ADVERTISEMENT

ನ್ಯಾಯಾಲಯಕ್ಕೆ ಅವಮಾನ: ಕಾಂಗ್ರೆಸ್ ಸಂಸದನ ವಿರುದ್ಧ ಪ್ರಕರಣ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2011, 10:35 IST
Last Updated 15 ಫೆಬ್ರುವರಿ 2011, 10:35 IST

ತಿರುವನಂತಪುರ (ಪಿಟಿಐ): ವರ್ಷಗಳ ಹಿಂದೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿಯೊಬ್ಬರು ಲಂಚ ಪಡೆದುದಕ್ಕೆ ತಾನು ಸಾಕ್ಷಿ ಎಂಬುದಾಗಿ ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕಾಗಿ ಕಾಂಗ್ರಸ್ ಸಂಸತ್ ಸದಸ್ಯ ಕೆ. ಸುಧಾಕರನ್ ಅವರ ವಿರುದ್ಧ ಪೊಲೀಸರು ಮಂಗಳವಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಣ್ಣೂರು ಲೋಕಸಭಾ ಕ್ಷೇತ್ರದ ಹಾಲಿ ಸದಸ್ಯ, ಮಾಜಿ ರಾಜ್ಯ ಸಚಿವ ಸುಧಾಕರನ್ ವಿರುದ್ಧ ಸ್ಥಳೀಯ ವಕೀಲರ ವೇದಿಕೆ ಸಲ್ಲಿಸಿದ ದೂರನ್ನು ಆಧರಿಸಿ ಮ್ಯೂಸಿಯಂ  ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಕೆಲವು ದಿನಗಳ ಹಿಂದೆ ಸಾರ್ವಜನಿಕ ಸಭೆಯೊಂದರಲ್ಲಿ ಸುಧಾಕರನ್ ಅವರು ಮಾಡಿದ ಭಾಷಣ ನ್ಯಾಯಾಲಯಕ್ಕೆ ಮಾಡಿದ ಅವಮಾನಕ್ಕೆ ಸರಿಸಮವಾಗಿದೆ ಎಂದು ವಕೀಲರ ವೇದಿಕೆ ಆಪಾದಿಸಿದೆ.

ಅಪರಾಧಗಳನ್ನು ಬಚ್ಚಿಡಲು ತಪ್ಪು ಘೋಷಣೆಯನ್ನು ನಿಜ ಎಂಬಂತೆ ಬಿಂಬಿಸಿದ್ದಕ್ಕಾಗಿ ಭಾರತೀಯ ದಂಡ ಸಂಹಿತೆಯ 120ರಿಂದ 200ರವರೆಗಿನ ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಕಳೆದ ಶನಿವಾರ ಕೊಲ್ಲಂ ಜಿಲ್ಲೆಯ ಕೊಟ್ಟಾರಕ್ಕರದಲ್ಲಿ  ಮಾಡಲಾದ ಸುಧಾಕರನ್ ಅವರ ಭಾಷಣ ರಾಜಕೀಯ ಮತ್ತು ಕಾನೂನು ವರ್ತುಲಗಳಲ್ಲಿ ವಿವಾದದ ಕಿಡಿ ಹಾರಿಸಿದೆ.

ಕಾಂಗ್ರೆಸ್ ಪಕ್ಷವು ಸುಧಾಕರನ್ ಅವರು ನ್ಯಾಯಾಂಗದ ವಿರುದ್ಧ ನೀಡಿರುವ ಹೇಳಿಕೆಯಿಂದ ದೂರ ಸರಿದಿದೆ. ನ್ಯಾಯಾಂಗದ ವಿಶ್ವಾಸಾರ್ಹತೆಗೆ ಧಕ್ಕೆ ಉಂಟು ಮಾಡುವಂತಹ ಯಾವುದೇ ಹೇಳಿಕೆಯನ್ನು ತಾನು ವಿರೋಧಿಸುವುದಾಗಿ ಕಾಂಗ್ರೆಸ್ ಹೇಳಿದೆ.

 ಕೇರಳ ಕಾಂಗ್ರೆಸ್ (ಬಿ) ನಾಯಕ ಆರ್. ಬಾಲಕೃಷ್ಣನ್ ಪಿಳ್ಳೈ ಬೆಂಬಲಿಗರು ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡುತ್ತಾ ನ್ಯಾಯಮೂರ್ತಿಯ ಹೆಸರು ಹೇಳದೆಯೇ ಸುಧಾಕರನ್ ಅವರು ಈ ಆಪಾದನೆ ಮಾಡಿದ್ದರು. ಬಾಲಕೃಷ್ಣ ಪಿಳ್ಳೈ ಅವರಿಗೆ ಸುಪ್ರೀಂ ಕೋರ್ಟ್ ಇತ್ತೀಚೆಗೆ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ವರ್ಷದ ಸೆರೆವಾಸವನ್ನು ವಿಧಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.