ADVERTISEMENT

ನ್ಯಾಯಾಧೀಶೆ ವಜಾ; ತೀರ್ಪು ಎತ್ತಿಹಿಡಿದ ಸುಪ್ರೀಂ

​ಪ್ರಜಾವಾಣಿ ವಾರ್ತೆ
Published 16 ಜನವರಿ 2011, 19:30 IST
Last Updated 16 ಜನವರಿ 2011, 19:30 IST

ನವದೆಹಲಿ (ಪಿಟಿಐ): ರೈಲಿನಲ್ಲಿ ಟಿಕೆಟ್ ಪಡೆಯದೆ ಮೂರು ಬಾರಿ ಪ್ರಯಾಣಿಸಿದ್ದಕ್ಕಾಗಿ ನ್ಯಾಯಾಧೀಶೆಯೊಬ್ಬರನ್ನು ಸೇವೆಯಿಂದ ವಜಾಗೊಳಿಸಿದ್ದ ಕ್ರಮವನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿದೆ.

ಎಂ.ಶರ್ಮ ಮತ್ತು ಎ.ಆರ್.ದವೆ ಅವರನ್ನು ಒಳಗೊಂಡ ಪೀಠ ಈ ತೀರ್ಪು ನೀಡುವ ಮೂಲಕ ಬಾಂಬೆ ಹೈಕೋರ್ಟ್ ಈ ಮುನ್ನ ನೀಡಿದ್ದ ಕಡ್ಡಾಯ ನಿವೃತ್ತಿ ಆದೇಶವನ್ನು ಎತ್ತಿಹಿಡಿಯಿತು.

‘ನ್ಯಾಯಾಧೀಶ ಹುದ್ದೆ ಸಾರ್ವಜನಿಕರು ಅಪಾರ ನಂಬಿಕೆ ಇರಿಸಿರುವ ಹುದ್ದೆಯಾಗಿದೆ. ಆ ಸ್ಥಾನದಲ್ಲಿರುವ ಅದಕ್ಕೆ ತಕ್ಕಂತೆ ನಡೆದುಕೊಳ್ಳಬೇಕು. ಕಾನೂನಿಗಿಂತ ಅವರೂ ಹೆಚ್ಚಲ್ಲ’ ಎಂದು ಪೀಠ ಹೇಳಿತು.

ಈ ಪ್ರಕರಣದಲ್ಲಿ ನ್ಯಾಯಾಧೀಶೆ ಮೂರು ಬಾರಿ ಟಿಕೆಟ್ ಇಲ್ಲದೆ ಪ್ರಯಾಣಿಸಿದ್ದು ಮಾತ್ರವಲ್ಲ, ತನ್ನ ಕರ್ತವ್ಯ ಪಾಲಿಸಿದ ಟಿಕೆಟ್ ಸಂಗ್ರಾಹಕನ ವಿರುದ್ಧವೇ ದೂರು ನೀಡಿದ್ದಾರೆ. ರೈಲ್ವೆ ಅಧಿಕಾರಿಗಳೊಂದಿಗೂ ಅಸಭ್ಯವಾಗಿ ವರ್ತಿಸಿದ್ದಾರೆ. ಹೀಗಾಗಿ ಅವರನ್ನು ವಜಾ ಮಾಡಿರುವುದು ಸೂಕ್ತ ಎಂದು ಪೀಠ ಹೇಳಿತು.

ತಾವು ಮಾಡಿದ ತಪ್ಪಿಗೆ ಹೋಲಿಸಿದರೆ ನೀಡಿರುವ ಶಿಕ್ಷೆ ಕಠಿಣವಾಗಿದೆ ಎಂದು ಅರುಂಧತಿ ಅಶೋಕ್ ವಾಲ್ವಾಲ್ಕರ್ ಮೇಲ್ಮನವಿ ಸಲ್ಲಿಸಿದ್ದರು.

ಅರುಂಧತಿ 1997ರ ಫೆ.21, 1997ರ ಮೇ 13 ಹಾಗೂ 1997ರ ಡಿ.5ರಂದು ಟಿಕೆಟ್ ಇಲ್ಲದೇ ಪ್ರಯಾಣಿಸುವಾಗ ಸಿಕ್ಕಿಬಿದ್ದಿದ್ದರು.  ನ್ಯಾಯಾಧೀಶೆಯಾದ ತಾವು ‘ಏನನ್ನು ಬೇಕಾದರೂ ಮಾಡಬಹುದು’ ಎಂದು ರೈಲ್ವೆ ಸಿಬ್ಬಂದಿಗೆ ಬೆದರಿಕೆಯನ್ನೂ ಹಾಕಿದ್ದರು. ಆನಂತರ ಅವರನ್ನು 2000ನೇ ವರ್ಷದ ಸೆ.27ರಂದು ಸೇವೆಯಿಂದ ವಜಾ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.