮ್ಯಾಕ್ರೋನ್‌ ಮತ್ತು ಪ್ರಧಾನಿ ಮೋದಿ   

ನವದೆಹಲಿ: ರಕ್ಷಣೆ ಮತ್ತು ಪರಮಾಣು ಶಕ್ತಿ ಕ್ಷೇತ್ರದಲ್ಲಿ ಸಹಕಾರ ಸೇರಿದಂತೆ ಭಾರತ ಮತ್ತು ಫ್ರಾನ್ಸ್‌ 14 ಮಹತ್ವದ ಒಪ್ಪಂದಗಳಿಗೆ ಶನಿವಾರ ಸಹಿ ಹಾಕಿವೆ.

ಯುದ್ಧನೌಕೆಗಳಿಗೆ ನೌಕಾನೆಲೆಗಳನ್ನು ಮುಕ್ತವಾಗಿ ಬಳಸಿಕೊಳ್ಳಲು ಎರಡೂ ರಾಷ್ಟ್ರಗಳು ಒಪ್ಪಿಗೆ ಸೂಚಿಸಿರುವುದು ಮಹತ್ವದ ಬೆಳವಣಿಗೆಯಾಗಿದೆ.

ಸಾಗರದಲ್ಲಿ ಹೆಚ್ಚುತ್ತಿರುವ ಚೀನಾದ ಸೇನಾ ಪ್ರಾಬಲ್ಯ ಮತ್ತು ನೆಲೆ ವಿಸ್ತರಣೆ ಗಮನದಲ್ಲಿಟ್ಟುಕೊಂಡು ಭಾರತ ಮತ್ತು ಫ್ರಾನ್ಸ್‌ ಈ ಒಪ್ಪಂದಗಳಿಗೆ ಸಹಿ ಹಾಕಿವೆ ಎಂದು ವಿಶ್ಲೇಷಿಸಲಾಗಿದೆ.

ADVERTISEMENT

ಭಯೋತ್ಪಾದನೆ ವಿರುದ್ಧ ಜಂಟಿ ಸಮರ
ಫ್ರಾನ್ಸ್‌ ಅಧ್ಯಕ್ಷ ಇಮ್ಯಾನ್ಯುವೆಲ್‌ ಮ್ಯಾಕ್ರೋನ್‌ ಮತ್ತು ಪ್ರಧಾನಿ ಮೋದಿ ಸಮ್ಮುಖದಲ್ಲಿ ಎರಡೂ ರಾಷ್ಟ್ರಗಳ ನಿಯೋಗಗಳು, ಬಾಹ್ಯಾಕಾಶ, ಪರಿಸರ, ರೈಲ್ವೆ, ನಗರಾಭಿವೃದ್ಧಿ, ಶಿಕ್ಷಣ ಕ್ಷೇತ್ರಗಳ ಒಪ್ಪಂದಗಳಿಗೆ ಅಂಕಿತ ಹಾಕಿದವು.

ದ್ವಿಪಕ್ಷೀಯ ಮಾತುಕತೆಯ ಬಳಿಕ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮ್ಯಾಕ್ರೋನ್ ಮತ್ತು  ಮೋದಿ, ಭಯೋತ್ಪಾದನೆ ಮತ್ತು ತೀವ್ರವಾದದ ವಿರುದ್ಧ ಜಂಟಿ ಸಮರ ಸಾರಿದರು.

ಮುಂಬರುವ ದಿನಗಳಲ್ಲಿ ಹಿಂದೂ ಮಹಾಸಾಗರ ಪ್ರದೇಶವು ಜಾಗತಿಕ ಶಾಂತಿ, ಸ್ಥಿರತೆ, ಸಾಮರಸ್ಯ ಮತ್ತು ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಈ ನಾಯಕರು ಆಶಯ ವ್ಯಕ್ತಪಡಿಸಿದರು.

ದಕ್ಷಿಣ ಚೀನಾ ಸಾಗರದಲ್ಲಿ ಹೆಚ್ಚಿರುವ ಚೀನಾ ಸೇನೆಯ ಚಟುವಟಿಕೆಗಳ ಹಿನ್ನೆಲೆಯಲ್ಲಿ ಭಾರತ–ಫ್ರಾನ್ಸ್‌ ರಕ್ಷಣಾ ಒಪ್ಪಂದ ಭಾರಿ ಮಹತ್ವ ಪಡೆದುಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.